ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಈ ಬಾರಿ ಚಿತ್ರದುರ್ಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ ಎಂದು ಒಕ್ಕೂಟದ ಡಾ.ಗಾಯತ್ರಿ ಮಾಹಿತಿ ನೀಡಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಜಿಲ್ಲೆ ಬುಡಕಟ್ಟು, ದಲಿತ ಹಾಗೂ ಶೋಷಿತ ಸಮುದಾಯಗಳನ್ನು ಹೊಂದಿದ್ದು, ಆರ್ಥಿಕವಾಗಿ ಹಿಂದುಳಿದಿದೆ. ಇಲ್ಲಿನ ಮಹಿಳೆಯರು ಎದುರಿಸುತ್ತಿರುವ ಮುಟ್ಟಿನ ಸಮಸ್ಯೆಗಳು, ಬಾಲ್ಯ ವಿವಾಹ, ಬಾಲ ಗರ್ಭಿಣಿ ಹಾಗೂ ಹದಿಹರೆಯದವರ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅರಿವಿನ ಪಯಣ ಮತ್ತು ಒಕ್ಕೂಟದ ಚಟುವಟಿಕೆಗಳು ಮೈಲಿಗಲ್ಲಾಗಲಿವೆ. ಹಾಗಾಗಿ ಮುಂಬರುವ ಮಾರ್ಚ್‌ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸರ್ವರ ಸಹಕಾರದೊಂದಿಗೆ ಯಶಸ್ವಿಗೊಳಿಸಲಾಗುವುದೆಂದರು.

ಮೈಸೂರಿನ ನ್ಯಾಯವಾದಿ ಸುಮನ ಮಾತನಾಡಿ, ದೆಹಲಿಯ ನಿರ್ಭಯ ಪ್ರಕರಣ, ಮಂಗಳೂರಿನ ಪಬ್ ಹಾಗೂ ಹೋಂ ಸ್ಟೇ ದಾಳಿಗಳಂತಹ ಘಟನೆಗಳು ಪ್ರಜಾತಂತ್ರದ ಸಮಾನತೆಯ ಮೌಲ್ಯಗಳಿಗೆ ಧಕ್ಕೆ ತಂದಿವೆ. ಇಂತಹ ಹಿಂಸೆ ಮತ್ತು ಅಸಮಾನತೆಯನ್ನು ಅಹಿಂಸಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಎದುರಿಸಲು ಒಕ್ಕೂಟ ರೂಪುಗೊಂಡಿದೆ. ಒಕ್ಕೂಟದಲ್ಲಿ ಯಾವುದೇ ಹುದ್ದೆ, ಪದವಿ ಅಥವಾ ಮೇಲು-ಕೀಳೆಂಬ ಭೇದಭಾವವಿಲ್ಲ. ಎಲ್ಲರೂ ಸಮಾನರು ಹಾಗೂ ಸಹೋದರಿತ್ವವೇ ನಮ್ಮ ಅತಿದೊಡ್ಡ ಶಕ್ತಿ ಎಂದು ಹೇಳಿದರು.

ಒಕ್ಕೂಟದ ಕಾರ್ಯಶೈಲಿಯನ್ನು ವಿವರಿಸಿದ ವಾಣಿ ಪೆರಿಯೋಡಿ, ಸಮಾಜದಲ್ಲಿ ಲಿಂಗಸೂಕ್ಷ್ಮತೆ ಹಾಗೂ ಸಮಾನತೆಯ ಅರಿವನ್ನು ಮೂಡಿಸುವುದು ಮತ್ತು ಜಾಗೃತಿ ಉಂಟು ಮಾಡುವುದೇ ಅರಿವಿನ ಪಯಣ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.


​ನಿವೃತ್ತ ಉಪಕುಲಪತಿ ಸಬಿಹಾ ಭೂಮಿಗೌಡ ಮಾತನಾಡಿ, ಒಕ್ಕೂಟವು ಇದುವರೆಗೆ ರಾಜ್ಯದ 14 ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಯಶಸ್ವಿಯಾಗಿ ಸಂಘಟಿಸಿದ್ದು, ಇದೀಗ 15ನೇ ಜಿಲ್ಲೆಯಾಗಿ ಚಿತ್ರದುರ್ಗ ಆಯ್ಕೆ ಮಾಡಿಕೊಂಡಿದೆ. 2027ರ ಮಾರ್ಚ್ 7 ಮತ್ತು 8 ರಂದು ನಡೆಯಲಿರುವ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪೂರ್ವಸಿದ್ಧತಾ ಸಭೆಗಳು ಹಾಗೂ ಕಾರ್ಯಚಟುವಟಿಕೆಗಳು ಪ್ರಸ್ತುತ ಭರದಿಂದ ಸಾಗಿವೆ ಎಂದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಸದಸ್ಯೆ ರೇಖಾಂಬ ನಿವೃತ್ತ ಪ್ರಾಧ್ಯಾಪಕಿ ಡಾ.ಸಬಿತಾ ಬನ್ನಾಡಿ, ಅರುಂಧತಿ, ನಸ್ರೀನ್, ಶಾಂತ, ಡಾ. ಮಮತಾ ಆರ್. ಬೈಲಮ್ಮ ಉಪಸ್ಥಿತರಿದ್ದರು.