ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರವೇಶಾತಿ ಆರಂಭವಾಗಿದ್ದು, ಈ ಬಾರಿ 40 ಸಾವಿರ ಅಭ್ಯರ್ಥಿಗಳು ದಾಖಲಾಗುವ ನಿರೀಕ್ಷೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.2024-25ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಈಗಾಗಲೇ ಆರಂಭವಾಗಿದ್ದು, ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿದೆ. ಅಕ್ಟೋಬರ್ 31 ಕೊನೆಯ ದಿನಾಂಕವಾಗಿರುತ್ತದೆ. ಕಳೆದ ವರ್ಷದ ಎರಡು ಆವೃತ್ತಿಯಲ್ಲಿ 43 ಸಾವಿರ ಅಭ್ಯರ್ಥಿಗಳು ಪ್ರವೇಶ ಪಡೆದಿದ್ದರು. ಈ ಬಾರಿ ಜನವರಿ ಆವೃತ್ತಿಯಲ್ಲಿ 17808 ಅಭ್ಯರ್ಥಿಗಳು ಪ್ರವೇಶ ಪಡೆದಿದ್ದು, ಜುಲೈ ಆವೃತ್ತಿಯಲ್ಲಿ 40 ಸಾವಿರ ಗುರಿ ಹೊಂದಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
2024-25ರ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಸ್ನಾತಕ, ಸ್ನಾತಕೋತ್ತರ ಕೋರ್ಸ್ ಗಳಾದ ಬಿಎ, ಬಿ.ಕಾಂ, ಬಿಬಿಎ, ಬಿಸಿಎ, ಬಿಎಲ್ಐಎಸ್ಸಿ, ಬಿಎಸ್.ಡಬ್ಲ್ಯೂ, ಬಿಎಸ್ಸಿ (ಜನರಲ್, ಹೋಂ ಸೈನ್ಸ್ ಮತ್ತು ಐಟಿ), ಎಂಎ, ಎಂಸಿಜೆ, ಎಂ.ಕಾಂ, ಎಂಎಲ್ಐಎಸ್ಸಿ, ಎಂಎಸ್ಸಿ, ಎಂಬಿಎ, ಎಂಸಿಎ, ಎಂಎಸ್.ಡಬ್ಲ್ಯೂ, ಪಿಜಿ ಡಿಪ್ಲೊಮಾ ಪ್ರೋಗ್ರಾಮ್ಸ್, ಡಿಪ್ಲೊಮಾ ಪ್ರೋಗ್ರಾಮ್ಸ್, ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ಗಳಿಗೆ ಪ್ರವೇಶಾತಿಯನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.ಶುಲ್ಕ ರಿಯಾಯಿತಿ, ವಿನಾಯಿತಿ
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಕುಟುಂಬದವರಿಗೆ, ಕೆಎಸ್ಆರ್ ಟಿಸಿ ನೌಕರರಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡಲಾಗುವುದು. ಹಾಗೆಯೇ, ತೃತಿಯಲಿಂಗಗಳು, ದೃಷ್ಠಿಹೀನರು, ಕೋವಿಡ್-19ರ ವೇಳೆ ಮೃತರಾದ ತಂದೆ, ತಾಯಿಯ ಮಕ್ಕಳಿಗೆ ಪೂರ್ಣ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.ಏಕಕಾಲದಲ್ಲಿ ದ್ವಿ-ಪದವಿ
ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಭೌತಿಕ ಶಿಕ್ಷಣ ಒಂದು ಕೋರ್ಸ್ ಮತ್ತು ದೂರ ಶಿಕ್ಷಣದಲ್ಲಿ ಇನ್ನೊಂದು ಕೋರ್ಸ್ ಗಳನ್ನು ಏಕಕಾಲದಲ್ಲಿ ಮಾಡಲು ಅವಕಾಶ ಇದೆ ಎಂದರು.ಇತರ ಕಾಲೇಜಿನಲ್ಲಿ ಅಥವಾ ರೆಗೂಲರ್ ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ ರೆಗೂಲರ್ ಆಗಿ ವಿದ್ಯಾಭ್ಯಾಸ ಮುಂದುವರೆಸಲು ಸಾಧ್ಯವಾಗದಿದ್ದರೆ ಅಂತಹ ವಿದ್ಯಾರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರೆಸಬಹುದು ಎಂದು ಅವರು ತಿಳಿಸಿದರು.
ಅರ್ಕಧಾಮದ ಸಂಸ್ಥಾಪಕ ಯೋಗಿ ಶ್ರೀನಿವಾಸ್ ಅರ್ಕ, ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಲಸಚಿವ ಡಾ.ಎಚ್. ವಿಶ್ವನಾಥ್, ಡೀನ್ ಪ್ರೊ. ಲಕ್ಷ್ಮಿ ಮೊದಲಾದವರು ಇದ್ದರು.----
ಬಾಕ್ಸ್...-- ಮುಕ್ತ ವಿವಿ ಗೀತೆ ಬಿಡುಗಡೆ--
ಇದೇ ವೇಳೆ ಕರ್ನಾಟಕ ರಾಜ್ಯ ಮುಕ್ತ ವಿವಿ ಕುರಿತು ಸಿದ್ದೇಗೌಡ ಸಾಹಿತ್ಯದಲ್ಲಿ ನಾಗೇಶ್ ಕಂದೇಗಾಲ ಸಂಗೀತ ಮತ್ತು ಧ್ವನಿಯಲ್ಲಿ ಮೂಡಿ ಬಂದಿರುವ ಪ್ರಮೋಷನಲ್ ಹಾಡನ್ನು ಅರ್ಕಧಾಮದ ಸಂಸ್ಥಾಪಕ ಯೋಗಿ ಶ್ರೀನಿವಾಸ್ ಅರ್ಕ ಬಿಡುಗಡೆಗೊಳಿಸಿದರು.ಕಲಿಬೇಕು ನೀ ಮುಕ್ತವಾಗಿ ಕಲಿಬೇಕು..., ಪಡಿಬೇಕು ನೀ ಉನ್ನತ ಶಿಕ್ಷಣ ಪಡಿಬೇಕು... ಎಂಬ ಗೀತೆಯನ್ನು ಸೊಗಸಾಗಿ ಮೂಡಿ ಬಂದಿದ್ದು, ಮುಕ್ತ ವಿವಿಯ ಧ್ಯಯೋದ್ದೇಶವನ್ನು ಒಳಗೊಂಡಿದೆ.