ಸಾರಾಂಶ
ಬಾಗಲಕೋಟೆ ನಗರದ ಬಿ.ವಿ.ವಿ. ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಾಗಲಕೋಟೆ ಶಾಖೆಯಿಂದ ಸುಮಾರು ₹12 ಲಕ್ಷ ಮೌಲ್ಯದ ಮ್ಯಾಕ್ವೇಟ್ ಸರ್ವೋ ಇನ್ಫಂಟ್ ಕೃತಕ ಉಸಿರಾಟ ಯಂತ್ರವನ್ನು (ವೆಂಟಿಲೇಟರ್) ದೇಣಿಗೆಯಾಗಿ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದ ಬಿ.ವಿ.ವಿ. ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಾಗಲಕೋಟೆ ಶಾಖೆಯಿಂದ ಸುಮಾರು ₹12 ಲಕ್ಷ ಮೌಲ್ಯದ ಮ್ಯಾಕ್ವೇಟ್ ಸರ್ವೋ ಇನ್ಫಂಟ್ ಕೃತಕ ಉಸಿರಾಟ ಯಂತ್ರವನ್ನು (ವೆಂಟಿಲೇಟರ್) ದೇಣಿಗೆಯಾಗಿ ನೀಡಲಾಯಿತು.ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹುಬ್ಬಳ್ಳಿ ವಿಭಾಗೀಯ ಸರ್ಕಲ್ ಹೆಡ್ ರಾಕೇಶ ಕುಮಾರ, ಬಾಗಲಕೋಟೆ ಶಾಖಾ ಮ್ಯಾನೇಜರ್ ಗೂಳಪ್ಪ ಯೋಗಪ್ಪನವರ ಹಾಗೂ ವಿದ್ಯಾಗಿರಿ ಶಾಖಾ ಮ್ಯಾನೇಜರ್ಗಂ ಗಾಧರ ಪಿ. ಅವರು ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಗೆ ಭೇಟಿ ನೀಡಿ ಮ್ಯಾಕ್ವೇಟ್ ಉಸಿರಾಟ ಯಂತ್ರವನ್ನು ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಸಿ. ಚರಂತಿಮಠ ಅವರಿಗೆ ಹಸ್ತಾಂತರಿಸಿದರು.
ದೇಣಿಗೆ ಸ್ವೀಕರಿಸಿ ಮಾತನಾಡಿದ ಡಾ.ವೀರಣ್ಣ ಸಿ. ಚರಂತಿಮಠ ಅವರು, ಈ ಹಿಂದೆಯೂ ಕುಮಾರೇಶ್ವರ ಆಸ್ಪತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಅಂಬ್ಯುಲೆನ್ಸ್ ನೀಡಿರುವುದನ್ನು ನಾವು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಈಗ ಮತ್ತೊಮ್ಮೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ವೆಂಟಿಲೇಟರ್ ಯಂತ್ರ ನೀಡುವುದರ ಮೂಲಕ ತನ್ನ ಸಾಮಾಜಿಕ ಕಾಳಜಿಯನ್ನು ಪುನಃ ವ್ಯಕ್ತಪಡಿಸಿದೆ. ಬ್ಯಾಂಕಿನ ಈ ನೆರವಿನ ಹಸ್ತ ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಈ ನೆರವು ಅವರ ಸಾಮಾಜಿಕ ಕಾಳಜಿಗೊಂದು ಉದಾಹರಣೆ. ಬ್ಯಾಂಕಿನವರು ನೀಡಿದ ಈ ಉಪಕರಣ ಸಾರ್ವಜನಿಕರ ಆರೋಗ್ಯ ಸೇವೆಗೆ ಸದುಪಯೋಗವಾಗಲಿದೆ ಎಂದು ಭರವಸೆ ನೀಡಿದರು.ಬಿ.ವಿ.ವಿ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಎಂ. ಸಜ್ಜನ (ಬೇವೂರ), ಕಟ್ಟಡ ಸಮಿತಿ ಕಾರ್ಯಾಧ್ಯಕ್ಷ ಮಹೇಶ ಕಕರಡ್ಡಿ, ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ, ಬಿ.ವಿ.ವಿ ಸಂಘದ ಕೇಂದ್ರ ಕಚೇರಿಯ ಹಣಕಾಸು ಅಧಿಕಾರಿ ಅನಂತ ಓಂಕಾರ ಮತ್ತು ಮೆಡಿಕಲ್ ಕಾಲೇಜಿನ ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.
ಜರ್ಮನ್ ದೇಶದ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲ್ಪಟ್ಟ ಈ ಕೃತಕ ಉಸಿರಾಟ ಯಂತ್ರ ರೋಗಿಗಳಲ್ಲಿ ಕಾಣಿಸಿಕೊಳ್ಳುವ ಉಸಿರಾಟದ ತೊಂದರೆಯಲ್ಲಿ ಆಕ್ಸಿಜನ್ ಪೂರೈಕೆಗಾಗಿ ಬಳಕೆಯಾಗುತ್ತದೆ.