ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಬ್ರೇಕ್ ಪಾಸ್ಟ್, ನಾವು ಅಣ್ಣ ತಮ್ಮಂದಿರು ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ಧಿಪಡಿಸುತ್ತಾರೆಂಬ ಆಶಾಭಾವನೆಯಿಂದ ಮತ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾಂಗ್ರೆಸ್ ಸರ್ಕಾರದ ಅಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಮರೀಚಿಕೆಯಾಗಿದೆ. ಸಿಎಂ ಸ್ಥಾನಕ್ಕಾಗಿ ಕಿತ್ತಾಟ ನಡೆಸುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಬ್ರೇಕ್ ಪಾಸ್ಟ್, ನಾವು ಅಣ್ಣ ತಮ್ಮಂದಿರು ಎನ್ನುತ್ತಲೇ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯವನ್ನು ಅಭಿವೃದ್ಧಿಪಡಿಸುತ್ತಾರೆಂಬ ಆಶಾಭಾವನೆಯಿಂದ ಮತ ಹಾಕಿ ಕಾಂಗ್ರೆಸ್ ಅಧಿಕಾರಕ್ಕೆ ತಂದ ರಾಜ್ಯದ ಜನತೆಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ದೂರಿದರು.
ಮುಖ್ಯಮಂತ್ರಿ ಅಧಿಕಾರ ಹಂಚಿಕೆ ಆಗಿದ್ದರೇ ಸಿದ್ದರಾಮಯ್ಯ ಸ್ಥಾನ ಬಿಟ್ಟುಕೊಡಲಿ ಅಥವಾ ಯಾವುದೇ ಮಾತುಕತೆ ಆಗಿಲ್ಲ ಎಂದರೇ ಮುಂದುವರೆಯಲಿ. ಆದರೆ, ಹೈಕಮಾಂಡ್ ನಿರ್ಧಾರ ಮಾಡುತ್ತಾರೆಂದು ಗೊಂದಲ ಸೃಷ್ಠಿಸುತ್ತಿರುವುದು ಸರಿಯಲ್ಲ ಎಂದು ಟೀಕಿಸಿದರು.ಕಾಂಗ್ರೆಸ್ ಹೈಕಮಾಂಡ್ ಸತ್ತೋಗಿ ಎಷ್ಟೋ ವರ್ಷಗಳಾಗಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇಲ್ಲ. ಬೆಂಗಳೂರಿನಲ್ಲಿ ಬಂದು ತೀರ್ಮಾನ ತೆಗೆದುಕೊಳ್ಳಲು ಆಗಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದಾರೆಂದು ಲೇವಡಿ ಮಾಡಿದರು.
ಜನ ಕಾಂಗ್ರೆಸ್‌ನ್ನು ನಂಬಿ ಅಧಿಕಾರ ಕೊಟ್ಟರೇ ರಾಜ್ಯವನ್ನು ಇಪ್ಪತ್ತು ವರ್ಷಕ್ಕೆ ಹಿಂದಕ್ಕೆ ತೆಗೆದುಕೊಂಡು ಹೋಗಿರುವುದು ವಿಪರ್ಯಾಸ. ದಲಿತ ಸಮುದಾಯಕ್ಕೆ ಬಜೆಟ್‌ನಲ್ಲಿ 42 ಸಾವಿರ ಕೋಟಿ ಅನುದಾನವನ್ನು ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಹೇಳುತ್ತಾರೆ. ಆದರೆ, ಇದುವರೆಗೂ ಮೂರು ಕಾಸನ್ನು ಬಿಡುಗಡೆ ಮಾಡಿಲ್ಲ ಎಂದು ದೂರಿದರು.ಈ ಬಗ್ಗೆ ಒಬ್ಬ ದಲಿತ ನಾಯಕನು, ಶಾಸಕರ ಕೂಡ ಪ್ರಶ್ನೆ ಮಾಡಿಲ್ಲ. ಅಲ್ಲಿ ಗುಲಾಮಗಿರಿ ಮಾಡುವುದಕ್ಕೆ ಅಲ್ಲಿ ಇರಬೇಕಾ. ಬಿಜೆಪಿ ಸರ್ಕಾರ ಬಂದರೇ ಎಸ್‌ಸಿಪಿ ಟಿಎಸ್‌ಪಿ ಹಣವನ್ನು ಸಮರ್ಪಕವಾಗಿ ಬಳಸಲಾಗುವುದು ಎಂದರು.
