ಸಾರಾಂಶ
ಚಿಂತಾಮಣಿ: ರಾಜ್ಯ ಸರ್ಕಾರಿ ನಿವೃತ್ತ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಏಪ್ರಿಲ್ ೪ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಘದ ರಾಜ್ಯ ಸಮಿತಿ ವತಿಯಿಂದ ಬೃಹತ್ ಸಮಾವೇಶವನ್ನು ಏರ್ಪಡಿಸಲಾಗಿದೆಯೆಂದು ಚಿಂತಾಮಣಿ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ತಿಳಿಸಿದರು. ಸರ್ಕಾರಿ ನೌಕರರ ಭವನದಲ್ಲಿ ನಡೆದ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ಮಾತನಾಡಿ, ನಿವೃತ್ತ ನೌಕರರ ಪ್ರಮುಖ ಬೇಡಿಕೆಗಳಾದ ಆರೋಗ್ಯ ಭಾಗ್ಯ, ಸಂಧ್ಯಾ ಕಿರಣ ಯೋಜನೆ, ೭೦ ವರ್ಷ, ೭೫ ವರ್ಷಗಳ ನಿವೃತ್ತ ನೌಕರರಿಗೆ ಶೇಕಡ ೧೦ ಮತ್ತು ಶೇಕಡ ೧೫ರಷ್ಟು ವೇತನ ಹೆಚ್ಚಿಸುವುದು ಹಾಗೂ ನಿವೃತ್ತರು ನಿಧನ ಹೊಂದಿದಾಗ ಅವರ ಶವ ಸಂಸ್ಕಾರಕ್ಕೆ ೧೦ ಸಾವಿರ ರು.ಗಳನ್ನು ನೀಡುವುದು ಮುಂತಾದ ಬೇಡಿಕೆಗಳ ಬಗ್ಗೆ ಸಮಾವೇಶದಲ್ಲಿ ಒತ್ತಾಯಿಸಲಾಗುವುದೆಂದರು. ಈ ವೇಳೆ ಇಬ್ಬರು ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಮಹಿಳಾ ಪರ ಚಿಂತಕಿ ಹಾಗೂ ನಿವೃತ್ತ ಪ್ರಾಂಶುಪಾಲರಾದ ಅಶ್ವತಮ್ಮ, ಸಂಘದ ಉಪಾಧ್ಯಕ್ಷ ಎ.ಎಸ್.ಚಂದ್ರಮೂರ್ತಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರ ಬಂಧುಗಳು ಹಾಜರಿದ್ದರು.