ಸಾರಾಂಶ
ಕೊಡಗು ಜಿಲ್ಲೆಯ ಯವಕಪಾಡಿ ನಿವಾಸಿ ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೊಡಗು ಜಿಲ್ಲೆಯ ಯವಕಪಾಡಿ ನಿವಾಸಿ ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿಗೆ ಪಾತ್ರರಾಗಿದ್ದು, ಮಂಡ್ಯದ ಡಾ. ಬಿ .ಆರ್ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ಸಂಸ್ಕೃತಿ ಉತ್ಸವದಲ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾ ಕುಳುವ ಸಮಾಜ ಹಾಗೂ ಡ್ರೀಮ್ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಸಂಸ್ಕೃತಿ ಉತ್ಸವ ಆಯೋಜಿಸಲಾಗಿತ್ತು.ಮಂಡ್ಯ ಕುಳುವ ಸಮಾಜದ ಅಧ್ಯಕ್ಷ ಕೃಷ್ಣ ಕುಮಾರು ಗಂಗೂರು ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಮಾನಪ್ಪ ಲಂಬಾಣಿ ,ಶ್ರೀರಂಗಪಟ್ಟಣದ ಚಂದ್ರ ವನ ಆಶ್ರಮದ ಡಾಕ್ಟರ್ ತ್ರಿನೇತ್ರ ಮಹಂತ ಶಿವಯೋಗಿ ಮಹಾಸ್ವಾಮಿ, ಸಂಸ್ಕೃತಿಕ ಚಿಂತಕರಾದ ಜಿ ಸಿದ್ದರಾಮಯ್ಯ ಮತ್ತಿತರರು ಪಾಲ್ಗೊಂಡರು.
ಕುಡಿಯರ ಮುತ್ತಪ್ಪ ಕುಡಿಯ ಜನಾಂಗಕ್ಕೆ ಸರ್ಕಾರದಿಂದ ಇರುವ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದರು. ಕೊಡಗು ಬುಡ ಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕ್ರೀಡೆ ,ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ದುಡಿದ ಇವರ ಸೇವೆಯನ್ನು ಪರಿಗಣಿಸಿ ವಿವೇಕಾನಂದ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಉತ್ತಮ ಸಮಾಜ ಸೇವಕ ಪ್ರಶಸ್ತಿ ಮೂರು ಬಾರಿ ಲಭಿಸಿದೆ . 2020- 21ರ ಸಾಲಿನಲ್ಲಿಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಉತ್ತಮ ಜಾನಪದ ಕಲಾವಿದ ಪ್ರಶಸ್ತಿ ಲಭಿಸಿದೆ.ಪ್ರಸ್ತುತ ಮಡಿಕೇರಿ ತಾಲೂಕಿನ ಕಕ್ಕಬೆ ಕುಂಜಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ.