ಮಂಗಳೂರಿನಲ್ಲಿ ರಾಜ್ಯದ ಪ್ರಥಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾವಳಿ ಉದ್ಘಾಟನೆ

| Published : Oct 29 2025, 11:15 PM IST

ಮಂಗಳೂರಿನಲ್ಲಿ ರಾಜ್ಯದ ಪ್ರಥಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾವಳಿ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ರಾಜ್ಯದ ಪ್ರಥಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾವಳಿ- ಚೀಫ್‌ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌- 2025ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.

ಮಂಗಳೂರು: ಕ್ರೀಡೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ನಗರದ ಉರ್ವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ರಾಜ್ಯದ ಪ್ರಥಮ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯಾವಳಿ- ಚೀಫ್‌ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌- 2025 ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಶೇ.2 ಮೀಸಲಾತಿ ನೀಡುವ ಕೆಲಸ ಮಾಡಿದ್ದೇವೆ. ಪೊಲೀಸ್‌ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಇದುವರೆಗೆ ಇದ್ದ ಶೇ.2 ಮೀಸಲಾತಿಯನ್ನು ಶೇ.3ಕ್ಕೆ ಏರಿಸಿದ್ದು, ಈಗಾಗಲೇ ಅನೇಕರಿಗೆ ಈ ನೆಲೆಯಲ್ಲಿ ಉದ್ಯೋಗಪತ್ರ ನೀಡಿದ್ದೇವೆ. ಜಗತ್ತಿನ ನಂ.1 ಜನಸಂಖ್ಯೆಯ ದೇಶವಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವವರ ಸಂಖ್ಯೆ ಕಡಿಮೆಯಿದೆ. ಹಾಗಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದವರಿಗೆ 5 ಕೋಟಿ ರು. ಪ್ರೋತ್ಸಾಹಧನ, ಬೆಳ್ಳಿ ಪದಕ ಗೆದ್ದವರಿಗೆ 3 ಕೋಟಿ ರು., ಕಂಚಿನ ಪದಕಕ್ಕೆ 2 ಕೋಟಿ ರು. ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.10 ಲಕ್ಷ ರು. ತರಬೇತಿ ಶುಲ್ಕ:

ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಸಲುವಾಗಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ 60 ಮಂದಿಗೆ ಅವರ ತರಬೇತಿ ಶುಲ್ಕ ತಲಾ 10 ಲಕ್ಷ ರು.ಗಳನ್ನು ಸರ್ಕಾರ ಭರಿಸಲಿದೆ. ಮಂಗಳೂರಿನಿಂದಲೂ ಇಂತಹ ಕ್ರೀಡಾಪಟುಗಳು ಬರಬೇಕು ಎಂದು ಸಿಎಂ ಸಿದ್ದರಾಮಯ್ಯ ಆಶಿಸಿದರು.

ಬಾಡ್ಮಿಂಟನ್‌ ಆಟವನ್ನು ಸಾಮಾನ್ಯವಾಗಿ ಆರೋಗ್ಯ ರಕ್ಷಣೆಗಾಗಿ ಆಡುತ್ತಾರೆ. ಪ್ರಕಾಶ್‌ ಪಡುಕೋಣೆ, ಪುಲ್ಲೇಲ ಗೋಪಿಚಂದ್‌ ಅವರು ದೇಶದಲ್ಲಿ ಬಾಡ್ಮಿಂಟನ್‌ ಗೆ ಅಡಿಪಾಯ ಹಾಕಿದವರು. ಇತ್ತಿಚಿನ ವರ್ಷಗಳಲ್ಲಿ ಸೈನಾ ನೆಹ್ವಾಲ್‌, ಪಿವಿ ಸಿಂಧೂ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಶೋಕ್‌ ಪೂವಯ್ಯ ಹಾಗೂ ಅರುಣ್ ಪೂವಯ್ಯ ಸೋದರರು ನಮ್ಮ ದೇಶಕ್ಕೆ ಕೀರ್ತಿ ತಂದಿದ್ದಾರೆ. ಇಂತಹ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಬೇಕು ಎಂದು ಶುಭ ಹಾರೈಸಿದರು.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ವ್ಯವಸ್ಥೆಯನ್ನು ಮಂಗಳೂರಿನ ಉರ್ವದ ಒಳಾಂಗಣ ಕ್ರೀಡಾಂಗಣದ ಮೂಲಕ ಮಾಡಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಂತೆ ಮಂಗಳೂರು ಕೂಡ ಸರ್ವ ರೀತಿಯಲ್ಲಿ ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ವಿಶೇಷ ಯೋಜನೆಗಳನ್ನು ನೀಡಿ ದೇಶದ ಪ್ರಮುಖ ನಗರವನ್ನಾಗಿ ರೂಪಿಸಲು ಸರ್ಕಾರ ಉದ್ದೇಶ ಹೊಂದಿದೆ ಎಂದರು.ಸರ್ಫಿಂಗ್‌, ಗಾಳಿಪಟ ಉತ್ಸವದ ಜತೆಗೆ ಕ್ರೀಡೆ, ಸಂಸ್ಕೃತಿ, ಪ್ರವಾಸೋದ್ಯಮವನ್ನು ಜೋಡಿಸಿಕೊಂಡರೆ ಮಂಗಳೂರು ನಗರದ ಬೆಳವಣಿಗೆ ವೇಗ ಪಡೆಯಲಿದೆ. ಜತೆಗೆ ಬಂಡವಾಳ ಹೂಡಿಕೆಯ ವಿಫುಲ ಅವಕಾಶವೂ ಇಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.ಸಮಾರಂಭದಲ್ಲಿ ಬ್ಯಾಡ್ಮಿಂಟನ್‌ ಕ್ಷೇತ್ರದ ಸಾಧಕರಾದ ಅರುಣ್‌ ಪೂವಯ್ಯ ಹಾಗೂ ಅಶೋಕ್‌ ಪೂವಯ್ಯರನ್ನು ಸನ್ಮಾನಿಸಲಾಯಿತು. ದ.ಕ. ಜಿಲ್ಲಾ ಬ್ಯಾಡ್ಮಿಂಟನ್‌ ಎಸೋಸಿಯೇಶನ್‌ ಅಧ್ಯಕ್ಷ ಸಂತೋಷ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಕರ್ನಾಟಕ ಬ್ಯಾಡ್ಮಿಂಟನ್‌ ಎಸೋಸಿಯೇಶನ್‌ ಅಧ್ಯಕ್ಷ ಮನೋಜ್‌ ಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.ವೇದಿಕೆಯಲ್ಲಿ ಶಾಸಕರಾದ ಅಶೋಕ್‌ ಕುಮಾರ್‌ ರೈ, ನಝೀರ್‌ ಅಹಮ್ಮದ್‌, ವಿಧಾನ ಪರಿಷತ್‌ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್‌ ಡಿಸೋಜ, ಅಜಯ್‌ ಸಿಂಗ್‌, ದ.ಕ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಮಾಜಿ ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್‌, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್‌, ಬ್ಯಾರಿ ಅಕಾಡೆಮಿ ಅಧ್ಯಕ್ಷ ಉಮರ್‌ ಯು.ಎಚ್‌., ತುಳು ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್‌, ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಹೀದ್‌ ತೆಕ್ಕಿಲ್‌, ಪ್ರಮುಖರಾದ ಲಾವಣ್ಯ ಬಳ್ಳಾಲ್‌, ವಿಶ್ವಾಸ್‌ ಕುಮಾರ್‌ ದಾಸ್‌, ಶಶಿಧರ ಹೆಗ್ಡೆ, ಪದ್ಮರಾಜ್‌, ಮನೋಜ್‌ ಕುಮಾರ್‌, ಎಂ.ಪಿ. ರವೀಂದ್ರ, ಹಿರಿಯ ಅಧಿಕಾರಿಗಳಾದ ಎಲ್‌.ಕೆ. ಅತೀಕ್‌, ಚೇತನ್‌ ಮೊದಲಾದವರು ಇದ್ದರು.

