ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾ ಭವನದಲ್ಲಿ ಅ.3ರಿಂದ 10ರ ವರೆಗೆ 28ನೇ ರಾಜ್ಯ ಮಟ್ಟದ ಬಾಲಕ-ಬಾಲಕಿಯರ ಜನಜಾಗೃತಿ ಶಿಬಿರ ನಡೆಯಲಿದೆ.ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಜೊತೆಗೆ ಅವರನ್ನು ಸ್ವಾವಲಂಬಿಗಳಾಗಿ ರೂಪಿಸುವ ಸಲುವಾಗಿ ಕಳೆದ 27 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಜನ ಜಾಗೃತಿ ಶಿಬಿರಕ್ಕೆ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಶ್ರೀಗಳು ಅ.3ರಂದು ಸಂಜೆ ಚಾಲನೆ ನೀಡುವರು. ಅ.10 ರಂದು ಸಮಾರೋಪ ಸಮಾರಂಭ ನಡೆಯಲಿದೆ. 7 ದಿನಗಳ ಶಿಬಿರದಲ್ಲಿ ಪರಿಸರ ನೈರ್ಮಲ್ಯ ದೈನಂದಿನ ವ್ಯಾಯಾಮ, ಆರೋಗ್ಯದ ರಕ್ಷಣೆಯ ಅರಿವು, ಪ್ರಾರ್ಥನೆ, ಧ್ಯಾನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉಪನ್ಯಾಸದ ಜೊತೆಗೆ ಯೋಗಾಭ್ಯಾಸ, ಜ್ಯೋತಿಷ್ಯ, ಭಜನೆ, ಪೂಜಾ ವಿಧಾನ ಮತ್ತು ರಾಷ್ಟ್ರೀಯ ಭಾವೈಕ್ಯತೆ ಕುರಿತು ತರಬೇತಿ ನೀಡಲಾಗುವುದು.
14 ವರ್ಷ ಮೇಲ್ಪಟ್ಟ ಬಾಲಕ ಬಾಲಕಿಯರು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ. ಶಿಬಿರದಲ್ಲಿ ಪಾಲ್ಗೊಳ್ಳುವ ಎಲ್ಲ ಶಿಬಿರಾರ್ಥಿಗಳಿಗೆ ಶ್ರೀಮಠದಿಂದ ಉಚಿತ ಊಟ ವಸತಿ ಸೌಲಭ್ಯವಿದೆ. ಶಿಬಿರಕ್ಕೆ ಸಂಬಂಧಿಸಿದಂತೆ ಸಂಸ್ಕಾರ ಸೌರಭ ಪುಸ್ತಕ, ಲೇಖನ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುವುದು.ಶಿಬಿರಾರ್ಥಿಗಳು ಯೋಗಾಭ್ಯಾಸಕ್ಕೆ ಸಂಬಂಧಿಸಿದ ಉಡುಪು, ದೈನಂದಿನ ಬಳಕೆಯ ವಸ್ತುಗಳು, ಲಘು ಹೊದಿಕೆ ಜೊತೆಗೆ ತಟ್ಟೆ ಲೋಟ ತರಬೇಕು. ಬೆಲೆ ಬಾಳುವ ವಸ್ತು ತರುವಂತಿಲ್ಲ. ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಶಿಬಿರಾರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕಡ್ಡಾಯವಾಗಿ ತರಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಟ್ಟುಹಬ್ಬ ಸಿದ್ಧತೆ ಮಾಡದಂತೆ ಸಿಎಸ್ಪಿ ಮನವಿಪಾಂಡವಪುರ: ಕಾರ್ಯ ನಿಮಿತ್ತ ಅ.1 ಮತ್ತು 2 ರಂದು ಎರಡು ದಿನಗಳ ಕಾಲ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಕ್ಷೇತ್ರದಲ್ಲಿ ಲಭ್ಯವಿಲ್ಲದ ಕಾರಣ ಪಕ್ಷದ ಕಾರ್ಯಕರ್ತರು, ಮುಖಂಡರು, ಹಿತೈಸಿಗಳು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಸಿದ್ಧತೆಗಳನ್ನು ಮಾಡಿಕೊಳ್ಳಬಾರದೆಂದು ಸಿ.ಎಸ್.ಪುಟ್ಟರಾಜು ಅವರ ಆಪ್ತ ಸಹಾಯಕ ದೇವೇಗೌಡ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.