ತುಳುವಿಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ: ಇಂದು ಮಂಗಳೂರಲ್ಲಿ ನಿಯೋಗ ಸಿಎಂಗೆ ಮನವಿ

| Published : Feb 17 2024, 01:18 AM IST

ತುಳುವಿಗೆ ರಾಜ್ಯದ ಅಧಿಕೃತ ಭಾಷಾ ಸ್ಥಾನಮಾನ: ಇಂದು ಮಂಗಳೂರಲ್ಲಿ ನಿಯೋಗ ಸಿಎಂಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಡಾ. ವೀರೇಂದ್ರ ಹೆಗ್ಗಡೆ, ಡಾ. ಮೋಹನ ಆಳ್ವ ಅವರ ಜತೆ ಮಾತುಕತೆ ನಡೆಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ತುಳು ಹೋರಾಟಗಾರರು, ಸಾಹಿತಿಗಳು, ತುಳು ಚಿತ್ರರಂಗದವರು, ಎಲ್ಲ ಕ್ಷೇತ್ರಗಳ ಪ್ರಮುಖರು ಹಾಜರಿರಬೇಕು ಎಂದು ಅವರು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳುಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಶನಿವಾರ ಮಂಗಳೂರು ಭೇಟಿ ವೇಳೆ ಮನವಿ ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ ಮೊಯ್ದಿನ್‌ ಬಾವಾ ತಿಳಿಸಿದ್ದಾರೆ.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಳುವಿಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಹಾಗೂ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಆಗ್ರಹಿಸಿ ಈಗಾಗಲೇ ರಾಜ್ಯದ ಮುಖ್ಯಮಂತ್ರಿ, ಕೇರಳ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯವರಿಗೆ ರಿಜಿಸ್ಟರ್ಡ್‌ ಪೋಸ್ಟ್‌ ಮೂಲಕ ಆಗ್ರಹಿಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜ.29ರಿಂದ ಇದುವರೆಗೆ ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಲಾ ಸುಮಾರು 6,500 ಹಾಗೂ ಕೇರಳ ಮುಖ್ಯಮಂತ್ರಿಯವರಿಗೆ ಸುಮಾರು 2,300 ಪತ್ರಗಳನ್ನು ಕಳುಹಿಸಲಾಗಿದೆ. ಒಟ್ಟು ತಲಾ 10,000 ಪತ್ರಗಳನ್ನು ಕಳುಹಿಸುವ ಗುರಿ ಹೊಂದಲಾಗಿದೆ. ಇದೀಗ ಹೋರಾಟದ ಮುಂದುವರಿದ ಭಾಗವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು. ಈ ಬಗ್ಗೆ ಈಗಾಗಲೇ ಡಾ. ವೀರೇಂದ್ರ ಹೆಗ್ಗಡೆ, ಡಾ. ಮೋಹನ ಆಳ್ವ ಅವರ ಜತೆ ಮಾತುಕತೆ ನಡೆಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2 ಗಂಟೆಗೆ ಮುಖ್ಯಮಂತ್ರಿಯವರನ್ನು ಭೇಟಿಯಾಗುವ ಸಂದರ್ಭದಲ್ಲಿ ಶಾಸಕರು ಸೇರಿದಂತೆ ಎಲ್ಲ ಜನಪ್ರತಿನಿಧಿಗಳು, ತುಳು ಹೋರಾಟಗಾರರು, ಸಾಹಿತಿಗಳು, ತುಳು ಚಿತ್ರರಂಗದವರು, ಎಲ್ಲ ಕ್ಷೇತ್ರಗಳ ಪ್ರಮುಖರು ಹಾಜರಿರಬೇಕು ಎಂದು ಅವರು ಮನವಿ ಮಾಡಿದರು.ಡಾ.ಮೋಹನ ಆಳ್ವ ಸಮಿತಿ ವರದಿ ಅಂಗೀಕರಿಸಬೇಕು: ತುಳುಭಾಷೆ ಮೊದಲು ರಾಜ್ಯದ ಅಧಿಕೃತ ಭಾಷೆಯಾಗಬೇಕು. ಇದಕ್ಕಾಗಿ ಡಾ. ಮೋಹನ ಆಳ್ವ ಅವರ ನೇತೃತ್ವದಲ್ಲಿ ರಚಿಸಿರುವ ಸಮಿತಿಯ ವರದಿ ಸಿದ್ಧಗೊಳ್ಳುತ್ತಿದ್ದು ಅದನ್ನು ಸರ್ಕಾರ ಅಂಗೀಕರಿಸಬೇಕು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ನಾವು ತುಳುವಿನಷ್ಟೇ ಕನ್ನಡವನ್ನು ಕೂಡ ಪ್ರೀತಿಸುತ್ತೇವೆ. ತುಳುವಿಗೆ ಸ್ಥಾನ ನೀಡಿದರೆ ಕನ್ನಡ ಇನ್ನಷ್ಟು ಬೆಳೆಯಲಿದೆ. ಚುನಾವಣೆಯ ಸಂದರ್ಭವಾಗಿರುವುದರಿಂದ ಈಗಲೇ ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ. ಇದಕ್ಕಾಗಿ ಎಲ್ಲ ತುಳುವರು ಕೈ ಜೋಡಿಸಬೇಕು ಎಂದು ಮೊಯ್ದಿನ್‌ ಬಾವಾ ಹೇಳಿದರು. ರಾಜಕೀಯ ಇಚ್ಛಾಶಕ್ತಿ ಕೊರತೆ: ತುಳು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್‌ ಶೆಟ್ಟಿಜೆಪ್ಪು ಮಾತನಾಡಿ, ತುಳುವಿಗೆ ಅಧಿಕೃತ ಭಾಷೆಯ ಸ್ಥಾನ ನೀಡುವುದು ಮತ್ತು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಂಡುಬರುತ್ತಿದೆ. ಚುನಾವಣೆಯ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಣಾಳಿಕೆಗಳಲ್ಲಿ ಭರವಸೆ ನೀಡಿದ್ದರೂ ಅನಂತರ ನಿರ್ಲಕ್ಷಿಸಿವೆ. ತುಳುಭಾಷೆ, ತುಳುನಾಡಿನ ಅಭಿವೃದ್ಧಿಗೆ ಆದ್ಯತೆ ಸಿಗುತ್ತಿಲ್ಲ. ಅನುದಾನ ನೀಡುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ತುಳು ಅಭಿವೃದ್ಧಿ ಪ್ರಾಧಿಕಾರ, ಹೈಕೋರ್ಟ್‌ ಪೀಠ ಸ್ಥಾಪನೆ, ಸ್ಥಳೀಯ ಕಂಪನಿಗಳಲ್ಲಿ ತುಳುವರಿಗೆ ಉದ್ಯೋಗಾವಕಾಶ ಮೊದಲಾದ ಯಾವುದೇ ಬೇಡಿಕೆಗಳು ಕೂಡ ಈಡೇರಿಲ್ಲ ಎಂದು ಹೇಳಿದರು. ಮುಖಂಡರಾದ ಸುಧಾಕರ ಶೆಟ್ಟಿ, ಲೋಲಾಕ್ಷ ಇದ್ದರು.