ಸಾರಾಂಶ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಉಚಿತವಾಗಿ ಪರಿಹಾರ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಮುಖ್ಯ ಉದ್ದೇಶ ಮತ್ತು ಕರ್ತವ್ಯವಾಗಿದೆ
ಬಳ್ಳಾರಿ: ರಾಜ್ಯದಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿಯಾದ ಪ್ರಕರಣಗಳ ಇತ್ಯರ್ಥದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನ ಪಡೆದುಕೊಂಡಿದೆ ಎಂದು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾ. ಟಿ.ಜಿ. ಶಿವಶಂಕರೇಗೌಡ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಬಳ್ಳಾರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಗ್ರಾಹಕರ ಕುಂದುಕೊರತೆಗಳನ್ನು ನಿಗದಿತ ಅವಧಿಯೊಳಗೆ ಮತ್ತು ಸಾರಾಂಶ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಉಚಿತವಾಗಿ ಪರಿಹಾರ ಒದಗಿಸುವುದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಮುಖ್ಯ ಉದ್ದೇಶ ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.
ಭಾರತ ದೇಶವು ಜಾಗತೀಕರಣ ಹೊಂದುತ್ತಿದೆ. ಅಭಿವೃದ್ಧಿಯತ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರ ಹಕ್ಕುಗಳಿಗೆ ಚ್ಯುತಿಯಾಗದಂತೆ ಅವರ ಹಿತಾಸಕ್ತಿ ಕಾಪಾಡಲು ದೇಶದಲ್ಲಿ ರಾಷ್ಟ್ರೀಯ ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಜಾರಿಗೆ ತರಲಾಯಿತು. ಸಾರ್ವಜನಿಕರು ಗ್ರಾಹಕ ಕಾಯ್ದೆ, ಹಕ್ಕುಗಳ ಕುರಿತು ಜಾಗೃತಿ ಹೊಂದಬೇಕು ಎಂದರು.ರಾಜ್ಯದಲ್ಲಿ 34 ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಿದ್ದು, ಗ್ರಾಹಕರ ವ್ಯಾಜ್ಯಗಳ ತ್ವರಿತ ಇತ್ಯರ್ಥಕ್ಕಾಗಿ ಹಂತ-ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಮಧ್ಯಸ್ಥಿಕೆ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಸಮಾಜದಲ್ಲಿ ಡಿಜಿಟಲ್ ಖರೀದಿ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಅತಿ ಹೆಚ್ಚು ವಂಚನೆಗಳು ಆಗುತ್ತಿವೆ. ಈ ಕುರಿತು ಎಚ್ಚರಿಕೆಯಿಂದ ವ್ಯವಹರಿಸಬೇಕು. ಪ್ರಸ್ತುತದಲ್ಲಿ ಗ್ರಾಹಕರಿಗಿರುವ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯವಾಗಬೇಕಿದೆ ಎಂದು ಹೇಳಿದ ಅಧ್ಯಕ್ಷರು, ಗ್ರಾಹಕರ ಹಕ್ಕುಗಳ ರಕ್ಷಣೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತರಲು ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ. ಶಾಂತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರ ಆರಂಭಗೊಂಡಿರುವುದು ಸಂತಸದ ವಿಷಯವಾಗಿದ್ದು, ನಮ್ಮ ಕಲ್ಯಾಣ ಕರ್ನಾಟಕ ಭಾಗವು ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಆಶಿಸಿದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಯೋಗದ ಶಿರಸ್ತೇದಾರ ತೋಟದ ರವಿಕುಮಾರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ನಡೆದು ಬಂದ ಹಾದಿಯ ಬಗ್ಗೆ ಪ್ರಸ್ತುತಪಡಿಸಿದರು.ಕಾರ್ಯಕ್ರಮದಲ್ಲಿ ರಾಜಿಯಾದಂತಹ ಕಕ್ಷಿದಾರರಿಗೆ ಪರಿಹಾರವಾಗಿ ಚೆಕ್ ವಿತರಿಸಲಾಯಿತು. ಮೇಯರ್ ಪಿ.ಗಾದೆಪ್ಪ, ಆಯೋಗದ ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಕೆ.ಕೋಟೇಶ್ವರ ರಾವ್, ಜೆ.ಎಂ. ಅನಿಲಕುಮಾರ್, ಆಯೋಗದ ಮಹಿಳಾ ಸದಸ್ಯರಾದ ಮಾರ್ಲಾ ಶಶಿಕಲಾ ಸೇರಿದಂತೆ ಜಿಲ್ಲಾ ನ್ಯಾಯಾಲಯದ ವಿವಿಧ ನ್ಯಾಯಾಧೀಶರು, ವಕೀಲರು, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧಿಕಾರಿ-ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.