ಸಾರಾಂಶ
ಚನ್ನಗಿರಿ: ಪಟ್ಟಣದ ಶ್ರೀ ಕುಕ್ಕುವಾಡ ಅಂಬಾ ಭವಾನಿ ಅಮ್ಮನವರ ಜಾತ್ರೆ ಮತ್ತು ಕಾರ್ತಿಕೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ರಾಜ್ಯ ಮಟ್ಟದ ಬಯಲು ಕುಸ್ತಿ ಪಂದ್ಯವಳಿ ಶುಕ್ರವಾರ ಮುಕ್ತಾಯ ಕಂಡಿತು.
ಶುಕ್ರವಾರ ನಡೆದ ಕೊನೆಯ ಪಂದ್ಯದಲ್ಲಿ ಹರಿಯಾಣ ರಾಜ್ಯದ ವಿಕ್ಕಿ ಎಂಬ ಕುಸ್ತಿ ಪಟು ದೆಹಲಿಯ ಅಭಿದೇವ್ ಅವರನ್ನು ಸೋಲಿಸುವ ಮೂಲಕ ದಿವಂಗತ ರುದ್ರೋಜಿರಾವ್ ಚವ್ಹಾಣ್ ಅವರ ಜ್ಞಾಪಕಾರ್ಥವಾಗಿ ಪ್ರಥಮ ಬಹುಮಾನವಾಗಿ ಇಟ್ಟಿದ್ದ 1ಲಕ್ಷ ಮತ್ತು ಕುಸ್ತಿ ಪಂದ್ಯದ ವೀಕ್ಷಕರು ನೀಡಿದ 20 ಸಾವಿರ ರು. ಸೇರಿದಂತೆ 1.20 ಲಕ್ಷ ರು ನಗದು ಬಹುಮಾನ ಪಡೆದರು.ದೆಹಲಿಯ ಪವನ್ ಅವರು ಮಹಾರಾಷ್ಟ್ರದ ಜೈಭೀತ್‌ನನ್ನು ಸೋಲಿಸಿ ದಿವಂಗತರಾದ ವಾಸಣ್ಣ ಘಾರ್ಗೆ, ಸಿ.ಬಿ.ಪ್ರಕಾಶ್ ಜಾಧವ್, ಎಂ.ಕೋಟೋಜಿರಾವ್ ಇವರ ಸ್ಮರಣಾರ್ಥವಾಗಿ ಎರಡನೇ ಬಹುಮಾನ 60 ಸಾವಿರ ರು. ನಗದು ಮತ್ತು ಪ್ರೇಕ್ಷಕರು ನೀಡಿದ 5 ಸಾವಿರ ಒಟ್ಟು 65 ಸಾವಿರ ರು. ನಗದು ಬಹುಮಾನವನ್ನು ಪಡೆದರು.
ಕಳೆದ ಮೂರು ದಿನಗಳಿಂದ ನಡೆದ ಬೆಳ್ಳಿಗ್ಗೆ ಮತ್ತು ಸಂಜೆಯ ಕುಸ್ತಿ ಪಂದ್ಯಾವಳಿಗಳಲ್ಲಿ ದೆಹಲಿ, ಮಹರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಈ ರಾಜ್ಯಗಳಿಂದ ಅಂತರರಾಷ್ಟ್ರೀಯ ಕುಸ್ತಿ ಪಟುಗಳು ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ನೂರಾರು ಜನ ಪೈಲ್ವಾನರುಗಳು ಭಾಗವಹಿಸಿದ್ದರು. ಸುಮಾರು 310 ಜೋಡಿ ಪೈಲ್ವಾನರು ಕುಸ್ತಿ ಪಂದ್ಯದಲ್ಲಿ ಸೆಣಸಾಡಿದರು. ಗೆಲುವು ಸಾಧಿಸಿದವರು ನಗದು ಬಹುಮಾನದ ಜೊತೆ ಇನ್ನಿತರೆ ವಸ್ತುಗಳನ್ನು ಬಹುಮಾನವಾಗಿ ಪಡೆದುಕೊಂಡರು.ಈ ಕುಸ್ತಿ ಪಂದ್ಯದಲ್ಲಿ ನಾಲ್ಕು ಜೋಡಿ ಮಹಿಳಾ ಕುಸ್ತಿ ಪಟುಗಳು ಭಾಗವಹಿಸಿದ್ದರು.
