ಡಿಸೆಂಬರಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾವಳಿ

| Published : Nov 18 2025, 12:45 AM IST

ಸಾರಾಂಶ

ಡಿಸೆಂಬರ್ ತಿಂಗಳಿನಲ್ಲಿ ನಗರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರು ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗುವುದು ಎಂದು ಹರಿಹರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತರಾಜು ಹೇಳಿದ್ದಾರೆ.

- ಹರಿಹರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತರಾಜು ಮಾಹಿತಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಡಿಸೆಂಬರ್ ತಿಂಗಳಿನಲ್ಲಿ ನಗರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರು ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ಆಯೋಜನೆ ಮಾಡಲಾಗುವುದು ಎಂದು ಹರಿಹರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹನುಮಂತರಾಜು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರ ನಗರದಲ್ಲಿ ಸಾಕಷ್ಟು ಯುವಜನರು, ವಿದ್ಯಾರ್ಥಿಗಳಿದ್ದಾರೆ. ಅವರಿಗೆ ವಾಲಿಬಾಲ್ ಆಟದ ಕಲೆಗಳನ್ನು ತಿಳಿಸುವ ದೃಷ್ಟಿಯಿಂದ ನಾವು ಹರಿಹರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಆರಂಭ ಮಾಡಿದ್ದೇವೆ ಎಂದರು.

ಮುಂದಿನ ತಿಂಗಳು ತಾಲೂಕು ಕ್ರೀಡಾಂಗಣದಲ್ಲಿ ವಿಜೃಂಭಣೆಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಪುರುಷರ ಮತ್ತು ಮಹಿಳೆಯರ ವಾಲಿಬಾಲ್ ಪಂದ್ಯಾವಳಿ ನಡೆಸಲಾಗುವುದು. ನಗರದ ಯುವಜನತೆ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಂದ್ಯಾವಳಿಗಳನ್ನು ವೀಕ್ಷಿಸುವ ಮೂಲಕ ಸಹಕಾರ ನೀಡುವಂತೆ ವಿನಂತಿಸಿದರು.

ಸಂಸ್ಥೆ ಸಂಘಟನಾ ಕಾರ್ಯದರ್ಶಿ ಜ್ಞಾನಪ್ರಕಾಶ್ ಮಾತನಾಡಿ, ಪ್ರಸ್ತುತ ಹರಿಹರ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಯುವಜನರು ಕ್ರೀಡೆಗಳ ಬಗ್ಗೆ ಗಮನಹರಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವಾಲಿಬಾಲ್ ಪ್ರತಿಭೆಗಳನ್ನು ಹೊರತಂದು ಅವರಿಗೆ ಆಟದ ಸಂಪೂರ್ಣ ಜ್ಞಾನ ಕೌಶಲ್ಯತೆಗಳನ್ನು ತಿಳಿಸುವ ನಿಟ್ಟಿನಲ್ಲಿ ಕಾರ್ಯಾರಂಭ ಮಾಡುತ್ತಿದ್ದೇವೆ ಎಂದರು.

ನೂತನವಾಗಿ ಆರಂಭಿಸಿರುವ ನಮ್ಮ ಸಂಸ್ಥೆಗೆ ಹರಿಹರದ ಜನತೆ, ಯುವಕರು, ಕ್ರೀಡಾಪಟುಗಳು, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸಹಕಾರ ನೀಡುವ ಮೂಲಕ ನಗರದಲ್ಲಿ ಕ್ರೀಡಾ ಕ್ಷೇತ್ರ ಬೆಳವಣಿಗೆಗೆ ಸಹಕರಿಸುವಂತೆ ಹಾಗೂ ಪ್ರೋತ್ಸಾಹ ನೀಡುವಂತೆ ವಿನಂತಿಸಿದರು.

ಸುದ್ದಿಗೋಷ್ಠಿಯಲ್ಲಿ ಹರಿಹರ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಶೇರ್ ಅಲಿ, ಉಪಾಧ್ಯಕ್ಷ ಅಫ್ರೋಜ್ ಖಾನ್, ಖಜಾಂಚಿ ಮಹಬೂಬ್ ಬಾಷಾ, ನಿರ್ದೇಶಕರಾದ ಆಸಿಫ್ ಅಲಿ, ನೂರುಲ್ಲಾ ಮತ್ತು ಸಹ ಕಾರ್ಯದರ್ಶಿ ಕೆ.ಮನ್ಸೂರ್ ಮುಂತಾದವರು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ವಿದ್ಯಾರ್ಥಿಗಳಿಗೆ ವಾಲಿಬಾಲ್‌ ತರಬೇತಿ: ಇಂಮ್ತಿಯಾಜ್‌ ಸಮಾರಂಭದಲ್ಲಿ ಅಂತರ ರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಇಂಮ್ತಿಯಾಜ್ ಮಾತನಾಡಿ, ಮುಂಬರುವ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ದಿನಂಪ್ರತಿ ಹೈಸ್ಕೂಲ್ ಮತ್ತು ಪಿಯು ವಿದ್ಯಾರ್ಥಿಗಳಿಗೆ ವಾಲಿಬಾಲ್ ಆಟದ ಬಗ್ಗೆ ತರಬೇತಿ ಹಾಗೂ ಅಭ್ಯಾಸವನ್ನು ಗಾಂಧಿ ಮೈದಾನದಲ್ಲಿ ನಡೆಸಲಾಗುವುದು. ಅಭ್ಯಾಸದ ವೇಳೆ ಆಟದ ತಾಂತ್ರಿಕ ಕೌಶಲ್ಯಗಳನ್ನು ನುರಿತ ತರಬೇತುದಾರರಿಂದ ನೀಡಲಾಗುವುದು. ಇದರ ಸೌಲಭ್ಯವನ್ನು ಪಡೆದುಕೊಳ್ಳಲು ತಿಳಿಸಿದರು. ಅಭ್ಯಾಸ ಮತ್ತು ತರಬೇತಿಯನ್ನು ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮತ್ತು ಸಂಜೆ 4ರಿಂದ 7 ಗಂಟೆವರೆಗೆ ನಡೆಸಲಾಗುವುದು. ಭಾಗವಹಿಸಲು ಇಚ್ಚಿಸುವವರು ಹೆಚ್ಚಿನ ಮಾಹಿತಿಗೆ ಅಧ್ಯಕ್ಷ, ಶೇರ್ ಅಲಿ ಮೊ.98445 -73243 ಹಾಗೂ ಕಾರ್ಯದರ್ಶಿ ಹನುಮಂತ ಗೌಡ ಮೊ. 97423- 33317 ಇವರನ್ನು ಸಂಪರ್ಕಿಸಲು ತಿಳಿಸಿದರು.

- - -

-16HRR.02:

ಹರಿಹರದ ಪತ್ರಿಕಾ ಭವನದಲ್ಲಿ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಪದಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.