ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಬಿಎಲ್‌ಡಿಇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಸೇರಿದಂತೆ ಮೂತ್ರಪಿಂಡ ಕಾಯಿಲೆಗಳಿಗೆ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ವಿಜಯ ಕುಮಾರ ಕಲ್ಯಾಣಪ್ಪಗೋಳ ಹೇಳಿದರು.ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬಿ.ಎಂ.ಪಾಟೀಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಜ್ಞವೈದ್ಯರರ ಸೇವೆ ಲಭ್ಯವಿದೆ. ಕಳೆದ ಒಂದೂವರೆ ವರ್ಷದಲ್ಲಿ 6 ಜನರಿಗೆ ಮೂತ್ರಪಿಂಡ ಕಸಿ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆಗಳನ್ನು ಮೂತ್ರಪಿಂಡ ಸಂಬಂಧಿ ರೋಗಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆಸ್ಪತ್ರೆ ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಬಿ.ಪಾಟೀಲ ಮಾತನಾಡಿ, 40 ವರ್ಷ ಮೇಲ್ಪಟ್ಟ ಜನರು ವರ್ಷಕ್ಕೆ ಒಂದು ಬಾರಿಯಾದರು ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಆರೋಗ್ಯದ ಸ್ಥಿತಿಗತಿ ಗುರುತಿಸಬಹುದು. ರೋಗದ ಲಕ್ಷಣಗಳು ಕಂಡುಬಂದರೆ ಪ್ರಥಮ ಹಂತದಲ್ಲಿ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಬಹುದು ಎಂದು ಶಿಬಿರದಲ್ಲಿ ಭಾಗವಹಿಸಿದ ಸಾರ್ವಜನಿಕರು, ರೋಗಿಗಳು ಹಾಗೂ ರೋಗಿ ಸಂಬಂಧಿಕರಿಗೆ ತಿಳಿಸಿದರು.ಆಸ್ಪತ್ರೆ ನೆಫ್ರಾಲಾಜಿ ವಿಭಾಗದ ಡಾ.ಸಂದೀಪ ಪಾಟೀಲ ಮಾತನಾಡಿ, ಮೆದುಳು ನಿಷ್ಕ್ರೀಯವಾದ ರೋಗಿಗಳಿಂದ ಅಗಾಂಗ ದಾನ ಪಡೆಯಲು ಆಸ್ಪತ್ರೆಯು ರಾಜ್ಯ ಸರಕಾರದಿಂದ ಮಾನ್ಯತೆ ಪಡೆದಿದೆ. ಅಂಗಾಂಗ ದಾನ ಮಾಡವವರು ಮತ್ತು ಅಂಗಾಂಗ ಅವಶ್ಯಕತೆ ಇರುವವರು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಬೇಕು ಎಂದು ತಿಳಿಸಿದರು. ಜೀವಂತ ಕಿಡ್ನಿ ಕಸಿ ಮಾಡಿಸಿಕೊಂಡವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಡಾ.ವಿನಯ ಕುಂದರಗಿ, ಡಾ.ಸಂತೋಷ ಪಾಟೀಲ, ಡಾ.ಬಸವರಾಜ ಸಜ್ಜನ ಹಾಗೂ ಆಸ್ಪತ್ರೆ ಆಡಳಿತಾದಿಕಾರಿಗಳು ಇದ್ದರು. ಈ ಉಚಿತ ಆರೋಗ್ಯ ಶಿಬಿರದಲ್ಲಿ 115 ಜನರಿಗೆ ತಪಾಸಣೆ ಮಾಡಲಾಯಿತು.