ಕುಸ್ತಿ ಪಂದ್ಯದ ವೀಕ್ಷಣಿಗೆ ಪಟ್ಟಣದ ನಾಗರಿಕರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳ ಗ್ರಾಮಸ್ಥರು ಮತ್ತು ಪಕ್ಕದ ತಾಲೂಕು, ಜಿಲ್ಲಾ ಕೇಂದ್ರಗಳಿಂದಲೂ ಸಾವಿರಾರು ಜನ ವೀಕ್ಷಕರುಗಳು ಆಗಮಿಸಿ ಕುಸ್ತಿ ಪಂದ್ಯವಳಿ ವೀಕ್ಷಿಸಿ ಪೈಲ್ವಾನರುಗಳಿಗೆ ಉತ್ತೇಜನ ನೀಡುತ್ತಿದ್ದರು.ಕುಸ್ತಿ ಪಂದ್ಯದ ತೀರ್ಪುಗಾರರಾಗಿ ರಾಷ್ಟ್ರೀಯ ಕುಸ್ತಿ ಪಟು ಸಿ.ಎಚ್.ಶ್ರೀನಿವಾಸ್, ಹಿರಿಯ ಕುಸ್ತಿ ಪಟುಗಳಾದ ಸಿ.ಎನ್.ನಾಗರಾಜ್ ಟಿ.ಮೂಡ್ಲಪ್ಪ, ಕವಲಳ್ಳರ ಸಿದ್ದಪ್ಪ, ಕರಡೇರ ರಾಮಣ್ಣ, ಅಮೀರ್ ಅಹಮದ್ ಸಾಬ್, ಚಂದ್ರೋಜಿರಾವ್ ಇವರುಗಳು ಕಳೆದ ಮೂರು ದಿನಗಳಿಂದ ನಡೆದ ಕುಸ್ತಿ ಪಂದ್ಯದ ತೀರ್ಪುಗಾರರಾಗಿ ಉತ್ತಮವಾದ ತೀರ್ಪುನೀಡಿ ಪ್ರೇಕ್ಷಕರ ಪ್ರಶಂಶೆಗೆ ಪಾತ್ರರಾದರು.
ಕುಸ್ತಿ ಪಂದ್ಯವನ್ನು ಬೆಂಬಲಿಸುವ ಸಲುವಾಗಿ ಪಟ್ಟಣದ ಸಹೋದರ ಸಮಾಜದವರು ವಿಜೇತ ಕುಸ್ತಿ ಪಟುಗಳಿಗೆ ಬಹುಮಾನಗಳನ್ನು ನೀಡಲು ಪ್ರೋತ್ಸಾಹಕವಾಗಿ ಶೀಲ್ಡ್ ಮತ್ತು ಇನ್ನಿತರೆ ವಸ್ತುಗಳನ್ನು ಮೆರವಣಿಗೆಯ ಮೂಲಕ ತಂದು ಕುಸ್ತಿ ಅಖಾಡಕ್ಕೆ ಕಳೆ ನೀಡಿದ್ದರು.ಕುಸ್ತಿ ಪಂದ್ಯದ ವೀಕ್ಷಣಿಗೆ ಪ್ರಮುಖರಾದ ದಾವಣಗೆರೆ ವಿ.ವಿಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್, ನಿವೃತ್ತ ವಲಯ ಅರಣ್ಯಾಧಿಕಾರಿ ವೀರೇಶ್ ನಾಯ್ಕ್, ಪಟ್ಟಣದ ಹಿರಿಯರಾದ ಗೌಡ್ರು ಚಂದ್ರಣ್ಣ, ಸಿ.ರಮೇಶ್, ಜಿ.ಚಿನ್ನಸ್ವಾಮಿ, ಅಮಾನುಲ್ಲಾ, ಅಮೀರ್ ಅಹಮದ್, ಬೈರನಹಳ್ಳಿ ಮಂಜಣ್ಣ, ಸಿ.ನಾಗರಾಜ್, ಕಾಪೀಪುಡಿ ಶಿವಾಜಿರಾವ್, ಶ್ರೀಕಾಂತ್ ಚೌವಾಣ್, ಕಾಯಿ ಮಂಜಣ್ಣ, ಶಿವಾಜಿರಾವ್, ಸುಬ್ಬೂಜಿರಾವ್, ಬುಳ್ಳಿನಾಗರಾಜ್ ಮತ್ತಿತರರು ಭಾಗವಹಿಸಿ ಕುಸ್ತಿ ಪಟುಗಳಿಗೆ ಶುಭ ಹಾರೈಸಿದರು.
ಶ್ರೀ ಕುಕ್ಕುವಾಡ ಅಂಬಾ ಭವಾನಿ ಅಮ್ಮನವರ ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಶನಿವಾರದಂದು ಶ್ರೀ ಕುಕ್ಕುವಾಡ ಅಂಬಾ ಭವಾನಿ ದೇವಿಯನ್ನು ಅಲಂಕೃತಗೊಂಡ ರಥದಲ್ಲಿ ಕುಳ್ಳಿರಿಸಿಕೊಂಡು ವಿವಿಧ ವಾಧ್ಯಮೇಳಗೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಜಾತ್ರೆ ಮುಕ್ತಾಯಗೊಂಡಿತು.