ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮುಷ್ಕರ; ಖಾಸಗಿ ಬಸ್‌ಗಳ ಸಂಚಾರ

| Published : Aug 05 2025, 11:45 PM IST

ರಾಜ್ಯ ರಸ್ತೆ ಸಾರಿಗೆ ಬಸ್‌ಗಳ ಮುಷ್ಕರ; ಖಾಸಗಿ ಬಸ್‌ಗಳ ಸಂಚಾರ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತ್ತ ಸಾರಿಗೆ ಬಸ್‌ಗಳು ಸಂಚಾರಕ್ಕಿಳಿಯದೆ ಡಿಪೋ ಸೇರಿಕೊಂಡಿದ್ದರೆ ಇತ್ತ ಸಾರಿಗೆ ಬಸ್‌ಗಳ ಜಾಗದಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಹಾಗಾಗಿ ಮೊದಲ ದಿನ ಮುಷ್ಕರದ ಬಿಸಿ ಜನರಿಗೆ ಅಷ್ಟಾಗಿ ತಟ್ಟಲಿಲ್ಲ. ಸಾರಿಗೆ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗಲಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತ್ತ ಸಾರಿಗೆ ಬಸ್‌ಗಳು ಸಂಚಾರಕ್ಕಿಳಿಯದೆ ಡಿಪೋ ಸೇರಿಕೊಂಡಿದ್ದರೆ ಇತ್ತ ಸಾರಿಗೆ ಬಸ್‌ಗಳ ಜಾಗದಲ್ಲಿ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಹಾಗಾಗಿ ಮೊದಲ ದಿನ ಮುಷ್ಕರದ ಬಿಸಿ ಜನರಿಗೆ ಅಷ್ಟಾಗಿ ತಟ್ಟಲಿಲ್ಲ.

ಸಾರಿಗೆ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರಿಗೆ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರೂ ಅವರು ಕರ್ತವ್ಯಕ್ಕೆ ಹಾಜರಾಗಲಿಲ್ಲ. ಸಾರಿಗೆ ನೌಕರರ ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಸೂಚನೆಯಂತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜು ಅವರು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು.

ಅದರ ಪರಿಣಾಮ ಬೆಳಗ್ಗೆ ೬ ಗಂಟೆಯಿಂದಲೇ ಖಾಸಗಿ ಬಸ್‌ಗಳು ಸಾರಿಗೆ ಬಸ್ ನಿಲ್ದಾಣ ಪ್ರವೇಶ ಮಾಡಿ ಸಂಚಾರ ಆರಂಭಿಸಿದವು. ೨೧೫ ಖಾಸಗಿ ಬಸ್‌ಗಳು, ೨೭೨ ಮಿನಿ ಬಸ್‌ಗಳು, ೬೬೬ ಮ್ಯಾಕ್ಸಿಕ್ಯಾಬ್ ವಾಹನಗಳು ಸಂಚಾರಕ್ಕೆ ಇಳಿದಿದ್ದರಿಂದ ಪ್ರಯಾಣಿಕರಿಗೆ ವಾಹನಗಳ ಕೊರತೆ ಅಷ್ಟಾಗಿ ಕಾಣಲಿಲ್ಲ. ೪೯೬ ಮಾರ್ಗಗಳ ಪೈಕಿ ಹೆಚ್ಚು ಬೇಡಿಕೆ ಇರುವ ಮಾರ್ಗಗಳಲ್ಲಿ ಸಂಚಾರಕ್ಕೆ ಖಾಸಗಿ ಬಸ್‌ಗಳು, ಮಿನಿ ಬಸ್‌ಗಳು ಹಾಗೂ ಮ್ಯಾಕ್ಸಿಕ್ಯಾಬ್‌ಗಳನ್ನು ಕಳುಹಿಸಿಕೊಡಲಾಯಿತು. ಹೊಸದಾಗಿ ನೇಮಕಗೊಂಡಿರುವ ಚಾಲಕರು ಮತ್ತು ನಿರ್ವಾಹಕರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿತ್ತು. ತಾಲೂಕು ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಮ್ಯಾಕ್ಸಿಕ್ಯಾಬ್ ಮಾಲೀಕರು, ಆಟೋ ಚಾಲಕರಿಗೆ ನಿರ್ದೇಶನ ನೀಡಲಾಗಿತ್ತು.

ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಕುಮಾರ ಅವರು, ಯಾವುದೇ ಕಾರಣಕ್ಕೂ ಸಾರಿಗೆ ಬಸ್‌ಗಳಿಗೆ ನಿಗದಿಪಡಿಸಿರುವ ದರಕ್ಕಿಂತ ಸಾರ್ವಜನಿಕರಿಂದ ಹೆಚ್ಚು ಹಣ ವಸೂಲಿ ಮಾಡಬಾರದು. ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಸ್‌ಗಳ ಸಂಚಾರ ನಡೆಸುವಂತೆ ತಿಳಿಸಿದರು.

ಪ್ರಯಾಣಿಕರ ಸಂಖ್ಯೆ ಕ್ಷೀಣ:

ಸಾರಿಗೆ ಮುಷ್ಕರದ ವಿಷಯ ತಿಳಿದಿದ್ದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಕ್ಕೆ ಮುಂದಾಗಿರಲಿಲ್ಲ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿತ್ತು. ಹಲವಾರು ಪ್ರಯಾಣಿಕರು ರೈಲುಗಳತ್ತ ಮುಖ ಮಾಡಿದ್ದರು. ಗ್ರಾಮೀಣ ಭಾಗದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರಲಿಲ್ಲ. ಖಾಸಗಿ ಬಸ್‌ಗಳು ಸಂಚಾರಕ್ಕೆ ಇಳಿದಿದ್ದರಿಂದ ಬಸ್‌ಗಳ ಪರದಾಟ ಅಷ್ಟಾಗೇನೂ ಕಂಡುಬರಲಿಲ್ಲ.

ದುಡ್ಡು ಕೊಟ್ಟು ಮಹಿಳೆಯರ ಸಂಚಾರ:

ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದ ಮಹಿಳೆಯರು ಮುಷ್ಕರದಿಂದಾಗಿ ಹಣ ಕೊಟ್ಟು ಖಾಸಗಿ ಬಸ್‌ಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿತ್ತು. ನಿತ್ಯ ನಗರಕ್ಕೆ ಕೆಲಸ ನಿಮಿತ್ತ ಬರುವರು ಹಾಗೂ ನಗರದಿಂದ ಗ್ರಾಮೀಣ ಭಾಗಕ್ಕೆ ತೆರಳುವವರು ನಿಗದಿತ ದರ ಕೊಟ್ಟು ಪ್ರಯಾಣಿಸಿದರು. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳುವುದಕ್ಕೆ ಖಾಸಗಿ ಬಸ್‌ಗಳನ್ನೇ ಅವಲಂಬಿಸಿದ್ದರು.

ಹಳ್ಳಿಗಳ ಕಡೆ ಹೋಗುವುದಕ್ಕೆ ತೊಂದರೆ:

