ರಾಜ್ಯಮಟ್ಟದ ಕಿವುಡರ ಕ್ರೀಡಾಕೂಟಕ್ಕೆ ಚಾಲನೆ

| Published : Nov 21 2025, 02:30 AM IST

ಸಾರಾಂಶ

ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕಿವುಡರ ಕ್ರೀಡಾಕೂಟ ಒಕ್ಕೂಟದ ಸಂಘಟನೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಲಾಯಿತು.

ರಾಜ್ಯದ 22 ಜಿಲ್ಲೆಗಳಿಂದ 550ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿಕನ್ನಡಪ್ರಭ ವಾರ್ತೆ ಶಿರಸಿ

ನಗರದ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ಕಿವುಡರ ಕ್ರೀಡಾಕೂಟ ಒಕ್ಕೂಟದ ಸಂಘಟನೆಯಲ್ಲಿ ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ನೀಡಲಾಯಿತು.

ರಾಜ್ಯದ 22 ಜಿಲ್ಲೆಗಳಿಂದ 550ಕ್ಕೂ ಅಧಿಕ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಆಟೋಟ ಸ್ಪರ್ಧೆಗಳಲ್ಲಿ ಉತ್ಸಾಹ ತೋರಿಸಿದರು. 14ವರ್ಷದೊಳಗೆ, 16 ಹಾಗೂ 18 ವರ್ಷದೊಳಗೆ ಹಾಗೂ 18ವರ್ಷ ಮೇಲ್ಪಟ್ಟು ಹೀಗೆ ನಾಲ್ಕು ವಿಭಾಗದಲ್ಲಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಓಟ, ಜಿಗಿತ, ಬ್ಯಾಡ್ಮಿಂಟನ್, ವಾಲಿಬಾಲ್, ಟೇಬಲ್‌ ಟೆನ್ನಿಸ್‌ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ತಮ್ಮ ಪ್ರತಿಭೆ ತೋರುತ್ತಿದ್ದಾರೆ.

ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಹಾಲು ಒಕ್ಕೂಟದ ಪ್ರಭಾರ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ದೈಹಿಕವಾಗಿ ಯಾವುದೇ ನ್ಯೂನ್ಯತೆ ಕೊಡದ ವ್ಯಕ್ತಿಗಳಿಗಿಂತ ನ್ಯೂನ್ಯತೆ ಇದ್ದವರೇ ಹೆಚ್ಚು ಕ್ರಿಯಾಶೀಲವಾಗಿದ್ದಾರೆ ಎಂದರು.

ಉತ್ತರಕನ್ನಡ ಜಿಲ್ಲೆ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಮಾತನಾಡಿ, ದೈಹಿಕ ತೊಂದರೆ ಇರುವವರಿಗೆ ಸಮಾಜದ ಮುಂಚೂಣಿಗೆ ಬರುವಂತೆ ಮಾಡಲು ಸಂಘಸಂಸ್ಥೆಗಳು ನಿರಂತರವಾಗಿ ಕಾರ್ಯಚಟುವಟಿಕೆ ನಡೆಸುತ್ತಿವೆ. ಜಿಲ್ಲೆಯಲ್ಲಿ 1981ರಲ್ಲಿ ಆರಂಭವಾದ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘ ಈ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ ಎಂದರು.

ನವದೆಹಲಿಯ ಅಖಿಲ ಭಾರತ ಕಿವುಡರ ಕ್ರೀಡಾಕೂಟ ಪರಿಷತ್‌ ಅಧ್ಯಕ್ಷ ವಿ.ಕುಮಾರ, ಕರ್ನಾಟಕ ಕಿವುಡರ ಕ್ರೀಡಾಕೂಟ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎಸ್‌. ನವೀನ ಕುಮಾರ, ಉಪಾಧ್ಯಕ್ಷ ಕಡಪ್ಪಾ ಗುಡದಿನಿ, ಹಿರಿಯ ಕ್ರೀಡಾಪಟು ಪ್ರಭಾಕರ ಜೋಗಳೇಕರ್, ಗೀತಾ ಶೆಟ್ಟಿ, ಸರ್ಕಾರಿ ನೌಕರರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಕಿರಣಕುಮಾರ ನಾಯ್ಕ ಮತ್ತಿತರರು ಇದ್ದರು. ಗಣ್ಯರು ಕ್ರೀಡಾ ಜ್ಯೋತಿ ಸ್ವಾಗತಿಸಿದರು. ವಿಶೇಷಚೇತನರಿಂದ ಪಥಸಂಚಲನ ನಡೆಯಿತು.