ಇಲ್ಲಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ ೭ರಿಂದ ೧೦ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ, ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರು ಅನಾವರಣ ಮಾಡಿದರು.
ಸೋಮವಾರಪೇಟೆ: ಇಲ್ಲಿನ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ ೭ರಿಂದ ೧೦ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ, ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರು ಅನಾವರಣ ಮಾಡಿದರು. ನಂತರ ಮಾತನಾಡಿದ ಅವರು, ಯುವ ಜನಾಂಗಕ್ಕೆ ಹಾಕಿ ಕ್ರೀಡೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯಿಫಾ ಸಂಘಟನೆ ಇದೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡಂತೆ ಹಾಕಿ ಪಂದ್ಯಾವಳಿ ಆಯೋಜಿಸಿದ್ದು, ಪಂದ್ಯಾವಳಿಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.ಹಾಕಿ ಕ್ರೀಡೆಗಳು ನಿರಂತರವಾಗಿ ನಡೆಯಬೇಕು. ಎಲ್ಲ ಜಾತಿ, ಜನಾಂಗ, ಪಕ್ಷದವರನ್ನು ಒಂದುಗೂಡಿಸಲು ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟ ಅವರು, ಪ್ರಸ್ತುತ ಸಮಾಜದಲ್ಲಿ ಹಲವಷ್ಟು ಯುವಕರು ದಾರಿ ತಪ್ಪುತ್ತಿದ್ದಾರೆ. ದುಶ್ವಟಗಳಿಗೊಳಗಾಗಿ ಜೀವನವನ್ನು ನರಕಸದೃಶ ಮಾಡಿಕೊಳ್ಳುತ್ತಿದ್ದಾರೆ. ಅಂತಹವರು ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ದುಶ್ಚಟಗಳಿಂದ ಹೊರಬರಬಂದು ಉತ್ತಮ ಬದುಕು ಕಟ್ಟಿಕೊಳ್ಳಬಹುದು. ಕ್ರೀಡೆಯಿಂದ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ಶ್ರೀನಿಧಿ ಲಿಂಗಪ್ಪ ಮಾತನಾಡಿ, ಕೊಡಗಿನಲ್ಲಿ ೨೫ ವರ್ಷಗಳ ನಂತರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದ ಪ್ರತಿಷ್ಠಿತ ತಂಡಗಳಾದ ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಎಜಿಓಆರ್.ಸಿ., ಸೌತ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್, ಡಿವೈಇಎಸ್, ಸೌತರ್ನ್ ಕಮಾಂಡ್ ಹಾಗೂ ಆತಿಥೇಯ ಯಿಫಾ ತಂಡಗಳು ಭಾಗವಹಿಸುತ್ತಿವೆ ಎಂದು ಹೇಳಿದರು.ಪಂದ್ಯಾಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮುವ ತಂಡಕ್ಕೆ ೨ ಲಕ್ಷ ರು. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೧ ಲಕ್ಷ ರು. ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆಯುವ ತಂಡಕ್ಕೆ ೫೦ ಸಾವಿರ ರು. ನಗದು ಹಾಗೂ ಟ್ರೋಫಿ ನೀಡಲಾಗುವುದು. ಇದರೊಂದಿಗೆ ವೈಯುಕ್ತಿಕ ವಿಭಾಗದಲ್ಲಿಯೂ ಪ್ರಶಸ್ತಿಗಳನ್ನು ವಿತರಿಸಲಾಗುವುದು ಎಂದರು.ವೇದಿಕೆಯಲ್ಲಿ ಯಿಫಾ ಸಂಘಟನೆ ಉಪಾಧ್ಯಕ್ಷ ಹರ್ಷಿತ್ ಶಿವಪ್ಪ, ಕಾರ್ಯದರ್ಶಿ ಸಜನ್ ಮಂದಣ್ಣ, ಖಜಾಂಚಿ ಮೋಹಿತ್ ತಿಮ್ಮಯ್ಯ, ಪ್ರಣವ್ ಫೌಂಡೇಷನ್ ಅಧ್ಯಕ್ಷ ರಾಕೇಶ್ ರೈ ಉಪಸ್ಥಿತರಿದ್ದರು.