ನಗರದಿಂದ ಪಟ್ಟಣಗಳ ಕಡೆ ತೆರಳುವ ಪ್ರಯಾಣಿಕರಿಗೆ ಬಸ್‌ಗಳ ಸಮಸ್ಯೆ ಎದುರಾಗದಿದ್ದರೂ, ಹಳ್ಳಿಗಳ ಕಡೆ ತೆರಳುವ ಪ್ರಯಾಣಿಕರು ಪರದಾಡುತ್ತಿದ್ದರು. ಗಂಟೆಗಟ್ಟಲೆ ಕಾದರೂ ಬಸ್‌ಗಳು ಬಾರದಿದ್ದಾಗ ಆಟೋಗಳು, ಅಫೆ ಆಟೋಗಳ ಮೂಲಕ ಊರುಗಳನ್ನು ಸೇರಿಕೊಳ್ಳುತ್ತಿದ್ದುದು ಕಂಡುಬಂದಿತು. ಇದರಿಂದ ಗೂಡ್ಸ್ ಆಟೋಗಳು, ಅಫೆ ಆಟೋಗಳಿಗೆ ಹೆಚ್ಚಿನ ಬೇಡಿಕೆ ಇತ್ತು. ಪ್ರಯಾಣಿಕರು ಅವುಗಳಿಗೂ ಹೆಚ್ಚಿನ ದರ ಕೊಟ್ಟು ಸಂಚರಿಸುತ್ತಿದ್ದರು.

ಬೆಂಗಳೂರಿಗೆ ೧೫೦ ರು.ನಿಂದ ೨೦೦ ರು. ದರ:

ಸಾರ್ವಜನಿಕರಿಂದ ಹೆಚ್ಚಿನ ದರ ವಸೂಲಿ ಮಾಡಬಾರದೆಂಬ ಜಿಲ್ಲಾಧಿಕಾರಿ ಸೂಚನೆ ನಡುವೆಯೂ ಖಾಸಗಿ ಬಸ್‌ನವರು ದುಪ್ಪಟ್ಟು ದರ ವಸೂಲಿ ಮಾಡುತ್ತಿದ್ದುದು ಕಂಡುಬಂದಿತು. ಬೆಂಗಳೂರಿಗೆ ಸಾರಿಗೆ ಬಸ್‌ಗಳಲ್ಲಿ ೧೨೦ ರು. ದರ ಇದ್ದು, ಸಾಮಾನ್ಯ ಖಾಸಗಿ ಬಸ್‌ಗಳು ೧೫೦ ರು., ಲಕ್ಷುರಿ ಖಾಸಗಿ ಬಸ್‌ಗಳಲ್ಲಿ ೨೦೦ ರು. ದರವನ್ನು ಪ್ರಯಾಣಿಕರಿಂದ ಪಡೆಯಲಾಗುತ್ತಿತ್ತು. ಅದೇ ರೀತಿ ಮೈಸೂರಿಗೆ ೮೦ ರು.ನಿಂದ ೧೧೦ ರು.ವರೆಗೆ ಪಡೆಯಲಾಗುತ್ತಿತ್ತು. ತಾಲೂಕುಗಳಿಗೆ ಪ್ರಯಾಣಿಸುವವರಿಂದ ಕನಿಷ್ಠ ೨೦ ರು. ಹೆಚ್ಚು ದರ ಪಡೆದು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು.

ಬೆರಳೆಣಿಕೆಯಷ್ಟು ಸಾರಿಗೆ ಬಸ್‌ಗಳ ಸಂಚಾರ:

ಕೆಎಸ್‌ಆರ್‌ಟಿಸಿ ಮಂಡ್ಯ ವಿಭಾಗದಲ್ಲಿ ಒಟ್ಟು ೫೨೯ ಸಾರಿಗೆ ಬಸ್‌ಗಳು ನಿತ್ಯ ೪೯೬ ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಆ.೫ರಂದು ಬೆಳಗ್ಗೆ ೬ ಗಂಟೆಯಿಂದ ಸಾರಿಗೆ ನೌಕಕರರು ಮುಷ್ಕರ ಆರಂಭಿಸಿದ್ದರಿಂದ ಕೇವಲ ಬೆರಳೆಣಿಕೆಯಷ್ಟು ಬಸ್‌ಗಳು ಮಾತ್ರ ಸಂಚರಿಸುತ್ತಿದ್ದವು. ಸಾರಿಗೆ ನೌಕರರು ಬಸ್‌ಗಳನ್ನು ಬಸ್ ನಿಲ್ದಾಣದಲ್ಲೇ ನಿಲ್ಲಿಸಿ ಕರ್ತವ್ಯಕ್ಕೆ ಗೈರುಹಾಜರಾಗಿದ್ದರು. ಖಾಸಗಿ ಬಸ್‌ಗಳ ಕಾರ್ಯಾಚರಣೆಗೆ ತೊಂದರೆಯಾಗದಂತೆ ಸೂಕ್ತ ರಕ್ಷಣೆ ನೀಡುವುದಕ್ಕೆ ಕ್ರಮ ವಹಿಸಲಾಗಿತ್ತು. ಎಲ್ಲೆಡೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಜಿಲ್ಲೆಯಲ್ಲಿ ಖಾಸಗಿ ವಾಹನಗಳ ವಿವರ

