ಸಾರಾಂಶ
ಮಡಿಕೇರಿ ನೆಲಕ್ಕಿ ಯುವತಿ ಮಂಡಳಿ ಸದಸ್ಯರಾದ ಜೀವಿತಾ ಚಿಂತನ್, ಬಹುಮುಖ ಪ್ರತಿಭೆಯ ಕಲಾವಿದೆ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.20ರಂದು ಸುಬ್ರಮಣ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯ ಮೂಲತಃ ತಾಳತ್ ಮನೆ ನಿವಾಸಿ, ಮಡಿಕೇರಿ ನೆಲಕ್ಕಿ ಯುವತಿ ಮಂಡಳಿ ಸದಸ್ಯರಾದ ಜೀವಿತಾ ಚಿಂತನ್, ಬಹುಮುಖ ಪ್ರತಿಭೆಯ ಕಲಾವಿದೆ ರಾಜ್ಯಮಟ್ಟದ ಯುವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ವತಿಯಿಂದ ನೀಡುವ 15ರಿಂದ 29 ವರ್ಷ ವಯೋಮಿತಿಯವರಿಗೆ ನೀಡುವ ವೈಯಕ್ತಿಕ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.20ರಂದು ಸುಬ್ರಮಣ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಜೀವಿತಾ, ಮಾಜಿ ಸೈನಿಕರಾದ ಇದೀಗ ಮಂಗಳೂರಿನ ಕೇಂದ್ರ ಸೀಮಾ ಶುಲ್ಕ ವಿಭಾಗದಲ್ಲಿ ಸೇವೆಯಲ್ಲಿರುವ ಕೇಕಡ ರವೀಂದ್ರ ಹಾಗೂ ಇಂದುಮತಿ ದಂಪತಿ ಪುತ್ರಿ. ಮಾಜಿ ಸೈನಿಕ ಸುಳ್ಯ ಕೊಡಿ ಜಿ. ನಾಣಯ್ಯ ಹಾಗೂ ಸರೋಜ ದಂಪತಿಯ ಸೊಸೆಯಾಗಿದ್ದಾರೆ.ಜೀವಿತಾ ಈಗ ಪ್ರತಿಷ್ಠಿತ ಆದಿಚುಂಚನಗಿರಿಯ ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಈ ಹಿಂದೆ ರಾಜ್ಯಮಟ್ಟದ ಭಾರತ್ ಸ್ಕೌಟ್ ಆ್ಯಂಡ್ ಗೈಡ್ ಪುರಸ್ಕಾರ, ಪ್ರತಿಭಾ ರತ್ನ ರಾಜ್ಯ ಪ್ರಶಸ್ತಿ, ಕಲಕುಸುಮರಾಜ ಪ್ರಶಸ್ತಿ ಹಾಗೂ ಇನ್ನೂ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ಯುವತಿ ಮಂಡಳಿ ವತಿಂದ ವಿವಿಧ ಕಾರ್ಯಕ್ರಮಗಳಾದ ತಾಲೂಕು ಯುವಜನ ಮೇಳ, ಜಿಲ್ಲಾ ಯುವಜನ ಮೇಳ, ರಾಜ್ಯ ಯುವಜಮೇಳ ಹಾಗೂ ಜಿಲ್ಲಾ ಯುವಜನೋತ್ಸವ, ರಾಜ್ಯ ಯುವಜನೋತ್ಸವ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು ಹಾಗೂ ಶ್ರಮದಾನ ರಕ್ತದಾನ, ಶೈಕ್ಷಣಿಕ ಚಟುವಟಿಕೆ, ದಸರಾ ಕಾರ್ಯಕ್ರಮ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ಹಾಡುಗಾರರು, ನೃತ್ಯಗಾರರು, ಶಿಕ್ಷಕಿಯೂ ಹಾಗೂ ಲೇಖಕರು ಆಗಿದ್ದಾರೆ.