ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ಏರ್ಪಡಿಸಲಾದ ರಾಜ್ಯಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕೂಡಿಗೆ ಸ್ಪೋರ್ಟ್ಸ್ ಸ್ಕೂಲ್ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.ಕೊಡಗು ಎಜುಕೇಶನಲ್ ಆಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ರಕ್ಷಣಾ ಇಲಾಖೆಗೆ ಮತ್ತು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ನಡೆದ ಮೂರನೇ ವರ್ಷದ ಗುಡ್ಡಗಾಡು ಓಟದಲ್ಲಿ 80 ಬಾಲಕಿಯರು ಸೇರಿದಂತೆ ಸುಮಾರು 200 ಮಂದಿ ಪಾಲ್ಗೊಂಡಿದ್ದರು. ಬಾಲಕರ ವಿಭಾಗದಲ್ಲಿ ಕೂಡಿಗೆ ಕ್ರೀಡಾಶಾಲೆಯ ಬಿ. ಪ್ರಕಾಶ್ 7 ಕಿ.ಮೀ ದೂರದ ಅಂತರವನ್ನು 23.38 ನಿಮಿಷದಲ್ಲಿ ಓಡಿದ್ದು, ಬಾಲಕಿಯರ ವಿಭಾಗದಲ್ಲಿ 4 ಕಿ.ಮೀ. ಅಂತರವನ್ನು ಕೂಡಿಗೆ ಕ್ರೀಡಾಶಾಲೆಯ ವಿದ್ಯಾರ್ಥಿನಿ ಗಾಯತ್ರಿ 23.32 ನಿಮಿಷದಲ್ಲಿ ಕ್ರಮಿಸಿದ್ದಾಳೆ.
ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಉಜಿರೆಯ ಎಸ್‌ಡಿಎಂ ಶಾಲೆಯ ಸಿ.ಜಿ. ಮಿತೇಶ್, ತೃತೀಯ ಸ್ಥಾನವನ್ನು ಕೂಡಿಗೆ ಕ್ರೀಡಾಶಾಲೆಯ ಟಿ.ಡಿ. ತೇಜಸ್, ನಾಲ್ಕನೇ ಸ್ಥಾನ ಕೊಣನೂರು ಸಿದ್ದಾಪುರ ಸರಗೂರಿನ ಹೃತಿಕ್ ಗೌಡ, ಐದನೇ ಸ್ಥಾನ ಮಡಿಕೇರಿ ಕುಂದಚೇರಿಯ ಕೆ.ಎಲ್. ಕೃಷ್ಣ,. 6ನೇ ಸ್ಥಾನವನ್ನು ಕೊಡಗು ಸೈನಿಕ ಶಾಲೆಯ ಎಂ.ಕೆ. ಪ್ರಜ್ವಲ್ ಪಡೆದರು.ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕೂಡಿಗೆ ಸ್ಪೋರ್ಟ್ಸ್ ಸ್ಕೂಲ್ ವಿದ್ಯಾರ್ಥಿಗಳಾದ ಸಂತೋಷಿ ಮತ್ತು ರಾಣಿ ಪಡೆದರೆ, ನಾಲ್ಕನೇ ಸ್ಥಾನ ಮೂಡುಬಿದರೆಯ ಆಳ್ವಾಸ್ ಸಂಸ್ಥೆಯ ಚೈತ್ರ, ಐದನೇ ಸ್ಥಾನ ಕಟ್ಟೆಮಾಡು ಪ್ರಕೃತಿ ಬೋಪಯ್ಯ, ಆರನೇ ಸ್ಥಾನ ಕೂಡಿಗೆ ಕ್ರೀಡಾ ಶಾಲೆಯ ಮಿಥಾಲಿ ಗಳಿಸಿದ್ದಾರೆ.
ಓಟದಲ್ಲಿ ವಿಜೇತ ಬಾಲಕರಿಗೆ ಪ್ರಥಮ ಬಹುಮಾನ 10 ಸಾವಿರ ರು. ನಗದು, ದ್ವಿತೀಯ 8 ಸಾವಿರ ರು., ತೃತೀಯ ಆರು ಸಾವಿರ ರು., ನಾಲ್ಕನೇ ಬಹುಮಾನ 4 ಸಾವಿರ ರು, ಐದನೇ ಬಹುಮಾನ 3 ಸಾವಿರ, 6ನೇ ಬಹುಮಾನವಾಗಿ 2 ಸಾವಿರ ರು. ನೀಡಿ ಗೌರವಿಸಲಾಯಿತು.ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನ 6 ಸಾವಿರ ರು., ದ್ವಿತೀಯ 5000 ರು., ತೃತೀಯ 4 ಸಾವಿರ, ನಾಲ್ಕನೇ ಬಹುಮಾನ 3000 ರು., ಐದನೇ ಸ್ಥಾನ ಗಳಿಸಿದವರಿಗೆ 2000 ಹಾಗೂ ಆರನೇ ಬಹುಮಾನವಾಗಿ 1 ಸಾವಿರ ರು. ನೀಡಲಾಯಿತು. ಪಾಲ್ಗೊಂಡ ಎಲ್ಲ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕುಶಾಲನಗರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಕೊಡಗು ಎಜುಕೇಶನ್ ಆಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಅಧ್ಯಕ್ಷ ಮಂದಪಂಡ ಕೆ. ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಟ್ರಸ್ಟ್‌ನ ಪ್ರಮುಖರಾದ ಕೊಡಂದೇರ ಮೇಜರ್ ಜನರಲ್ ಅರ್ಜುನ್ ಮುತ್ತಣ್ಣ, ಮಾರ್ಚಂಡ ಗಣೇಶ್ ಪೊನ್ನಪ್ಪ, ಕ್ಯಾಪ್ಟನ್ ಪಟ್ಟಡ ಎಸ್. ಕಾರಿಯಪ್ಪ, ಪಾಂಡ್ಯಂಡ ಸೂರಜ್ ಮಾಚಯ್ಯ, ಬೊಪ್ಪಂಡ ಕೆ. ಸುಬ್ರಹ್ಮಣ್ಯ, ಪಟ್ಟಡ ಧನು ಉತ್ತಯ್ಯ, ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಬಿ.ಕೆ. ಚಿನ್ನಪ್ಪ, ಇಂಡಿಯನ್ ಹ್ಯಾಂಡ್ ಬಾಲ್ ತಂಡದ ಕ್ಯಾಪ್ಟನ್ ಗ್ರೀನ್ ಡಿಕುನ್ನಾ, ಅಂತಾರಾಷ್ಟ್ರೀಯ ಗುಡ್ಡಗಾಡ ಓಟಗಾರ ಎಚ್.ಎ. ಚಿನ್ನಪ್ಪ, ಶಿಕ್ಷಣ ಇಲಾಖೆ ಕ್ರೀಡಾ ಅಧೀಕ್ಷಕ ಡಾ. ಪಲ್ಯದ್, ಕ್ರೀಡಾ ಆಯೋಜಕರಾದ ಹವಾಲ್ದಾರ್ ಅಮೆ ಜನಾರ್ದನ್ ಮತ್ತಿತರರು ಇದ್ದರು.