ತಾಲೂಕುಬಸ್‌ಗಳುಮಿನಿ ಬಸ್‌ಮ್ಯಾಕ್ಸಿಕ್ಯಾಬ್

ಮಂಡ್ಯ೪೫೧೨೧೪೩೯

ಮದ್ದೂರು೪೦೪೮೩೪

ಮಳವಳ್ಳಿ೫೦೫೬೧೬

ನಾಗಮಂಗಲ೦೫೦೬೪೦

ಕೆ.ಆರ್.ಪೇಟೆ೧೦೧೬೬೩

ಪಾಂಡವಪುರ೫೦೧೭೪೭

ಶ್ರೀರಂಗಪಟ್ಟಣ೧೫೦೮೨೭

ಒಟ್ಟು೨೧೫೨೭೨೬೬೬ಜಿಲ್ಲಾಧಿಕಾರಿಯಿಂದ ಸಂಚಾರ ವ್ಯವಸ್ಥೆ ಪರಿಶೀಲನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮಾಡಿರುವ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿ ಡಾ.ಕುಮಾರ ಮಂಗಳವಾರ ನಗರದ ಸಾರಿಗೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆಯ ನಂತರ ಮಾತನಾಡಿದ ಅವರು, ಸಾರ್ವಜನಿಕರಿಗೆ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಂಡ್ಯ ವಿಭಾಗ ಸಾರಿಗೆ ಜಿಲ್ಲಾ ನಿಯಂತ್ರಕರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಕರು ಕೆಲಸಕ್ಕೆ ಹಾಜರಾಗುವಂತೆ ನೌಕರರಿಗೆ ಬೆಳಗ್ಗೆ ಕರೆ ಮಾಡಿ ಮನವಿ ಮಾಡಿದರೂ ಯಾರೂ ಸಹ ಕೆಲಸಕ್ಕೆ ಹಾಜರಾಗಿರುವುದಿಲ್ಲ ಎಂದು ತಿಳಿಸಿದರು.

ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಬೇಡಿಕೆ ಇರುವ ಮಾರ್ಗಗಳಿಗೆ ಅನುಗುಣವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದರು. ಅಟೋರಿಕ್ಷಾ ಹಾಗೂ ಖಾಸಗಿ ಬಸ್‌ಗಳ ನಿರ್ವಾಹಕರೊಂದಿಗೆ ಈಗಾಗಲೇ ಚರ್ಚಿಸಿ ಸಾರ್ವಜನಿಕರಿಗೆ ಹೆಚ್ಚಿನ ದರ ವಿಧಿಸಬಾರದು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.

ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿದ್ದರೆ ವೇತನ ಕಡಿತಗೊಳಿಸುವಂತೆ ಸರ್ಕಾರ ಆದೇಶ ಮಾಡಿದೆ. ಸಿಬ್ಬಂದಿ ಸಹ ಸಾರ್ವಜನಿಕರ ಕಷ್ಟವನ್ನು ಅರ್ಥಮಾಡಿಕೊಂಡು ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಜಿಲ್ಲಾ ಸಾರಿಗೆ ವಿಭಾಗೀಯ ನಿಯಂತ್ರಕ ನಾಗರಾಜು ಉಪಸ್ಥಿತರಿದ್ದರು.