ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು ಎಲ್ಲರೂ ಸಾಮರಸ್ಯ, ಅನ್ಯೋನ್ಯವಾಗಿದ್ದಾರೆ. ಆದರೆ, ಸರ್ಕಾರವು ಒಳಮೀಸಲಾತಿ ಮಾಡುವ ಮೂಲಕ ಈ ಜಾತಿಗಳಲ್ಲಿ ಒಡಕುಂಟು ಮಾಡಲು ಹೊರಟಿದೆ. ಈಚೆಗೆ ಸರ್ಕಾರ ತರಾತುರಿಯಲ್ಲಿ ಪ್ರಕಟಿಸಿದ ಜಾತಿ ಗಣತಿ ದತ್ತಾಂಶ ವಾಸ್ತವವಾಗಿಲ್ಲ ಎಂದು ಕರ್ನಾಟಕ ಪ್ರದೇಶ ಬಂಜಾರಾ ಸೇವಾ ಸಂಘದ ಜಿಲ್ಲಾಧ್ಯಕ್ಷ ಡಾ.ಬಸವರಾಜ ಚವ್ಹಾಣ ಹೇಳಿದರು.ಪಟ್ಟಣದ ಈರಕಾರ ಮುತ್ಯಾನ ದೇವಸ್ಥಾನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಗಣತಿ ಕಾರ್ಯ ಮೇ 5ರಿಂದ 17ರವರೆಗೆ ಜಾತಿ ಸಮೀಕ್ಷೆ ಮಾಡಲಿದೆ. ಬಂಜಾರ ಸಮುದಾಯದವರು ಹೊಟ್ಟೆಪಾಡಿಗಾಗಿ ಗೂಳೆ ಹೋಗಿರುವುದರಿಂದ ಸಮಾಜಕ್ಕೆ ಹಿನ್ನಡೆಯಾಗುವ ಭೀತಿ ಇರುವುದರಿಂದ ಈ ಸಮೀಕ್ಷೆಯನ್ನು ಬಂಜಾರ ಸಮಾಜ ವಿರೋಧಿಸುತ್ತದೆ. ಸರ್ಕಾರ ಒಳಮೀಸಲಾತಿ ಸಮೀಕ್ಷೆಗೆ ಆತುರದ ನಿರ್ಧಾರ ಬೇಡ ಎಂದರು.
ಒಳಮೀಸಲಾತಿ ಹೆಸರಲ್ಲಿ ಒಗ್ಗಟ್ಟಾಗಿರುವ ಸಮುದಾಯಗಳನ್ನು ಒಡೆದಾಳುವ ನೀತಿಯನ್ನು ಸರ್ಕಾರ ಅನುಸರಿಸುತ್ತಿರುವುದು ಖಂಡನೀಯ. ಒಳಮೀಸಲಾತಿ ಜಾರಿಗಾಗಿ ನ್ಯಾ.ನಾಗಮೋಹನ ದಾಸ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಮೇ 2025ರ ಅಂತ್ಯದ ಒಳಗಾಗಿ ಜಾತಿ ಸಮೀಕ್ಷೆ ಪೂರ್ಣಗೊಳಿಸಬೇಕಾಗಿದೆ. ಈಗಾಗಲೇ ಒಂದು ತಿಂಗಳು ಗತಿಸಿದೆ. ಇನ್ನುಳಿದ ಕೆಲವೇ ದಿನಗಳಲ್ಲಿ ನ್ಯಾಯ ಸಮ್ಮತ ಸಮಿಕ್ಷೆ ನಡೆಸುವುದು ಅಸಾಧ್ಯ ಎಂದರು.