ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ: ಯಿಫಾ ಚಾಂಪಿಯನ್ ಟ್ರೋಫಿ ಎಜಿಒಆರ್‌ಸಿ ಮುಡಿಗೆ
ಸೋಮವಾರಪೇಟೆ: ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಷಿಯೇಷನ್ ವತಿಯಿಂದ ಇಲ್ಲಿನ ಟರ್ಫ್ ಮೈದಾನದಲ್ಲಿ ಆಯೋಜನೆಗೊಂಡಿದ್ದ ರಾಜ್ಯಮಟ್ಟದ ಪ್ರತಿಷ್ಠಿತ ತಂಡಗಳ ನಡುವಿನ ಯಿಫಾ ಹಾಕಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಎಜಿಓಆರ್‌ಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.
ಫೈನಲ್ ಪಂದ್ಯಾಟದಲ್ಲಿ ಸದರ್ನ್ ಕಮಾಂಡ್ ತಂಡವನ್ನು ೩-೨ ಗೋಲುಗಳ ಅಂತರದಿಂದ ಸೋಲಿಸಿ ೨ ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಸದರ್ನ್ ಕಮಾಂಡ್ ತಂಡ ೧ ಲಕ್ಷ ರು. ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡಿತು.ಫೈನಲ್ ಪಂದ್ಯದ ಪ್ಲೇಯರ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಎಜಿಓಆರ್‌ಸಿ ತಂಡದ ನಲ್ಲುಲ್ಲಿ ಸೂರ್ಯ ಪಡೆದರು. ಇದಕ್ಕೂ ಮುನ್ನ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಆತಿಥೇಯ ಯಿಫಾ ತಂಡವನ್ನು ಕೆನರಾ ಬ್ಯಾಂಕ್ ತಂಡ ಮಣಿಸಿತು. ವಿಜೇತ ಕೆನರಾ ಬ್ಯಾಂಕ್ ತಂಡಕ್ಕೆ ೫೦ ಸಾವಿರ ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು.
ಕ್ರೀಡಾಕೂಟದಲ್ಲಿ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್ ಸಿ, ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸದರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸಿದ್ದವು.ಪಂದ್ಯಾವಳಿಯ ಬೆಸ್ಟ್ ಗೋಲ್‌ಕೀಪರ್ ಆಗಿ ಕಸ್ಟಮ್ಸ್ ತಂಡದ ಶಾನ್, ಪ್ಲೇರ‍್ಸ್ ಆಫ್ ದ ಟೂರ್ನಮೆಂಟ್ ಆಗಿ ಸದರ್ನ್ ಕಮಾಂಡ್ ತಂಡದ ರಜಂತ್ ಸಿಂಗ್, ಬೆಸ್ಟ್ ಡಿಫೆಂಡರ್ ಎಜಿಓಆರ್‌ಸಿಯ ಸಾತ್ವಿಕ್, ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ಎಜಿಓಆರ್‌ಸಿಯ ತ್ರಿಶೂಲ್, ಬೆಸ್ಟ್ ಫಾರ್ವರ್ಡ್ ಆಟಗಾರನಾಗಿ ಯಿಫಾ ತಂಡದ ಧ್ರುವ, ಬೆಸ್ಟ್ ಮಿಡ್ ಫೀಲ್ಡರ್ ಆಗಿ ಕೆನರಾ ಬ್ಯಾಂಕ್ ತಂಡದ ನಕುಲ್ ಅವರು ಬಹುಮಾನ ಪಡೆದರು.ಮಾಜಿ ಕ್ರೀಡಾ ಸಚಿವ ಎಂ.ಪಿ. ಅಪ್ಪಚ್ಚುರಂಜನ್, ತಪೋಕ್ಷೇತ್ರ ಮನೆಹಳ್ಳಿ ಮಠಾಧೀಶ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಷಿಯೇಷನ್ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ, ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್, ಒಕ್ಕಲಿಗರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕಾಳಪ್ಪ, ಲೀಡಿಂಗ್ ಎಡ್ಜ್ ಸಂಸ್ಥೆಯ ಮಾಲೀಕ ಎಡಿಕೇರಿ ಪ್ರಸನ್ನ, ಭಾರತೀಯ ಮಹಿಳಾ ಹಾಕಿ ತಂಡದ ಮಾಜೀ ತರಬೇತುಗಾರ್ತಿ ದೇವರಾಜಮ್ಮ ಬಹುಮಾನ ವಿತರಿಸಿದರು.