ಬರುವ ನ. 26, 27, 28 ಮೂರು ದಿನಗಳ ಕಾಲ ರಾಜ್ಯಮಟ್ಟದ ಶಾಲಾ ಶಿಕ್ಷಣ (ಪದವಿ ಪೂರ್ವ 19 ವರ್ಷದೊಳಗಿನ ಎಸ್ ಜಿ ಎಫ್ ಐ) ಇಲಾಖೆಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟ ಬ್ಯಾಡಗಿ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಪುರಸಭೆ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಬ್ಯಾಡಗಿ: ಬರುವ ನ. 26, 27, 28 ಮೂರು ದಿನಗಳ ಕಾಲ ರಾಜ್ಯಮಟ್ಟದ ಶಾಲಾ ಶಿಕ್ಷಣ (ಪದವಿ ಪೂರ್ವ 19 ವರ್ಷದೊಳಗಿನ ಎಸ್ ಜಿ ಎಫ್ ಐ) ಇಲಾಖೆಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟ ಬ್ಯಾಡಗಿ ಎಸ್‌ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಪುರಸಭೆ ಸಭಾಂಗಣದಲ್ಲಿ ಜರುಗಿದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾವೇರಿ, ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ, ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಬ್ಯಾಡಗಿ, ಪದವಿ ಪೂರ್ವ ಕಾಲೇಜುಗಳ ದೈಹಿಕ ನಿರ್ದೇಶಕರ ರಾಜ್ಯ ಮತ್ತು ಜಿಲ್ಲಾ ಘಟಕ ಇವರ ಮಾರ್ಗದರ್ಶನದಲ್ಲಿ ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ರಾಜ್ಯಮಟ್ಟದ 19 ವರ್ಷದೊಳಗಿನ ಬಾಲಕಿಯರ ಕಬಡ್ಡಿ ಚಾಂಪಿಯನ್ ಶಿಪ್ ನಡೆಯಲಿದೆ.

ಕ್ರೀಡೆಗಳಿಗೆ ಜೀವ ತುಂಬುವ ಕೆಲಸ: ಸಭೆಯನ್ನುದ್ದೇಶಿಸಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಅಗತ್ಯ ಅನುದಾನದ ಕೊರತೆಯಿಂದ ಶಾಲಾ ಕಾಲೇಜು ಮಟ್ಟದಲ್ಲಿ ನಡೆಯುತ್ತಿರುವ ಬಹುತೇಕ ಕ್ರೀಡಾಕೂಟಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ, ಈ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ (ರಿ.) ಸ್ಥಳೀಯ ಶಾಸಕರ ಹಾಗೂ ವಿವಿಧ ಸಂಘಟನೆಗಳ ಸಹಕಾರದಿಂದ ಇಲಾಖೆಯ ಜೊತೆ ಕೈಜೋಡಿಸಿ ಇಂತಹ ಕ್ರೀಡಾಕೂಟಗಳನ್ನು ಸಂಘಟನಾತ್ಮಕವಾಗಿ ಆಯೋಜಿಸಿ ಅದ್ಧೂರಿಯಾಗಿ ನಡೆಸುವ ಮೂಲಕ ಕ್ರೀಡೆಗಳಿಗೆ ಜೀವ ತುಂಬುವ ಕೆಲಸವನ್ನು ಕಳೆದ 25 ವರ್ಷಗಳಿಂದ ಮಾಡುತ್ತಿದೆ ಎಂದರು.

ರಾಷ್ಟಮಟ್ಟಕ್ಕೂ ದಿನಾಂಕ ನಿಗದಿ:ಹಾವೇರಿ ಜಿಲ್ಲಾ ಅಮೇಚೂರ ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಇದೇ ವಿಭಾಗದ ರಾಷ್ಟ್ರಮಟ್ಟದ ಕ್ರೀಡಾಕೂಟವೂ ಸಹ ಡಿ.16ರಿಂದ 20ರ ವರೆಗೆ ಬ್ಯಾಡಗಿಯಲ್ಲಿ ಅದೇ ಸ್ಥಳದಲ್ಲಿ ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ 38 ತಂಡಗಳು ಪಾಲ್ಗೊಳ್ಳಲಿದ್ದು ಆಯೋಜನೆಗಾಗಿ ₹ 1 ಕೋಟಿಗೂ ಅಧಿಕ ಹಣ ವ್ಯಯಿಸುವ ಗುರಿ ಹೊಂದಲಾಗಿದೆ ಎಂದರು.

ಕಬಡ್ಡಿ ರಥ ಸಂಚಾರ:ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಡಿಡಿಪಿಐ ಬಸವರಾಜ ಇಟ್ಟಿಗುಡಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡಾಕೂಟ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಬಡ್ಡಿ ರಥವನ್ನು ಜಿಲ್ಲೆಯ 8 ತಾಲೂಕುಗಳಲ್ಲಿ ಸಂಚರಿಸುವಂತೆ ನೋಡಿಕೊಳ್ಳಲಾಗುವುದು ಎಂದ ಅವರು, ಇದಕ್ಕಾಗಿ ಜಿಲ್ಲೆಯ ಎಲ್ಲಾ ಕಾಲೇಜುಗಳ ದೈಹಿಕ ನಿರ್ದೆಶಕರು ಹಾಗೂ ವಿಷಯ ಶಿಕ್ಷಕರ ಸಹಕಾರ ಕೋರಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕಬಡ್ಡಿ ತರಬೇತುದಾರ ಎಲ್.ಮಹ್ಮದ ಇಸ್ಮಾಯಿಲ್ ಕ್ರೀಡಾಕೂಟ ಯಶಸ್ವಿಗೆ ಅವಶ್ಯವಿರುವ ಮಾಹಿತಿಗಳನ್ನು ಸಭೆಗೆ ತಿಳಿಸಿದರು.

ಎಸ್‌ಜೆಜೆಎಂ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಡಾ. ಮಾಲತೇಶ ಬಂಡೆಪ್ಪನವರ ಅಧ್ಯಕ್ಷತೆ ವಹಸಿದ್ದರು. ದೈಹಿಕ ನಿರ್ದೇಶಕರ ಸಂಘದ ಜಿಲ್ಲಾ ಬೀರಪ್ಪ ಲಮಾಣಿ, ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ನಿಸ್ಸೀಮಗೌಡ್ರ, ಪ್ರಾಚಾರ್ಯ ಶಿವಾನಂದ ಬೆನ್ನೂರ, ಶಿವರಾಜ ಗುಂಡೆ, ಎಂ.ಟಿ. ಸಣ್ಣಕ್ಕಿ, ಪ್ರಕಾಶ ಡಮ್ರಳ್ಳಿ, ಎಂ.ಆರ್. ಕೋಡಿಹಳ್ಳಿ, ಪ್ರಕಾಶ ತಾವರಗಿ, ಎಂ.ಸಿ. ನಾಗವಂದ, ಎನ್.ಎಸ್. ಪ್ಯಾಟಿ, ಮಂಜುಳ ಭಜಂತ್ರಿ ಸೇರಿದಂತೆ ಇನ್ನಿತರರಿದ್ದರು. ಡಿ.ಬಿ.ಕುಸಗೂರ ಸ್ವಾಗತಿಸಿ ನಿರೂಪಿಸಿದರು. ಎ.ಟಿ. ಪೀಠದ ವಂದಿಸಿದರು.