ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇಲ್ಲಿನ ಶಂಕರನಗರದಲ್ಲಿನ ಅಭಿನವ ಭಾರತಿ ಕಾಲೇಜಿನ ಸಭಾಂಗಣದಲ್ಲಿ ಶ್ರೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ವತಿಯಿಂದ ಅನಂತಕುಮಾರ ಸ್ವಾಮೀಜಿಯವರ ೮೯ ನೇ ಜನ್ಮದಿನೋತ್ಸವದ ಅಂಗವಾಗಿ ಶ್ರೀಅನಂತ ಪ್ರಶಸ್ತಿಯನ್ನು ಸಮಾಜ ಸೇವಾ ಕ್ಷೇತ್ರದಿಂದ ಪದ್ಮಶ್ರೀ ಡಾ.ಹಾಸನ್ ರಘು ಆರೋಗ್ಯ ಕ್ಷೇತ್ರದಿಂದ ಡಾ.ಬಿ.ಎಸ್.ಕಕ್ಕಿಲ್ಲಾಯ ಅವರಿಗೆ ನೀಡಿ ಗೌರವಿಸಲಾಯಿತು.ಸಮಾರಂಭ ಉದ್ಘಾಟಿಸಿದ ರಮಣಶ್ರೀ ಸಮೂಹ ಸಂಸ್ಥೆಗಳ ಮುಖ್ಯಸ್ಥ ಎಸ್.ಷಡಕ್ಷರಿ ಮಾತನಾಡಿ, ಸಾಧಕರ ಸಾಧನೆಗಳು ಸಮಾಜಕ್ಕೆ ದಿಕ್ಕು ತೋರಿಸುವ ಬೆಳಕಾಗಿವೆ. ಸಾಧನೆ ಯಾರೊಬ್ಬರ ಸ್ವತ್ತಲ್ಲ. ಅದು ಸಾಧಕರ ಸ್ವತ್ತು. ಅಂತಹ ಸಾಧಕರ ಸಾಧನೆಗಳು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು. ಮುಖ್ಯವಾಗಿ ವಿದ್ಯಾರ್ಥಿ ಯುವಜನರು ಸಾಧಕರ ಸಾಧನೆಯನ್ನು ಅರಿಯಬೇಕು. ಮಹಾನ್ ವ್ಯಕ್ತಿಗಳ ತತ್ವ-ಸಿದ್ದಾಂತಗಳು, ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಶಿಕ್ಷಕರಿಗೆ ಸಂಬಳದಿಂದ ಸಂತೋಷ ಸಿಗುವುದಿಲ್ಲ. ಆದರೆ, ಆತ್ಮಸಂತೋಷ ಸಿಗುವುದು ವೃತ್ತಿಯಿಂದ ಮಾತ್ರ. ಭವಿಷ್ಯದ ಸತ್ಪ್ರಜೆಗಳನ್ನು ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಹೀಗಾಗಿ ಶಿಕ್ಷಕರು ತಮ್ಮ ವೃತ್ತಿಗೆ ಹೆಚ್ಚು ಗೌರವ ಕೊಟ್ಟು ಮಕ್ಕಳನ್ನು ದೇಶದ ಒಳ್ಳೆಯ ಪ್ರಜೆಗಳಾಗಿ ರೂಪಿಸುವಂತೆ ತಿಳಿಸಿದರು.ಖ್ಯಾತ ಲೇಖಕ ವಿದ್ವಾನ್ ಜಗದೀಶ್ ಶರ್ಮ ಸಂಪ ಮಾತನಾಡಿ, ಕೆಲವರು ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ, ಕೆಲವರನ್ನು ಪ್ರಶಸ್ತಿಗಳೇ ಹುಡುಕಿಕೊಂಡು ಬರುತ್ತವೆ. ಇದಕ್ಕಾಗಿ ಸಾಧನೆ ಮಾಡಬೇಕು. ನಾವು ಮಾಡುವ ಕೆಲಸಗಳು ಒಳ್ಳೆಯದಾಗಿದ್ದರೆ, ಸಮಾಜಕ್ಕೆ ಕೊಡುಗೆಗಳನ್ನು ನೀಡಿದರೆ ಪ್ರಶಸ್ತಿಗಳು ತಾನಾಗಿಯೇ ಬರುತ್ತವೆ. ಅಂತಹವರನ್ನು ಸಮಾಜವೇ ಗೌರವಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಶ್ರೀವೆಂಕಟೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶಿವಮೂರ್ತಿ ಕೀಲಾರ ಮಾತನಾಡಿ, ಅನಂತಕುಮಾರ ಸ್ವಾಮೀಜಿ ಅವರ ನಿಷ್ಕಾಮ ಸಾಮಾಜಿಕ ಸೇವೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಶ್ರೀ ಅನಂತ ಪ್ರಶಸ್ತಿ ಸ್ಥಾಪಿಸಲಾಗಿದೆ. ಪ್ರತಿ ವರ್ಷವು ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮ ಕ್ಷೇತ್ರಗಳಲ್ಲಿ ಅಭೂತಪೂರ್ವ ಸೇವೆಯನ್ನು ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಹಸ ನಿರ್ದೇಶಕ ಹಾಸನ್ ರಘು, ಮಂಡ್ಯದ ಖ್ಯಾತ ವೈದ್ಯ ಡಾ.ಬಿ.ಎಸ್.ಕಕ್ಕಿಲ್ಲಾಯ ಅವರಿಗೆ ಶ್ರೀ ಅನಂತ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಮತ್ತು ಶಿಕ್ಷಕರು, ಅಧ್ಯಾಪಕೇತರರು ಭಾಗವಹಿಸಿದ್ದರು.