ಕೆಲವು ಕುತಂತ್ರಿಗಳು ಬಂಜಾರ ಸಮುದಾಯ ಮುಂದುವರೆದಿದೆ ಎಂದು ಹೇಳುತ್ತಿದ್ದಾರೆ. ಆದರೆ ರಾಜ್ಯದ ಹಲವಾರು ತಾಂಡಾಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಕೆಲವು ತಾಂಡಾಗಳು ಇನ್ನೂವರೆಗೂ ವಿದ್ಯುತ್ ಸೌಲಭ್ಯವಿಲ್ಲದೆ ಕತ್ತಲಲ್ಲಿ ಜೀವನ ಸಾಗಿಸುತ್ತಿವೆ. ಅಲ್ಲದೆ ಸರಿಯಾದ ರಸ್ತೆ ಸೌಕರ್ಯವಿಲ್ಲದೆ ಆ ತಾಂಡಾಗಳಗೆ ಹೋಗುವುದು ಕಷ್ಟದ ಕೆಲಸವಾಗಿದೆ. ಇಂತಹ ಸಂದರ್ಭದಲ್ಲಿ ಸಮೀಕ್ಷೆದಾರರು ತಾಂಡಾವನ್ನು ತಲುಪಿ ಸರಿಯಾದ ಸಮೀಕ್ಷೆ ನಡೆಸುವುದು ಕಷ್ಟದ ಕೆಲಸ. ಇದರಿಂದ ನ್ಯಾಯ ಸಮ್ಮತ ಸಮೀಕ್ಷೆ ನಡೆಸುವುದು ಅನುಮಾನ ಮೂಡಿಸುತ್ತದೆ ಎಂದರು.
ಒಂದು ವೇಳೆ ಸಮೀಕ್ಷೆ ನಡೆಸುವುದೇ ಆದಲ್ಲಿ ಕೇಂದ್ರ ಸರ್ಕಾರದ ಜನಗಣತಿ ಮುಗಿದ ನಂತರ ವಾಸ್ತವಿಕ ದತ್ತಾಂಶ ಪರಿಗಣಿಸಿ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಬೇಕು. ನಗರ ಪ್ರದೇಶಗಳಲ್ಲಿ ಹಲವಾರು ಬಂಜಾರಾ ಸಮುದಾಯದವರು ವಾಸಿಸುತ್ತಿದ್ದಾರೆ. ಅವರನ್ನು ಗುರುತಿಸುವ ಕಾರ್ಯವಾಗಬೇಕು. ಜೊತೆಗೆ ಕೆಲ ಸಮುದಾಯದವರು ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅಂತಹವರ ಸಮೀಕ್ಷೆ ನಡೆಸುವ ಕುರಿತಾಗಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ನ್ಯಾಯ ಸಮ್ಮತ ಒಳಮೀಸಲಾತಿ ಸಮೀಕ್ಷೆಯಲ್ಲಿ ಬಂಜಾರರು ಹೆಚ್ಚು ಜನಸಂಖ್ಯೆ ಹೊಂದಿದಲ್ಲಿ ಸರ್ಕಾರ ಅವರ ಮೀಸಲಾತಿ ಪ್ರಮಾಣ ಹೆಚ್ಚಿಸಿ ಬಂಜಾರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಬಾಳು ರಾಠೋಡ, ಬಂಜಾರಾ ಸಮಾಜದ ಮುಖಂಡರಾದ ಹರಿಲಾಲ ನಾಯಕ, ಬಾಬು ಚವ್ಹಾಣ, ಶಾಂತು ರಾಠೋಡ, ಗ್ರಾಪಂ ಸದಸ್ಯ ಸಂತೋಷ ನಾಯಕ, ಭೀಮು ಪವಾರ, ರವಿ ರಾಠೋಡ(ಉಪ್ಪಲದಿನ್ನಿ), ಪುನೀತ ಲಮಾಣಿ, ಸುರೇಶ ಕಾರಬಾರಿ, ಶಿವಾಜಿ ರಾಠೋಡ, ಶಂಕರ ಲಮಾಣಿ, ಕೇಶುಬಾಯಿ ಲಮಾಣಿ, ಶಶಿಧರ ರಾಠೋಡ, ಉದಯ ರಾಠೋಡ ಇತರರು ಇದ್ದರು.