ಸಾರಾಂಶ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 252 ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಇದನ್ನು ನೆಪವಾಗಿಸಿಕೊಂಡು ಕೆಲವರು ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಬಂದಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 252 ಪೌರಕಾರ್ಮಿಕರ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಇದನ್ನು ನೆಪವಾಗಿಸಿಕೊಂಡು ಕೆಲವರು ಹಣ ಸುಲಿಗೆ ಮಾಡಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಬಂದಿದೆ. ಹೀಗಾಗಿ, ಬಡ ಪೌರಕಾರ್ಮಿಕರು ಇದಕ್ಕೆ ಬಲಿಯಾಗಬಾರದು ಎಂದು ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ರಾಜ್ಯಾಧ್ಯಕ್ಷರಾದ ಮಾಜಿ ಮೇಯರ್ ನಾರಾಯಣ ಎಚ್ಚರಿಸಿದರು.ಪೌರಕಾರ್ಮಿಕರ ನೇಮಕಾತಿಯು ಹಿರಿತನದ ಆಧಾರದ ಮೇಲೆ ನಡೆಯಲಿದೆ. ಇದೇ ವೇಳೆ ಅಧಿಕಾರಿ ವರ್ಗ ಸಹ ಪಾರದರ್ಶಕ, ನಿಯಮಾನುಸಾರವಾಗಿ, ಭ್ರಷ್ಟಾಚಾರ ರಹಿತವಾಗಿ ನೇಮಕಾತಿ ನಡೆಸಬೇಕು ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಹಾಗೂ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಅನ್ವಯ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಪೌರಕಾರ್ಮಿಕರನ್ನು ಏಕಕಾಲದಲ್ಲಿ ಕಾಯಂಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಹಣಕಾಸು ಇಲಾಖೆಗೂ ಕಡತ ಮಂಡನೆಯಾಗಿದೆ. ಹೀಗಾಗಿ, ನಗರ ಹಾಗೂ ರಾಜ್ಯದಲ್ಲಿನ ಎಲ್ಲಾ ಪೌರಕಾರ್ಮಿಕರು ಆತಂಕ, ಸುಳ್ಳು ವದಂತಿಗಳಿಗೆ ಬಲಿಯಾಗಬಾರದು ಎಂದು ಅವರು ಮನವಿ ಮಾಡಿದರು.ಮಹಾಸಂಘದ ಜಿಲ್ಲಾಧ್ಯಕ್ಷ ಆರ್ಟಿಸ್ಟ್ ನಾಗರಾಜು, ಪದಾಧಿಕಾರಿಗಳಾದ ಆರ್. ದಾಸು, ಆರ್. ಶಿವಣ್ಣ, ಆರ್. ಲಕ್ಷ್ಮಣ್, ಯತಿರಾಜ್, ಗುರುದತ್ತ ಇದ್ದರು.