ಅಡಿಗಲ್ಲು ಹಾಕಿದ್ದೂ ನಾನೇ ಉದ್ಘಾಟಿಸಿದ್ದೂ ನಾನೇ: ಸಿಎಂ

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಪಂದ್ಯ ಮೊದಲ ಬಾರಿ ನಡೆಯುತ್ತಿದೆ. ಇಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅಡಿಗಲ್ಲು ಹಾಕಿದ್ದು ನಾನೇ. ಈ ಸರ್ಕಾರದ ಅವಧಿಯಲ್ಲಿ ಉದ್ಘಾಟನೆ ಮಾಡಿದ್ದೂ ನಾನೇ. ಅಡಿಗಲ್ಲು ಹಾಕಿದಾಗ 35 ಕೋಟಿ ರು. ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಬಿಜೆಪಿ ಸರ್ಕಾರ ಬಂದ ನಂತರ ಯೋಜನಾ ವೆಚ್ಚವನ್ನು 20 ಕೋಟಿ ರು.ಗೆ ಇಳಿಕೆ ಮಾಡಿ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಲಿಲ್ಲ. ಕೆಲಸವನ್ನೂ ಮಾಡಲಿಲ್ಲ. ನಾನು ಮತ್ತೆ ಸಿಎಂ ಆಗಿ 15 ಕೋಟಿ ರು. ಬಿಡುಗಡೆಗೊಳಿಸಿ ಕ್ರೀಡಾಂಗಣ ಪೂರ್ಣಗೊಳಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.ಒಂದು ಆಟದಲ್ಲೂ ಮುಂದೆ ಬರಲಿಲ್ಲ!

ನಾನು ಎಲ್ಲ ಬಗೆಯ ಆಟ ಆಡುತ್ತಿದ್ದೆ. ಆದರೆ ಒಂದು ಆಟದಲ್ಲೂ ಮುಂದೆ ಬರಲಿಲ್ಲ..!

ಹೀಗೆಂದವರು ಸಿಎಂ ಸಿದ್ದರಾಮಯ್ಯ. ಹೈಸ್ಕೂಲ್‌ನಲ್ಲಿ ನಾನೂ ಬ್ಯಾಡ್ಮಿಂಟನ್‌ ಆಡುತ್ತಿದ್ದೆ. ಕಬಡ್ಡಿ, ಫುಟ್ಬಾಲ್‌ ಸೇರಿ ಎಲ್ಲ ಬಗೆಯ ಆಟ ಆಡುತ್ತಿದ್ದೆ. ಆದರೆ ಒಂದು ಆಟದಲ್ಲೂ ಪರಿಣತಿ ಪಡೆದಿಲ್ಲ. ಹಾಗಾಗಿ ಕ್ರೀಡೆಯಲ್ಲಿ ನಾನು ಮುಂದೆ ಬರಲಿಲ್ಲ ಎಂದು ಹೇಳಿದರು.