ಕರ್ನಾಟಕ ಅಮೆಚೂರ್ ಖೋ ಖೋ ಅಸೋಸಿಯೇಷನ್, ಮೈಸೂರು ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್ ಹಾಗೂ ಹರಿ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಮಹಿಳೆಯರಿಗಾಗಿ ರಾಜ್ಯ ಮಟ್ಟದ ಸೀನಿಯರ್ ಖೋ ಖೋ ಪಂದ್ಯಾವಳಿಯಲ್ಲಿ ಚಾಮರಾಜನಗರ ತಂಡ ಚಾಂಪಿಯನ್‌ ಎನಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ಅಮೆಚೂರ್ ಖೋ ಖೋ ಅಸೋಸಿಯೇಷನ್, ಮೈಸೂರು ಜಿಲ್ಲಾ ಅಮೆಚೂರ್ ಖೋ ಖೋ ಅಸೋಸಿಯೇಷನ್ ಹಾಗೂ ಹರಿ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ಮಹಿಳೆಯರಿಗಾಗಿ ರಾಜ್ಯ ಮಟ್ಟದ ಸೀನಿಯರ್ ಖೋ ಖೋ ಪಂದ್ಯಾವಳಿಯಲ್ಲಿ ಚಾಮರಾಜನಗರ ತಂಡ ಚಾಂಪಿಯನ್‌ ಎನಿಸಿಕೊಂಡಿತು.

ಟೂರ್ನಿಯ ಅತ್ಯಂತ ಕುತೂಹಲಕಾರಿ ಘಟ್ಟವಾದ ಫೈನಲ್ ಪಂದ್ಯದಲ್ಲಿ ಚಾಮರಾಜನಗರ ತಂಡವು ಬೆಂಗಳೂರು ತಂಡದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ. ಭರ್ಜರಿ ಜಯ ಸಾಧಿಸುವ ಮೂಲಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಬೆಂಗಳೂರು ತಂಡ ರನ್ನರ್‌ ಅಪ್‌ ಆಯಿತು. ಮೈಸೂರು ಹಾಗೂ ಹಾವೇರಿ ತಂಡಗಳು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡವು. ಇದಲ್ಲದೇ ಧಾರವಾಡ, ತುಮಕೂರು, ಬೆಳಗಾವಿ ಹಾಗೂ ಗದಗ ಜಿಲ್ಲಾ ತಂಡಗಳು ಕೂಡ ಪಾಲ್ಗೊಂಡಿದ್ದವು.

ಚಾಮರಾಜನಗರ ತಂಡದ ಪ್ರೀತಿ ಅತ್ಯುತ್ತಮ ಡಿಫೆಂಡರ್‌, ಬೆಂಗಳೂರಿನ ಭವಾನಿ ಅತ್ಯುತ್ತಮ ಆಟ್ಯಾಕರ್‌ ಹಾಗೂ ಚಾಮರಾಜನಗರದ ನದಿಯಾ ಅತ್ತುತ್ತಮ ಆಲ್‌ರೌಂಡರ್‌ ಪ್ರಶಸ್ತಿ ಪಡೆದರು.

ಮೈಸೂರಿನ ಮಾಜಿ ಮೇಯರ್ ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತ ದಿ. ಎನ್. ಪ್ರಕಾಶ್ ಅವರ ಸ್ಮರಣಾರ್ಥ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಸಮಾರೋಪ ಸಮಾರಂಭದಲ್ಲಿ ರಾಷ್ಟ್ರ ಮಟ್ಟದ ಹಿರಿಯ ಖೋ ಖೋ ಆಟಗಾರ್ತಿ ಆರ್. ಭವ್ಯಶ್ರೀ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಳ್ಳಬೇಕು. ಕ್ರೀಡೆ ಶಿಸ್ತು ಕಲಿಸುತ್ತದೆ ಎಂದರು.

