ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಪ.ಪೂ.ಶಿಕ್ಷಣ ಇಲಾಖೆಯ ಆದೇಶದ ಹಿನ್ನೆಲೆಯಲ್ಲಿ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾದ ಟಿನಿಕಾಯ್ಟ್ ಬಾಲಕ ಮತ್ತು ಬಾಲಕಿಯರ ವಿಭಾಗದ ರಾಜ್ಯಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಮತ್ತು ಪ.ಪೂ. ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಸಿ.ಪುಟ್ಟರಾಜು ಅಭಿಪ್ರಾಯಪಟ್ಟರು.ಅವರು ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಪ.ಪೂ. ಶಿಕ್ಷಣ ಇಲಾಖೆ ಹಾಗೂ ಶನಿವಾರಸಂತೆ ಭಾರತಿ ಪ.ಪೂ. ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪ.ಪೂ. ಕಾಲೇಜು ವಿದ್ಯಾರ್ಥಿಗಳ ಬಾಲಕರ ಮತ್ತು ಬಾಲಕಿಯರ ಟೆನಿಕಾಯ್ಟ್ [ರಿಂಗಿನಾಟ] ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಕ್ರೀಡೆಯನ್ನು ಪ್ರತಿಯೊಬ್ಬರೂ ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಪ.ಪೂ. ಶಿಕ್ಷಣ ಇಲಾಖೆಯು 2023- 24ನೇ ಸಾಲಿನ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಟೆನಿಕಾಯ್ಟ್ ಪಂದ್ಯಾವಳಿಯನ್ನು ಕೊಡಗು ಜಿಲ್ಲೆಯಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಗಿತ್ತು. ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ವತಿಯಿಂದ ಪಂದ್ಯಾವಳಿಯನ್ನು ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು. ಟೆನಿಕಾಯ್ಟ್ ಪಂದ್ಯಾವಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಾಲಕ ಮತ್ತು ಬಾಲಕಿಯರ ತಂಡ ಭಾಗವಹಿಸಿರುವ ಹಿನ್ನೆಲೆಯಲ್ಲಿ ಪಂದ್ಯಾವಳಿಗೆ ಯಶಸ್ವಿಗೆ ಪ್ರತಿಯೊಂದು ವಿದ್ಯಾಸಂಸ್ಥೆಗಳ ಮುಖ್ಯಸ್ಥರು, ಆಡಳಿತ ಮಂಡಳಿ, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು. ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಹರೀಶ್ ಮಾತನಾಡಿ, ಸೋಲು ಗೆಲುವು ಸಹಜ ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಇದನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿ ಕ್ರೀಡಾಕೂಟದಲ್ಲಿ ಉತ್ಸಾಹದಲ್ಲಿ ಪಾಲ್ಗೊಳ್ಳಬೇಕು ಎಂದರು. ರಾಜ್ಯಮಟ್ಟದ ಕ್ರೀಡಾಕೂಟವೊಂದನ್ನು ಸ್ಥಳೀಯ ಭಾರತಿ ವಿದ್ಯಾಸಂಸ್ಥೆಯು ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯ ಮತ್ತು ಪ.ಪೂ. ಶಿಕ್ಷಣ ಇಲಾಖೆ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು. ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಎಂ. ಜಗನ್‍ಪಾಲ್ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಕಾಂತರಾಜು, ತುಮಕೂರು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ರಾಜ್ಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಮುರುಗೋಡು, ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಕೆ.ಸಿ. ಚಂದ್ರಶೇಖರ್, ಭಾರತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಗೌಸ್, ಗೌರವ ಕಾರ್ಯದರ್ಶಿ ಎನ್.ಕೆ. ಅಪ್ಪಸ್ವಾಮಿ, ವಿದ್ಯಾಸಂಸ್ಥೆ ಮಾಜಿ ಅಧ್ಯಕ್ಷ ಎನ್.ಬಿ. ನಾಗಪ್ಪ, ಭಾರತಿ ಪ.ಪೂ. ಕಾಲೇಜು ಪ್ರಾಂಶುಪಾಲ ಎಸ್.ಜೆ. ಅಶೋಕ್, ವಿದ್ಯಾಸಂಸ್ಥೆ ನಿರ್ದೇಶಕರು ವಿವಿಧ ಜಿಲ್ಲೆಗಳ ಕ್ರೀಡಾ ವ್ಯವಸ್ಥಾಪಕರು, ವಿವಿಧ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ಹಾಜರಿದ್ದರು.ಟೆನಿಕಾಯ್ಟ್ ಪಂದ್ಯಾವಳಿಯಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಬಾಲಕ ಮತ್ತು ಬಾಲಕಿಯರ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದಾರೆ.