ಜೂನ್‌ 27,28ರಂದು ರಾಜ್ಯಮಟ್ಟದ ಯುವ ಸಾಹಿತ್ಯ ಸಮಾವೇಶ

| Published : Jun 25 2024, 12:37 AM IST

ಸಾರಾಂಶ

ಪ್ರಸ್ತುತ ಯುವ ಜನತೆ ಸಾಕಷ್ಟು ಸಾಹಿತ್ಯ ರಚನೆಯಲ್ಲಿ ತೊಡಗಿದ್ದು, ಯುವ ಬರಹಗಾರರು ಹೊರಹೊಮ್ಮುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬರವಣಿಗೆಯಲ್ಲಿ ಮತ್ತಷ್ಟು ಶಿಸ್ತು ಮೂಡಿಸುವ ಉದ್ದೇಶದಿಂದ ಸಮಾವೇಶ ಆಯೋಜಿಸಲಾಗಿದೆ.

ಧಾರವಾಡ

ಪ್ರಸ್ತುತ ಯುವ ಜನತೆ ಸಾಕಷ್ಟು ಸಾಹಿತ್ಯ ರಚನೆಯಲ್ಲಿ ತೊಡಗಿದ್ದು, ಯುವ ಬರಹಗಾರರು ಹೊರಹೊಮ್ಮುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಬರವಣಿಗೆಯಲ್ಲಿ ಮತ್ತಷ್ಟು ಶಿಸ್ತು ಮೂಡಿಸುವ ಉದ್ದೇಶದಿಂದ ಕರ್ನಾಟಕ ವಿದ್ಯಾವರ್ಧಕ ಸಂಘವು ಕಣ್ಣ ಮುಂದಿನ ಬೆಳಕು ಹೆಸರಿನಲ್ಲಿ ರಾಜ್ಯಮಟ್ಟದ ಯುವ ಸಾಹಿತ್ಯ ಸಮಾವೇಶ ಆಯೋಜಿಸಿದೆ.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜೂನ್‌ 27 ಹಾಗೂ 28ರಂದು ಈ ಸಮಾವೇಶ ಆಯೋಜಿಸಿದ್ದು ರಾಜ್ಯದ ವಿವಿಧ ಭಾಗಗಳಿಂದ 100ಕ್ಕೂ ಹೆಚ್ಚು ಯುವ ಬರಹಗಾರರು ಹಾಗೂ ಸಾಹಿತಿಗಳು ಭಾಗವಹಿಸಲಿದ್ದಾರೆ. ಜೂ. 27ರಂದು ಬೆಳಗ್ಗೆ 10ಕ್ಕೆ ಹಿರಿಯ ಸಾಹಿತಿ ಡಾ. ಓ.ಎಲ್‌. ನಾಗಭೂಷಣ ಉದ್ಘಾಟಿಸಲಿದ್ದು ಡಾ. ಎಂ.ಡಿ.ವಕ್ಕುಂದ ಆಶಯ ನುಡಿ ಹೇಳಲಿದ್ದಾರೆ. ಪ್ರೊ.ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದರು.

ಅಂತರಂಗದ ಮೃದಂಗ ಎಂಬ ಮೊದಲ ಗೋಷ್ಠಿಯಲ್ಲಿ ಕಾವ್ಯ, ಸಣ್ಣಕತೆ ಹಾಗೂ ಕಾದಂಬರಿ ಕುರಿತು ರಾಜೇಂದ್ರ ಪ್ರಸಾದ, ರೇಣುಕಾ ರಮಾನಂದ, ಮಂಜು ಚೆಳ್ಳೂರ, ಶಾಂತಿ ಅಪ್ಪಣ್ಣ, ವಿ.ಆರ್‌. ಕಾರ್ಪೆಂಟರ್‌ ಹಾಗೂ ಹೊಟ್ಯಾಗಿನ ಮಾತು ಎರಡನೇ ಗೋಷ್ಠಿಯಲ್ಲಿ ನಾಟಕ, ವಿಮರ್ಶೆ, ಜಾನಪದ, ಅನುವಾದ, ಮಕ್ಕಳ ಸಾಹಿತ್ಯ ಕುರಿತು ಬರಹಗಾರರಾದ ಕೆ.ಪಿ. ಲಕ್ಷ್ಮಣ, ಮಂಜುಳಾ ಗೋನಾಳ, ಡಾ. ರಂಗನಾಥ ಕಂಟನಕುಂಟೆ, ಡಾ. ಅರುಣ ಜೋಳದಕೂಡ್ಲಗಿ, ಅಜಯ ವರ್ಮಾ, ನಾಗರೇಖಾ ಗಾಂವಕರ್‌, ಸೋಮು ಕುದರಿಹಾಳ ಬರವಣಿಗೆಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಅಂದು ಸಂಜೆ 6ಕ್ಕೆ ಕವಿಗೋಷ್ಠಿ ನಡೆಯಲಿದ್ದು ಹುಲಿಂಕುಂಟೆ ಮೂರ್ತಿ, ವೀರಣ್ಣ ಮಡಿವಾಳರ, ಭುವನಾ ಹಿರೇಮಠ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕವಿಗಳ ಕವನ ವಾಚನ ಮಾಡಲಿದ್ದಾರೆ ಎಂದರು.

ಜೂ. 28ರ ಬೆಳಗ್ಗೆ 9.30ಕ್ಕೆ 3ನೇ ಗೋಷ್ಠಿ ಕಂಡದ್ದು ಕಂಡ ಹಾಗೆ ಗೋಷ್ಠಿಯಲ್ಲಿ ಕಾವ್ಯ, ಸಣ್ಣಕತೆ ಮತ್ತು ಕಾದಂಬರಿ, ನಾಟಕ ಕುರಿತು ಡಾ. ರಾಮಲಿಂಗಪ್ಪ ಬೇಗೂರ, ಟಿ.ಎಸ್‌. ಗೊರವರ, ಬೇಲೂರು ರಘುನಂದನ, 4ನೇ ಗೋಷ್ಠಿಯಲ್ಲಿ ವಿಮರ್ಶೆ, ಸಂಶೋಧನೆ, ಅನುವಾದ, ಮಕ್ಕಳ ಸಾಹಿತ್ಯ ಕುರಿತು ಡಾ. ಸುಭಾಸರಾಜ ಮಾನೆ, ಡಾ. ಮಲ್ಲಪ್ಪ ಬಂಡಿ, ಡಾ. ನಿಂಗೂ ಸೊಲಗಿ ಹೊಸ ತಲೆಮಾರಿನ ಸಾಧನೆ ಮತ್ತು ಸವಾಲು ಕುರಿತು ಮಾತನಾಡಲಿದ್ದಾರೆ. ಅಂದು ಮಧ್ಯಾಹ್ನ 2.30ರಿಂದ ಆಯ್ದ ಶಿಬಿರಾರ್ಥಿಗಳಿಂದ ಬರಹಗಳ ಓದು ಹಾಗೂ ಸಮಾರೋಪ ಜರುಗಲಿದ್ದು, ಅತಿಥಿಗಳಾಗಿ ಬೆಂಗಳೂರಿನ ಡಾ. ವೆಂಕಟೇಶಯ್ಯ ನೆಲ್ಲಿಕುಂಟೆ ಹಾಗೂ ಡಾ. ರಹಮತ್‌ ತರೀಕೆರೆ ಭಾಗವಹಿಸುತ್ತಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.