ಗುರು- ಹಿರಿಯರಿಗೆ ಗೌರವ ನೀಡಬೇಕು. ಆತ್ಮವಿಶ್ವಾಸ ಇರಬೇಕು. ಇದರಿಂದ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಅಮೇಚೂರ್‌ ಖೋಖೋ ಅಸೋಸಿಯೇಷನ್‌ ಅಧ್ಯಕ್ಷ ನಾಗರಾಜ್ ವಿ. ಬೈರಿ ಮಾತನಾಡಿ, ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿದ 12 ಕ್ರೀಡಾಪಟುಗಳನ್ನು ಜ. 31 ರಿಂದ ಫೆ. 3 ರವರೆಗೆ ತುಮಕೂರಿನಲ್ಲಿ ನಡೆಯಲಿರುವ ‘ಖೋ-ಖೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟ’ಕ್ಕೆ ಕರ್ನಾಟಕ ತಂಡದ ಪರವಾಗಿ ಆಯ್ಕೆ ಮಾಡಲಾಗುವುದು ಎಂದರು.

ಸೋಲನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಲ್ಲಿ ಮುಂದೆ ಯಶಸ್ಸು ಕಾಣಬಹುದು. ಕ್ರೀಡಾ ಮನೋಭಾವ, ಆತ್ಮವಿಶ್ವಾಸ ಇರಬೇಕು. ಅದರ ಜೊತೆಗೆ ಖೋ ಖೋದಲ್ಲಿ ವೇಗ ಮತ್ತು ಚುರುಕುತನ ಇರಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಹರಿ ವಿದ್ಯಾಲಯದ ಕಾರ್ಯದರ್ಶಿ ಎಚ್.ಆರ್. ಭಗವಾನ್ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕ. ವಿದ್ಯಾರ್ಥಿನಿಯರು ಅಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕ್ರಿಕೆಟ್‌ ಮಾತ್ರವಲ್ಲ ಖೋ ಖೋ, ಕಬ್ಬಡಿ ಆಟಕ್ಕೂ ಜನಮನ್ನಣೆ ಸಿಗಬೇಕು ಎಂದರು.

ಕ್ರೀಡಾಕೂಟವನ್ನು ಸಮಾಜ ಸೇವಕಿ ಸುಧಾ ಮೃತ್ಯುಂಜಯಪ್ಪ ಉದ್ಘಾಟಿಸಿ, ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತರಬೇಕು. ಗ್ರಾಮೀಣ ಕ್ರೀಡೆಯಾದ ಖೋ-ಖೋ ನಶಿಸಿಹೋಗದಂತೆ ಇಂತಹ ಕೂಟಗಳು ಸಹಕಾರಿ ಎಂದರು.

ಕೆಎಕೆಎ ಕಾರ್ಯದರ್ಶಿ ಚಿನ್ನಮೂರ್ತಿ ಮಾತನಾಡಿದರು. ಬೆಂಗಳೂರು ಬಿಬಿಎಂಪಿ ತೋಟಗಾರಿಕೆ ವಿಭಾಗದ ಸಹಾಯಕ ನಿರ್ದೇಶಕ ಸುಧೀಂದ್ರಕುಮಾರ್‌, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಎಂ.ಡಿ.ಎ.ಕೆ.ಕೆ.ಎ ಉಪಾಧ್ಯಕ್ಷ ಬಿ. ಸುಬ್ರಮಣ್ಯ ಕಾರ್ಯದರ್ಶಿ ಮಹದೇವಪ್ಪ, ಖಜಾಂಚಿ ಸಂದೇಶ್‌ ಪ್ರಕಾಶ್‌, ಜನತಾ ಏಜೆನ್ಸೀಸ್‌ ಮಾಲೀಕ ಜಿನೇಶ್, ಮತ್ತು ಕೆಎಕೆಎ ಸಹ ಕಾರ್ಯದರ್ಶಿ ಸಿ. ಎಫ್. ಜಾಡರ್, ಅಶ್ವಿನಿ ಭಾಗವಹಿಸಿದ್ದರು. ಹರಿವಿದ್ಯಾಲಯ ಉಪನ್ಯಾಸಕಿ ರಮ್ಯಾಭೂಮಿ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿತ್ರಣ ನಿರ್ದೇಶಕ ಶ್ರೀಕಾಂತ್‌, ಡೀನ್‌ ಬ್ರಿಜೇಶ್‌ ಪಟೇಲ್‌ ವಿಜೇತರ ಪಟ್ಟಿ ಓದಿದರು.