ಸಾರಾಂಶ
ಬಾಗಲಕೋಟೆ : ಕರ್ನಾಟಕದಲ್ಲಿ ರಾಜಕಾರಣವೇ ಈಗ ಗೊಂದಲದಲ್ಲಿದೆ. ಬಿಜೆಪಿಯಲ್ಲಿ ರೆಡ್ಡಿ, ರಾಮುಲು ಕಾರಣದಿಂದ ಸಾಕಷ್ಟು ಗೊಂದಲದಲ್ಲಿದೆ. ಕಾಂಗ್ರೆಸ್‌ನಲ್ಲೂ ಗೊಂದಲ ಇದೆ. ಕಾಂಗ್ರೆಸ್ ಯಾರೆಲ್ಲ ಕಟ್ಟಿದ್ದಾರೋ ಅವರಿಗೆಲ್ಲ ನೋವಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಪ್ರತಿ ಜಿಲ್ಲೆಯಲ್ಲೂ ಪ್ರಮುಖ ಕಾರ್ಯಕರ್ತರಿಗೆ ನೋವಾಗಿದೆ. ತೋಡಿಕೊಳ್ಳಲು ಜಾಗವಿಲ್ಲ. ಅಂತಹ ಪರಿಸ್ಥಿತಿ ಕರ್ನಾಟಕದ ಬಿಜೆಪಿಯಲ್ಲಿದೆ. ಡಾ.ಶಾಮಪ್ರಸಾದ ಮುಖರ್ಜಿ, ದೀನದಯಾಳ ಉಪಾಧ್ಯಾಯರ ಬಲಿದಾನ ಆಯಿತು. ಆದರೆ, ಇವತ್ತಿನ ರಾಜ್ಯ ಬಿಜೆಪಿ ಸ್ಥಿತಿ ನೋಡಿದ್ರೆ ಸದ್ಯಕ್ಕೆ ಸರಿ ಹೋಗುತ್ತೋ ಇಲ್ಲವೋ ಎನ್ನುವ ಅನುಮಾನ ಇದೆ. ಆದರೂ ಅವರೆಲ್ಲರ ತಪಸಿಗೆ ಬೆಲೆ ಇದೆ. ಇವತ್ತಲ್ಲ ನಾಳೆ ಸರಿ ಹೋಗುತ್ತೆ ಎನ್ನುವ ವಿಶ್ವಾಸ ಇದೆ ಎಂದು ತಿಳಿಸಿದರು.
ನಮ್ಮ ಸಂಸ್ಕೃತಿ, ಸಂಸ್ಕಾರ ಎಲ್ಲಿ ಹೋಗಿದೆ ಗೊತ್ತಾಗುತ್ತಿಲ್ಲ. ಒಂದು ಕಡೆ 144 ವರ್ಷಗಳ ಬಳಿಕ ಹಿಂದುಗಳ ಪವಿತ್ರ ಕುಂಭಮೇಳ ನಡೆಯುತ್ತಿದೆ. ಮತ್ತೊಂದು ಕಡೆ ಹಿಂದುಗಳ ಆರಾಧ್ಯ ದೇವ ಗೋವು, ಗಬ್ಬಾದ ಹಸು ಕಡಿಯುತ್ತಾರೆ ಅಂದ್ರೆ ಇದು ತುಂಬಾ ಅನ್ಯಾಯ. ಕಣ್ಣೀರು ಬರುತ್ತೆ. ಜಮೀರ್ ಅಹ್ಮದ್, ಸಿಎಂ, ಡಿಸಿಎಂ, ಗೃಹ ಮಂತ್ರಿಗಳು, ಅಲ್ಲಿ ಹೋಗಿ ಏನು ನಡೆಯುತ್ತಿದೆ ಎಂದು ತಿಳಿಯಬೇಕೆಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಹಿಂದುಗಳಿಗೆ ಇಷ್ಟೊಂದು ಅನ್ಯಾಯ ಮಾಡಬಾರದು. ಇದರ ಪರಿಣಾಮ ಮುಂದೆ ಅನುಭವಿಸಬಹುದು. ಆದರೆ, ಇವತ್ತು ನೋಡಿ ನೋಡಿ ಸಂಕಟ ಆಗುತ್ತಿದೆ. ಇದಕ್ಕೆ ವಿರೋಧ ಮಾಡಿದ್ರೆ, ಕೂಗಾಡಿದ್ರೆ, ನೀವೆ ಕಾನೂನು ಕೈಗೆ ತೆಗೆದುಕೊಳ್ತಿರಿ ಅಂತೀರಿ. ಹಾಗಾದ್ರೆ ಪರವಾನಗಿ ತೆಗೆದುಕೊಂಡು ಗಬ್ಬಾದ ಹಸು ಕಟ್ ಮಾಡ್ತಿದ್ದಾರಾ? ಪರವಾನಗಿ ಪಡೆದು ಮಾರಾಟ ಮಾಡ್ತಿದ್ದಾರಾ? ರಾಜ್ಯ ಸರ್ಕಾರ ಬರೀ ಮುಸಲ್ಮಾನರ ಸಂತೃಪ್ತಿಪಡಿಸುವ ವೋಟು ಪಡೆಯಲು ಮಾಡುತ್ತಿರುವುದನ್ನು ನೋಡಿ, ನನಗಂತೂ ಬಹಳ ನೋವಾಗಿದೆ. ಅದಕ್ಕಾಗಿ ನಾನು ಸರ್ಕಾರಕ್ಕೆ ಪ್ರಾರ್ಥನೆ ಮಾಡುತ್ತೇನೆ. ಗೋವು ವಧೆ ನಿಲ್ಲಿಸಿ, ಗೋವುಗಳ ಹತ್ಯೆ, ಕೆಚ್ಚಲು ಕೋಯ್ತಿರೋದು ನೋಡಿ ತುಂಬಾ ಬೇಸರ ಆಗಿದೆ. ಬದುಕಿದ್ದು ಸತ್ತಂತೆ ಆಗಿದೆ. ಈ ದಿಕ್ಕಿನಲ್ಲಿ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು.
ಫೆ.4ಕ್ಕೆ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆ
ಇದೇ ಫೆ.4 ರಂದು ಬಸವನಬಾಗೇವಾಡಿಯಲ್ಲಿ ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯಾಗಲಿದೆ. 1008 ಮಠಾಧೀಶರು ಬ್ರಿಗೇಡ್ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಕ್ರಾಂತಿವೀರ ಬ್ರಿಗೇಡ್ ಉದ್ಘಾಟನೆಯ ಸಮಯದಲ್ಲಿ ಕನ್ನೇರಿ ಮಠದ ಶ್ರೀಗಳು, ಕಾಗಿನೆಲೆ ಮಠದ ಶ್ರೀಗಳು ಸಹ ಬಾಗವಹಿಸಿಲಿದ್ದು, ಮುಖ್ಯವಾಗಿ ಈ ಬ್ರಿಗೇಡ್‌ಗೆ ಸ್ವಾಮೀಜಿಗಳ ನೇತೃತ್ವದ ಇದೆ ಎಂದು ತಿಳಿಸಿದರು.