ಸಾರಾಂಶ
ಕನ್ನಡಪ್ರಭ ವಾರ್ತೆ ನವಲಗುಂದ
ಕೇಂದ್ರ ಸರ್ಕಾರ ಅನುಮತಿ ನೀಡಿದರೆ ನಾಳೆಯಿಂದಲೇ ಮಹದಾಯಿ, ಕಳಸಾ- ಬಂಡೂರಿ ಯೋಜನೆಯ ಕಾಮಗಾರಿ ಶುರು ಮಾಡುತ್ತೇವೆ. ಆದರೆ, ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ ಎಂದು ಬಿಜೆಪಿಗರು ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯಾಗಿ ಹೇಳುತ್ತೇನೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಅತ್ಯಂತ ಸುಭದ್ರವಾಗಿದೆ.
ಕೋಟ್ಯಂತರ ರೂ.ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗಳೇ ಆರ್ಥಿಕ ಪರಿಸ್ಥಿತಿ ಭದ್ರವಾಗಿದೆ ಎಂಬುದಕ್ಕೆ ಸಾಕ್ಷಿ. ಇವುಗಳನ್ನು ಬಿಜೆಪಿಗರು ಬಂದು ನೋಡಲಿ ಎಂದು ಸವಾಲೆಸೆದರು.
ಧಾರವಾಡ ಜಿಲ್ಲೆ ನವಲಗುಂದದಲ್ಲಿ ಶನಿವಾರ ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಈ ಭಾಗದ ಬಹುದಶಕಗಳ ಬೇಡಿಕೆ ಮಹದಾಯಿ, ಕಳಸಾ-ಬಂಡೂರಿ ಯೋಜನೆಯಾಗಿದೆ.
ಇದನ್ನು ನಮ್ಮ ಸರ್ಕಾರ ಜಾರಿಗೊಳಿಸಲು ಸದಾಕಾಲ ಸಿದ್ಧವಿದೆ. ಇದಕ್ಕೆ ಬೇಕಾದ ಟೆಂಡರ್ ಅನ್ನೂ ಕರೆಯಲಾಗಿದೆ. ಆದರೆ, ಕೇಂದ್ರ ಸರ್ಕಾರದ ಪರಿಸರ ಇಲಾಖೆ ಅನುಮತಿಯನ್ನೇ ಕೊಡುತ್ತಿಲ್ಲ.
ಮಹದಾಯಿ ನ್ಯಾಯಾಧೀಕರಣ ತೀರ್ಪು ಕೊಟ್ಟು, ನೋಟಿಫಿಕೇಶನ್ ಆದರೂ ಈವರೆಗೂ ಅನುಮತಿ ಏಕೆ ಕೊಡುತ್ತಿಲ್ಲ? ನಿಮ್ಮ ಭಾಗದ ಸಂಸದರೂ ಕೇಂದ್ರದಲ್ಲಿ ಸಚಿವರಾಗಿದ್ದಾರೆ.
ಅವರೇನು ಮಾಡುತ್ತಿದ್ದಾರೆ?. ಅವರೇಕೆ ಅನುಮತಿ ಕೊಡಿಸುತ್ತಿಲ್ಲ?. ‘ಏನಪ್ಪ ಜೋಶಿ ಏನು ಮಾಡ್ತಾ ಇದ್ದೀಯಾ?’ ಎಂದು ಕಾಲೆಳೆದರು.
ಬಿಜೆಪಿಯವರು ಮಹದಾಯಿ ವಿಷಯದಲ್ಲಿ ಯಾವಾಗಲೂ ರಾಜಕಾರಣವನ್ನೇ ಮಾಡಿಕೊಂಡು ಬಂದಿದ್ದಾರೆ. ಹಿಂದೆ ಯಡಿಯೂರಪ್ಪ ಮಹದಾಯಿ ಯೋಜನೆ ಕಾಮಗಾರಿಗೆ ಒಪ್ಪಿಗೆ ನೀಡಿದ್ದೇವೆ. ಕಾಮಗಾರಿ ಆರಂಭಿಸುವುದಾಗಿ ಬಹಿರಂಗ ಪತ್ರ ಓದಿದ್ದರು. ಕಾಮಗಾರಿ ಆರಂಭಿಸಿದರೇ? ಎಂದು ಪ್ರಶ್ನಿಸಿದರು.
