ರಾಜ್ಯಮಟ್ಟದ ಪರಶುರಾಮಪ್ಪ ಚಿತ್ರಗಾರ ಪ್ರಶಸ್ತಿ ಪ್ರದಾನ

| Published : Sep 03 2025, 01:01 AM IST

ರಾಜ್ಯಮಟ್ಟದ ಪರಶುರಾಮಪ್ಪ ಚಿತ್ರಗಾರ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದಲ್ಲಿ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ವತಿಯಿಂದ ಪರಶುರಾಮಪ್ಪ ಚಿತ್ರಗಾರರ ಪುಣ್ಯಸ್ಮರಣಾರ್ಥ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಸಂಜೆ ಜರುಗಿತು.

ಕನ್ನಡಪ್ರಭ ವಾರ್ತೆ ಕಂಪ್ಲಿ

ಪಟ್ಟಣದಲ್ಲಿ ವಿಜಯನಗರ ಜನಪದ ಕರಕುಶಲ ಕಲೆಗಳ ಟ್ರಸ್ಟ್ ವತಿಯಿಂದ ಪರಶುರಾಮಪ್ಪ ಚಿತ್ರಗಾರರ ಪುಣ್ಯಸ್ಮರಣಾರ್ಥ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭ ಸೋಮವಾರ ಸಂಜೆ ಜರುಗಿತು.

ಕಾರ್ಯಕ್ರಮದಲ್ಲಿ ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಪಾರಂಪರಿಕ ಕರಕುಶಲ ಕಲೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸರ್ಕಾರ ನಿರಂತರ ಯೋಜನೆ ರೂಪಿಸಬೇಕು. ಚಿತ್ರಗಾರ ಅವರ ಕಲೆ ಕೇವಲ ಜನಪದ ಪರಂಪರೆಯಲ್ಲ, ಅದು ನಮ್ಮ ಸಾಂಸ್ಕೃತಿಕ ಆಸ್ತಿಯಾಗಿದೆ. ಅದನ್ನು ಪೋಷಿಸಿ ಜತನೆ ಮಾಡುವ ಕಾರ್ಯ ಸರ್ಕಾರದ ಹೊಣೆಗಾರಿಕೆ ಎಂದು ತಿಳಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನಿಷ್ಟಿ ರುದ್ರಪ್ಪ ಮಾತನಾಡಿ, ಆಡಳಿತಾತ್ಮಕವಾಗಿ ಜಿಲ್ಲೆ ವಿಭಜನೆಗೊಂಡಿದ್ದರೂ ಸಾಹಿತ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಬಳ್ಳಾರಿ ಅಖಂಡವಾಗಿದೆ. ಡಿಸೆಂಬರ್‌ನಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಖಂಡ ಬಳ್ಳಾರಿ ಜಿಲ್ಲೆಯನ್ನು ಪ್ರತಿನಿಧಿಸಿ ನಡೆಯಲಿದೆ. ಕರಕುಶಲ ಕಲೆಗಳಲ್ಲಿ ಕಿನ್ನಾಳ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಪರಶುರಾಮಪ್ಪ ಚಿತ್ರಗಾರರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಚಲುವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯನಗರ ಜನಪದ ಹಿನ್ನೆಲೆಯ ಕರಕುಶಲ ಕಲೆಗಳನ್ನು ಪರಶುರಾಮಪ್ಪ ಚಿತ್ರಗಾರ ಜೀವಂತಗೊಳಿಸಿದ್ದರು. ಇತ್ತೀಚೆಗೆ ನಾಲ್ಕು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಅವರ ಕಲೆಯನ್ನು ಅಧ್ಯಯನ ಮಾಡಿದ್ದಾರೆ. ಈ ಕಲಾ ಮಾದರಿಗಳನ್ನು ಸಂಗ್ರಹಿಸಿ ಪ್ರದರ್ಶನಗೊಳಿಸುವುದು, ಉನ್ನತ ಮಟ್ಟದಲ್ಲಿ ಸಂಶೋಧನೆ ನಡೆಸುವುದು ಹಾಗೂ ಪೋಷಿಸುವುದು ಕಾಲದ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರತಿಷ್ಠಿತ ಪರಶುರಾಮಪ್ಪ ಚಿತ್ರಗಾರ ರಾಜ್ಯಮಟ್ಟದ ಪ್ರಶಸ್ತಿ ಈ ಬಾರಿ ಬೆಂಗಳೂರಿನ ಶಿಲ್ಪಕಲಾವಿದ ಕೆ. ಶ್ರೀಧರ ಮೂರ್ತಿ ಅವರಿಗೆ ನೀಡಿ ಗೌರವಿಸಲಾಯಿತು.

ಅವರ ಜೀವಮಾನ ಶ್ರೇಷ್ಠ ಶಿಲ್ಪಕಲೆಯನ್ನು ಟ್ರಸ್ಟ್ ವತಿಯಿಂದ ವಿಶೇಷವಾಗಿ ಗುರುತಿಸಲಾಯಿತು.

ಸಮಾರಂಭದಲ್ಲಿ ಸುಮಿತ್ರಮ್ಮ ಪರಶುರಾಮಪ್ಪ ಚಿತ್ರಗಾರ, ಗುಳೇದಗುಡ್ಡ ನಾರಾಯಣಪ್ಪ ಚಿತ್ರಗಾರ, ಪಿ. ಮೂಕಯ್ಯಸ್ವಾಮಿ, ವೆಂಕಟಸುಬ್ಬರಾಜು, ಷಣ್ಮುಖಪ್ಪ ಚಿತ್ರಗಾರ, ಬಿ. ನಾರಾಯಣಪ್ಪ, ಕಂಬಾಳಿಮಠ, ರಾಜಶೇಖರ, ರಾಮಕೃಷ್ಣಪ್ಪ, ರಮೇಶ್, ರಾಮಚಂದ್ರ, ರವಿ, ರಾಜಾರಾಮ್, ಸುದರ್ಶನ, ಪ್ರಕಾಶ್ ಸೇರಿ ಅನೇಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸುಗ್ಗೇನಹಳ್ಳಿ ರಮೇಶ್ ನಿರೂಪಿಸಿದರು. ಬಂಗಿ ದೊಡ್ಡ ಮಂಜುನಾಥ ಸ್ವಾಗತ ಕೋರಿದರು.