ವೈಜ್ಞಾನಿಕ ಬೆಲೆಗೆ ಕಬ್ಬು ಬೆಳೆಗಾರರು ಬೀದಿಯಲ್ಲಿ ನಿಂತು ಹೋರಾಟ ಮಾಡುವಂತಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಲ್ಲಿ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಿಲ್ಲ. ಮುಸುಕಿನ ಜೋಳ, ತೊಗರಿ, ಭತ್ತ, ರಾಗಿಯನ್ನು ಕಟಾವು ಮಾಡಲಾಗುತ್ತಿದ್ದರೂ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯದೇ ನಿರ್ಲಕ್ಷ್ಯ ವಹಿಸುತ್ತಿದೆ. ಶಾಸಕರ ಖರೀದಿ ಜೋರಾಗಿಯೇ ನಡೆಯುತ್ತಿದೆ. ಉಳಿದ ಎರಡುವರೆ ವರ್ಷದಲ್ಲಿ ಜನರಿಗೆ ಸ್ಪಂದಿಸಿ ಇಲ್ಲದೇ ಹೋದರೇ ಜನರೇ ತಕ್ಕ ಪಾಠ ಕಲಿಸಲಿದ್ದಾರೆಂದು ಹೇಳಿದರು.ಕಾಂಗ್ರೆಸ್‌ನಲ್ಲಿ ದಲಿತರನ್ನು ಮುಖ್ಯಮಂತ್ರಿ ಮಾಡುವುದು ಕನಸ್ಸಿನ ಮಾತಾಗಿದೆ. ಆ ಪಕ್ಷ ಯಾವುದೇ ದಲಿತ ನಾಯಕರನ್ನು ಬೆಳೆಸಿಲ್ಲ ಕೇವಲ ಮತ ಬ್ಯಾಂಕ್‌ನ್ನಾಗಿ ಮಾಡಿಕೊಳ್ಳುವ ಮೂಲಕ ದಲಿತರಿಗೆ ವಿಷ ಉಣ್ಣಿಸಿದೆ. ದಲಿತರು ಮುಖ್ಯಮಂತ್ರಿಯಾಗುವ ಅವಕಾಶವಿದ್ದರೇ ಅದು ಬಿಜೆಪಿಯಲ್ಲಿ ಮಾತ್ರ ಎಂದು ಸ್ವಷ್ಟಪಡಿಸಿದರು.
ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ, ಕಾಂಗ್ರೆಸ್ ಸರ್ಕಾರದ ಲಂಚಾವತರದಲ್ಲಿ ಬೇಸತ್ತ ಜನರು ಮನೆ ಮಾಡುವುದನ್ನು ನಿಲ್ಲಿಸಿದ್ದಾರೆ. ಲಂಚ ಕೊಟ್ಟರೇ ಮಾತ್ರ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆರೋಪಿಸಿದರು.ಈ ವೇಳೆ ಭಾರತೀಯ ಜನತಾಪಾರ್ಟಿ ಜಿಲ್ಲಾ ಉಪಾಧ್ಯಕ್ಷ ಯಮದೂರು ಸಿದ್ದರಾಜು, ಮಂಡಲ ಅಧ್ಯಕ್ಷ ಎಂ.ಎನ್.ಕೃಷ್ಣ ಮುಖಂಡರಾದ ಮಧು ಗಂಗಾಧರ್, ಸಿದ್ದಲಿಂಗಸ್ವಾಮಿ, ಕ್ಯಾತನಹಳ್ಳಿ ಅಶೋಕ್, ಬಸವರಾಜು, ಕಾಂತರಾಜು, ಶಶಿಕುಮಾರ್, ದೇವರಾಜು, ಚಿಕ್ಕಣ್ಣ, ಶಿವಣ್ಣ, ಶಕುಂತಳ ಮಲ್ಲಿಕ್ ಸೇರಿದಂತೆ ಇತರರು ಇದ್ದರು.