ಈ ಭಾಗದವರೇ ಮುಖ್ಯಮಂತ್ರಿಯಾಗಿದ್ದರೂ ಈವರೆಗೂ ಬಜೆಟ್‌ನಲ್ಲಿ ಬೆಣ್ಣಿಹಳ್ಳದ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಆದರೆ, ನಾನು ನಿಮ್ಮ ಧ್ವನಿ ಅರಿತು ಬೆಣ್ಣಿಹಳ್ಳಕ್ಕೆ ತಡೆಗೋಡೆ ನಿರ್ಮಿಸುವ ಕುರಿತು ನಿರ್ಧರಿಸಿದ್ದೇನೆ. ಬಜೆಟ್‌ನಲ್ಲಿ ಅದನ್ನು ಪ್ರಸ್ತಾಪಿಸಿದ್ದೇನೆ ಎಂದರು
ಬಿಜೆಪಿಗರು ಕೋಲೆ ಬಸವ ಇದ್ದಂತೆ. ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಮುಂದೆ ಇವರ್‍ಯಾರಿಗೂ ಬಾಯಿಯೇ ಬರಲ್ಲ. ಬರೀ ತಲೆ ಅಲ್ಲಾಡಿಸುತ್ತಾರೆ ಎಂದು ಟೀಕಿಸಿದರು.
ಏನೂ ಅಭಿವೃದ್ಧಿ ಕೆಲಸ ಮಾಡದ, ಜನರ ಸಮಸ್ಯೆಗಳ ಕುರಿತು ಧ್ವನಿ ಎತ್ತದ, ಮಹದಾಯಿ ಬಗ್ಗೆ ಚಕಾರ ಎತ್ತದ ಪ್ರಹ್ಲಾದ ಜೋಶಿ ಅವರನ್ನು ಏಕೆ ನೀವು ಆಯ್ಕೆ ಮಾಡಿ ಕಳುಹಿಸುತ್ತೀರೋ ನನಗೆ ಅರ್ಥವಾಗುತ್ತಿಲ್ಲ ಎಂದು ಜೋಶಿ ವಿರುದ್ಧ ಹರಿಹಾಯ್ದರು.
ಅತಿ ಹೆಚ್ಚು ಸುಳ್ಳು ಹೇಳುವ ಪಕ್ಷ ಬಿಜೆಪಿ. ಅತಿ ಹೆಚ್ಚು ಸುಳ್ಳು ಹೇಳುವ ವ್ಯಕ್ತಿಯೆಂದರೆ ನರೇಂದ್ರ ಮೋದಿ. ಅಚ್ಚೆ ದಿನ್ ಅಚ್ಛೆ ದಿನ್ ಎನ್ನುತ್ತಲೇ ಜನರನ್ನು ಮರಳು ಮಾಡಿದರು.
ಎಲ್ಲಿದೆ ಅಚ್ಚೇ ದಿನ್ ? ಎಂದು ಪ್ರಶ್ನಿಸಿದರು. ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣವಾಗಿದ್ದರೆ ಅದೇಕೆ ಪ್ರತಿಭಟನೆ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.
ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಬಿಜೆಪಿಗರು ಮಾತ್ರ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಸಾಗಿದೆ.
ಅಭಿವೃದ್ಧಿ ಕೆಲಸಗಳಿಗೆ ದುಡ್ಡೇ ಇಲ್ಲ ಎಂದೆಲ್ಲ ಆರೋಪ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಹಣಕಾಸಿನ ತೊಂದರೆಯಿಲ್ಲ. ಗ್ಯಾರಂಟಿ ಯೋಜನೆಗಳನ್ನು ನೀಡುತ್ತೇವೆ.
ಅದರೊಟ್ಟಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎನ್ನುವವರು ನವಲಗುಂದಕ್ಕೆ ಬಂದು ನೋಡಲಿ. ಇಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಅರಿತುಕೊಳ್ಳಲಿ ಎಂದು ಸವಾಲೆಸೆದರು.
ಆರ್ಥಿಕ ಪರಿಸ್ಥಿತಿ ಬಗ್ಗೆ ನನಗೆ ಲೆಕ್ಕ ಕೇಳುತ್ತಾರೆ. ಇವರಿಗೇಕೆ ನಾನು ವರದಿ ಕೊಡಬೇಕು. ಬಿಜೆಪಿಯವರಿಗೆ ವರದಿ ಕೊಡುವ ಅವಶ್ಯಕತೆ ಇಲ್ಲ. ನನ್ನ ಮಾಲೀಕರು ನೀವು. ನಿಮಗೆ ಲೆಕ್ಕ ಕೊಡುತ್ತೇನೆ. ಮುಖ್ಯಮಂತ್ರಿಯಾಗಿ ಹೇಳುತ್ತೇನೆ, ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಸ್ಪಷ್ಟಪಡಿಸಿದರು.