‘ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ’ ಘೋಷವಾಕ್ಯದಡಿ 13 ರಿಂದ ವಕೀಲರ ರಾಜ್ಯ ಮಟ್ಟದ ಕ್ರಿಕೆಟ್‌, ತ್ರೋಬಾಲ್‌ ಪಂದ್ಯ

| Published : Dec 12 2024, 12:30 AM IST

‘ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ’ ಘೋಷವಾಕ್ಯದಡಿ 13 ರಿಂದ ವಕೀಲರ ರಾಜ್ಯ ಮಟ್ಟದ ಕ್ರಿಕೆಟ್‌, ತ್ರೋಬಾಲ್‌ ಪಂದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲಾ ವ್ಯಾಪ್ತಿಗೆ ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಬಗ್ಗೆ ಡಿ.18ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಅವರನ್ನು ವಕೀಲರ ಸಂಘದ ನಿಯೋಗ ಭೇಟಿ ಮಾಡಿ ಮನವಿ ನೀಡಲಿದೆ ಎಂದು ರಾಘವೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

‘ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ’ ಎಂಬ ಘೋಷಣಾ ವಾಕ್ಯದೊಂದಿಗೆ ಮಂಗಳೂರು ವಕೀಲರ ಸಂಘದ ವತಿಯಿಂದ ಡಿ.13 ರಿಂದ 15ರವರೆಗೆ ನಗರದಲ್ಲಿ ರಾಜ್ಯಮಟ್ಟದ ವಕೀಲರ ಕ್ರಿಕೆಟ್‌ ಹಾಗೂ ತ್ರೋಬಾಲ್‌ ಪಂದ್ಯಾಟ ಆಯೋಜಿಸಲಾಗಿದೆ ಎಂದು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್‌.ವಿ. ತಿಳಿಸಿದರು.

ಇಲ್ಲಿನ ವಕೀಲರ ಸಂಘದ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪಿಸಬೇಕೆಂದು ಈಗಾಗಲೇ ಹೋರಾಟ ನಡೆಯುತ್ತಿದ್ದು, ಹೈಕೋರ್ಟ್‌ ಪೀಠ ಚಳವಳಿಯನ್ನು ಪ್ರಧಾನವಾಗಿರಿಸಿಕೊಂಡು ವಕೀಲರಿಗೆ ಈ ಬಗ್ಗೆ ಅರಿವು ಹಾಗೂ ಸಹಕಾರ ಕೋರುವ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಿಂದ ವಕೀಲರ ತಂಡವನ್ನು ಆಹ್ವಾನಿಸಲಾಗಿದೆ. ಕ್ರಿಕೆಟ್‌ ಪಂದ್ಯಾಟಕ್ಕೆ 36 ತಂಡ, ತ್ರೋಬಾಲ್‌ಗೆ 10 ತಂಡಗಳು ಭಾಗವಹಿಸುತ್ತಿವೆ. ನಗರದ ನೆಹರೂ ಮೈದಾನ, ಪಣಂಬೂರು ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ಪಂದ್ಯಾಟ ನಡೆಯಲಿದೆ ಎಂದರು.

ಡಿ.13ರಂದು ಬೆಳಗ್ಗೆ 8 ಗಂಟೆಗೆ ನೆಹರೂ ಮೈದಾನದಲ್ಲಿ ಹಿರಿಯ ವಕೀಲರಾದ ಟಿ.ಎನ್‌. ಪೂಜಾರಿ, ಎಂ.ವಿ. ಶಂಕರ ಭಟ್‌, ಬಿ. ಇಬ್ರಾಹಿಂ ಇವರು ಪಂದ್ಯಾಟ ಉದ್ಘಾಟಿಸುವರು. ದ.ಕ. ಜಿಲ್ಲಾ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅಧ್ಯಕ್ಷತೆ ವಹಿಸುವರು. ನಿಟ್ಟೆವಿವಿ ಕುಲಪತಿ ಎನ್‌.ವಿನಯ ಹೆಗ್ಡೆ, ಜಿಲ್ಲಾಧಿಕಾರಿ ಮುಲ್ಲೈಮುಗಿಲನ್‌ ಮತ್ತಿತರರು ಭಾಗವಹಿಸುವರು. ಡಿ.14ರಂದು ಸಂಜೆ 5.30ಕ್ಕೆ ಸಭಾ ಕಾರ್ಯಕ್ರಮದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌, ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳುವರು. ಡಿ.15ರಂದು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭದಲ್ಲಿ ಆಂಧ್ರಪ್ರದೇಶ ರಾಜ್ಯಪಾಲ ನ್ಯಾ. ಎಸ್‌. ಅಬ್ದುಲ್‌ ನಜೀರ್‌, ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಮೊಹಮ್ಮದ್‌ ನವಾಜ್‌, ವಿಶ್ವಜಿತ್‌ ಶೆಟ್ಟಿ, ಸಿ.ಎಂ. ಜೋಷಿ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ವಿವರಿಸಿದರು.

ಡಿ.18ರಂದು ಸಿಎಂ ಭೇಟಿ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲಾ ವ್ಯಾಪ್ತಿಗೆ ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಈ ಬಗ್ಗೆ ಡಿ.18ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಅವರನ್ನು ವಕೀಲರ ಸಂಘದ ನಿಯೋಗ ಭೇಟಿ ಮಾಡಿ ಮನವಿ ನೀಡಲಿದೆ ಎಂದು ರಾಘವೇಂದ್ರ ಹೇಳಿದರು.ಕ್ರಿಕೆಟ್‌ ಪಂದ್ಯಾಟ ಸಂಚಾಲಕರಾದ ಅಶೋಕ್‌ ಅರಿಗ, ಎನ್‌.ಎನ್‌. ಹೆಗ್ಡೆ, ಹಣಕಾಸು ಸಮಿತಿ ಮುಖ್ಯಸ್ಥ ಬಿ. ಜಿನೇಂದ್ರ ಕುಮಾರ್‌, ಪ್ರಧಾನ ಕಾರ್ಯದರ್ಶಿ ಶ್ರೀಧರ್‌ ಎಚ್‌., ಉಪಾಧ್ಯಕ್ಷ ಸುಜಿತ್‌ ಕುಮಾರ್‌, ಕೋಶಾಧಿಕಾರಿ ಗಿರೀಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ಜ್ಯೋತಿ ಸುವರ್ಣ, ಜಗದೀಶ ಶೇಣವ ಇದ್ದರು.