ಸಾರಾಂಶ
ಸಂಶೋಧನೆ ಎಂದರೆ ಮತ್ತೆ ಮತ್ತೆ ಹುಡುಕುವ, ನಾವಾಗಿ ಶೋಧಿಸುವ ಹಾಗೂ ಮುರಿದು ಕಟ್ಟುವ ಒಂದು ವಿಧಾನವಾಗಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಂಶೋಧಕರಿಗೆ ಬಹಳ ಮುಖ್ಯವಾಗಿ ಸಾಮಾಜಿಕ ಹೊಣೆಗಾರಿಕೆ ಇರಬೇಕು ಎಂದು ಮೈಸೂರು ವಿವಿ ಕನ್ನಡ ಅಧ್ಯಯನ ಮಂಡಳಿ ಅಧ್ಯಕ್ಷ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸದಸ್ಯ ಪ್ರೊ.ಎಂ.ಎಸ್. ಶೇಖರ್ ತಿಳಿಸಿದರು.ನಗರದ ಯುವರಾಜ ಕಾಲೇಜಿನಲ್ಲಿ ಕನ್ನಡ ವಿಭಾಗವು ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಂಶೋಧನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಶೋಧನೆ ಎಂದರೆ ಮತ್ತೆ ಮತ್ತೆ ಹುಡುಕುವ, ನಾವಾಗಿ ಶೋಧಿಸುವ ಹಾಗೂ ಮುರಿದು ಕಟ್ಟುವ ಒಂದು ವಿಧಾನವಾಗಿದೆ. ಸಂಶೋಧಕರು ಅತ್ಯಂತ ಪ್ರಾಮಾಣಿಕವಾಗಿ, ಮಾನವೀಯ ಹೃದಯವುಳ್ಳವರಾಗಿ ಅಧ್ಯಯನಶೀಲರಾದಾಗ ಮಾತ್ರ ಇದು ಸಾಧ್ಯವಾಗುತ್ತದೆ ಎಂದರು.
ಸಂಶೋಧಕರು ಪೂರ್ವಾಗ್ರಹ ಪೀಡಿತರಾಗದೆ ಸತ್ಯವನ್ನು ಅರಿಯುವ, ಅಭಿವ್ಯಕ್ತಿಸುವ ದಿಟ್ಟತನ ತೋರಬೇಕು. ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಗಳಿಸಬೇಕು. ಜಿ.ಎಸ್. ಶಿವರುದ್ರಪ್ಪ, ಎಂ.ಎಂ. ಕಲ್ಬುರ್ಗಿ, ಕೆ. ಪ್ರಭುಶಂಕರ, ಡಿ.ಆರ್. ನಾಗರಾಜ, ಎಚ್.ಎಸ್. ರಾಘವೇಂದ್ರರಾವ್ ಮತ್ತಿತರ ವಿದ್ವಾಂಸರ ಸಂಶೋಧನಾ ಮಹಾಪ್ರಬಂಧಗಳನ್ನು ಗಂಭೀರವಾಗಿ ಅಧ್ಯಯನ ಮಾಡಬೇಕು. ಬಳಿಕ ಸಂಶೋಧನಾ ಬರವಣಿಗೆಯಲ್ಲಿ ನಿರತರಾಗಬೇಕು ಎಂದು ಅವರು ಸಲಹೆ ನೀಡಿದರು.ವಿಶ್ರಾಂತ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಅವರು ಸಂಶೋಧನೆಯ ತಾತ್ವಿಕತೆ, ರಾಜ್ಯ ಮುಕ್ತ ವಿವಿ ಪ್ರಾಧ್ಯಾಪಕಿ ಡಾ. ಕವಿತಾ ರೈ ಅವರು ಕನ್ನಡ ಸಾಹಿತ್ಯ ಸ್ತ್ರೀವಾದಿ ಸೈದ್ಧಾಂತಿಕ ಚಿಂತನೆ, ಹಾಸನ ಸ್ನಾತಕೋತ್ತರ ಕೇಂದ್ರದ ಪ್ರೊ.ಎಂ.ಜಿ. ಮಂಜುನಾಥ ಅವರು ಆಧುನಿಕ ಪೂರ್ವ ಕನ್ನಡ ಸಾಹಿತ್ಯ ಸಂಶೋಧನೆ ಹಾಗೂ ಪ್ರೊ.ಎಚ್.ಟಿ. ವೆಂಕಟೇಶಮೂರ್ತಿ ಅವರು ಆಧುನಿಕ ಕನ್ನಡ ಸಾಹಿತ್ಯ ಸಂಶೋಧನೆ ಕುರಿತಂತೆ ವಿಷಯ ಮಂಡಿಸಿದರು. ವಿವಿಧೆಡೆಯಿಂದ 50 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಚ್. ಸೋಮಶೇಖರಪ್ಪ, ಆಡಳಿತಾಧಿಕಾರಿ ಪ್ರೊ.ಕೆ. ಅಜಯ್ ಕುಮಾರ್, ಕಾರ್ಯಾಗಾರದ ಸಂಯೋಜಕ ಡಾ.ಸಿ.ಡಿ. ಪರಶುರಾಮ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ. ಶ್ರೀನಿವಾಸ, ಸಹಾಯಕ ಪ್ರಾಧ್ಯಾಪಕರಾದ ಡಾ.ಎಂ.ಎಸ್. ವಸಂತಾ, ಡಾ. ಕೋಕಿಲಾ, ಸಂಘಟನಾ ಸದಸ್ಯರಾದ ಡಾ.ಎಚ್. ಆನಂದಕುಮಾರ್, ಡಾ. ಜಗದೀಶ್, ಗೋಪಾಲ್ ಇದ್ದರು.