18ರಿಂದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ

| Published : May 06 2025, 12:18 AM IST

ಸಾರಾಂಶ

ಶಿವಮೊಗ್ಗ: ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಮೇ 18ರಿಂದ 21ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಶಿವಮೊಗ್ಗ: ಜಿಲ್ಲಾಡಳಿತವು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಮೇ 18ರಿಂದ 21ರವರೆಗೆ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಶಿವಮೊಗ್ಗದಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದ್ದು, ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ-2025ರ ಕುರಿತು ಸೋಮವಾರ ಸಂಜೆ ಏರ್ಪಡಿಸಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 15000ಕ್ಕೂ ಹೆಚ್ಚಿನ ನೌಕರ ಕ್ರೀಡಾಪಟುಗಳು ಆಗಮಿಸುವ ನಿರೀಕ್ಷೆಯಿದ್ದು, ಅವರ ವಸತಿ ಹಾಗೂ ಊಟೋಪಹಾರ ಮತ್ತು ಸಾರಿಗೆ ವ್ಯವಸ್ಥೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ನಗರದ ನೆಹರೂ ಕ್ರೀಡಾಂಗಣ, ಜೆ.ಎನ್.ಎನ್.ಸಿ.ಇ. ಕಾಲೇಜು ಮತ್ತು ಗೋಪಾಳದ ಕ್ರೀಡಾ ಸಂಕೀರ್ಣಗಳಲ್ಲಿ ವಿವಿಧ ಕ್ರೀಡೆಗಳನ್ನು ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇದರೊಂದಿಗೆ ನಗರದ ಕುವೆಂಪು ರಂಗಮಂದಿರ ಮತ್ತು ಡಾ.ಬಿ.ಆರ್.ಅಂಬೇಡ್ಕರ್‌ ಭವನಗಳಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೇ ಅಗತ್ಯವಿದ್ದಲ್ಲಿ ಇನ್ನಷ್ಟು ಸಮನಾಂತರ ವೇದಿಕೆಗಳನ್ನು ಸೃಜಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟವು ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಜೊತೆಗೆ ಆಹ್ವಾನಿತ ಕ್ರೀಡಾಪಟುಗಳು ಸ್ಥಳೀಯ ನಾಗರಿಕರಿಗಾಗಿ ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಲಾಗಿದೆ. ಕ್ರೀಡಾಕೂಟದ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳ ನೇತೃತ್ವದಲ್ಲಿ ಹಲವು ಸಮಿತಿಗಳನ್ನು ರಚಿಸಲಾಗಿದ್ದು, ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ. ಕ್ರೀಡೆಗಳಲ್ಲಿ ಉತ್ತಮ ಹಾಗೂ ನುರಿತ ತೀರ್ಪುಗಾರರನ್ನು ನೇಮಿಸಲು ಉದ್ದೇಶಿಸಲಾಗಿದೆ. ಅಗತ್ಯವಿದ್ದಲ್ಲಿ ನೆರೆಯ ಜಿಲ್ಲೆಗಳ ನುರಿತ ತೀರ್ಪುಗಾರರನ್ನು ಬಳಸಿಕೊಳ್ಳಲು ಯತ್ನಿಸಲಾಗುವುದು. ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಹಾಗೂ ಅವರು ತಂಗುವ ಸ್ಥಳಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು.

ಅಲ್ಲದೇ ಈ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಕ್ರೀಡಾಪಟುಗಳ ಆರೋಗ್ಯ, ಆಕಸ್ಮಿಕ ಅಗ್ನಿ ಅವಘಡ ಸೇರಿದಂತೆ ತಕ್ಷಣದ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಹಾಗೂ ತುರ್ತು ಮಾಹಿತಿಗಾಗಿ ಸಂಪರ್ಕಿಸಲು ಅಧಿಕಾರಿಗಳೊಬ್ಬರನ್ನು ನೇಮಿಸಲಾಗುವುದು. ಕಾರ್ಯಕ್ರಮವನ್ನು ಇನ್ನಷ್ಟು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಎನ್.ಎಸ್.ಎಸ್., ಎನ್.ಸಿ.ಸಿ., ಸ್ಕೌಟ್‌ ಮತ್ತು ಗೈಡ್ಸ್‌ಗಳ ಸಹಕಾರವನ್ನು ಪಡೆದುಕೊಳ್ಳಲಾಗುವುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಕಾರ್ಯಕ್ರಮದ ಮೊದಲ ದಿನ ಸಂಜೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಆಗಮಿಸಲಿರುವರು. ಈ ಉದ್ಘಾಟನಾ ಕಾರ್ಯಕ್ರಮದ ನಂತರ ಗಾಯಕ ರಾಜೇಶ್‌ಕೃಷ್ಣನ್‌ ಅವರಿಂದ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಮೇ 19ರಂದು ಬೆಳಗ್ಗೆಯಿಂದ ಸಂಜೆಯವರೆಗೆ ನಿರಂತರವಾಗಿ ವಿವಿಧ ವೇದಿಕೆಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ. ಅದೇ ದಿನ ಸಂಜೆ ಜಾನಪದ ದಿಬ್ಬಣ ಎಂಬ ನಾಡಿನ ಜನಪದ ಕಲಾತಂಡಗಳಿಂದ ಕಾರ್ಯಕ್ರಮ ವೈವಿಧ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ಹೆಸರಾಂತ ಜನಪದ ಕಲಾತಂಡಗಳು ಆಗಮಿಸಲಿವೆ. ಮೇ 20ರಂದು ಎಂದಿನಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿವೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ, ಜಿಪಂ ಉಪಕಾರ್ಯದರ್ಶಿ ಸುಜಾತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆರ್.ಮೋಹನ್‌ಕುಮಾರ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ ಮತ್ತಿತರರಿದ್ದರು.