ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪಠ್ಯಕ್ಕಿಂತ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ವಿದ್ಯಾರ್ಥಿಗಳು ಜೀವನ ಸಾಗಿಸುವುದನ್ನು ಕಲಿತುಕೊಳ್ಳುತ್ತಾರೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.ನಗರದ ಸರಸ್ವತಿಪುರಂನಲ್ಲಿರುವ ಎನ್‌ಎಸ್‌ಎಸ್ ಭವನದಲ್ಲಿ ಮೈಸೂರು ವಿವಿ ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವ 2024- 25 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲಾ ಕಾಲೇಜುಗಳಲ್ಲಿ ಎರಡು ವರ್ಗದ ವಿದ್ಯಾರ್ಥಿಗಳನ್ನು ಕಾಣುತ್ತೇವೆ. ಒಂದು ವರ್ಗದ ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚಿನ ಅಂಕ ಗಳಿಸುವ ಗುರಿಯನ್ನು ಮಾತ್ರ ಇಟ್ಟುಕೊಂಡಿದ್ದರೆ, ಮತ್ತೊಂದು ವರ್ಗ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಕಾಣುತ್ತೇವೆ ಎಂದರು.ಎನ್‌ಎಸ್‌ಎಸ್ ಮತ್ತು ಎನ್ ಸಿಸಿ ವಿದ್ಯಾರ್ಥಿಗಳು ಶಿಬಿರಕ್ಕಾಗಿ ಹೊರಗೆ ಹೋದಾಗ ಕೆಲವು ತರಗತಿಯಿಂದ ವಂಚಿತರಾಗುತ್ತೀರಿ. ಆದರೆ, ಹೊರಗೆ ಹೋದಾಗ ಜೀವನದ ಕಲೆ ಕಲಿಯಲು ಸಹಕಾರಿಯಾಗುತ್ತದೆ. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಶ್ರಮದಾನ, ಜನಜಾಗೃತಿ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮ, ನಮ್ಮ ಸಂಸ್ಕೃತಿ, ಸ್ಥಳೀಯ ಜನಪದ ಕಲೆಗಳನ್ನು ಪ್ರದರ್ಶಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.
ಬಹುಮಾನ ವಿತರಣೆಇದೇ ವೇಳೆ ವಿವಿಧ ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಲೇಖನ ಹಾಗೂ ಸುಪ್ರಿತ್ ಅತ್ಯುತ್ತಮ ಸ್ವಯಂ ಸೇವಕ ಪ್ರಶಸ್ತಿ ಪಡೆದುಕೊಂಡರು. ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಗಳೂರು ವಿವಿ ಎನ್‌ಎಸ್‌ಎಸ್ ತಂಡ (ಪ್ರಥಮ), ರಾಯಚೂರು ಅಗ್ರಿಕಲ್ಚರಲ್ ವಿವಿ (ದ್ವಿತೀಯ), ಮೈಸೂರು ವಿವಿ (ತೃತೀಯ) ಬಹುಮಾನ ವಿತರಿಸಲಾಯಿತು. ವಸ್ತುಪ್ರದರ್ಶನ ಸ್ಪರ್ಧೆಯಲ್ಲಿ ಮಂಗಳೂರು ವಿವಿ (ಪ್ರಥಮ), ಮೈಸೂರು ವಿವಿ (ದ್ವಿತೀಯ) ಹಾಗೂ ರಾಯಚೂರು ಅಗ್ರಿಕಲ್ಚರಲ್ ವಿವಿ (ತೃತೀಯ) ಬಹುಮಾನ ಪ್ರದಾನ ಮಾಡಲಾಯಿತು.
ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶಕ ಡಿ. ಕಾರ್ತಿಕೇಯನ್ ಸಮಾರೋಪ ಭಾಷಣ ಮಾಡಿದರು. ಮೈಸೂರು ವಿವಿ ಸಿಂಡಿಕೇಟ್ ಸದಸ್ಯರಾದ ಪ್ರೊ. ಶಬ್ಬೀರ್ ಮೊಹಮದ್ ಮುಸ್ತಫಾ, ಮಹಾದೇಶು, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ಎಂ.ಬಿ. ಸುರೇಶ ಮೊದಲಾದವರು ಇದ್ದರು.