ಸಾರಾಂಶ
-ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಿಂದ ಭುವನೇಶ್ವರಿ ರಥ ನಿರ್ಮಾಣ
-ಶಾಂತಲಿಂಗ ಶ್ರೀಗಳ ಪರಿಕಲ್ಪನೆಯಲ್ಲಿ ಮೂಡಿಬಂದ ಕನ್ನಡದ ತೇರುಎಸ್.ಜಿ.ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದ
ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಿಂದ ನಾಡಿನಲ್ಲಿಯೇ ಪ್ರಪ್ರಥಮವಾಗಿ ಕನ್ನಡ ಮಾತೆ ಭುವನೇಶ್ವರಿ ದೇವಿಗಾಗಿಯೇ ವಿಶೇಷ ರಥ ನಿರ್ಮಿಸಲಾಗಿದ್ದು, ರಾಜ್ಯೋತ್ಸವ ದಿನದಂದು (ನ.1) ಲೋಕಾರ್ಪಣೆಗೊಳ್ಳಲಿದೆ.ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಸ್ವಾಮಿಗಳ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕನ್ನಡ ತೇರಿನಲ್ಲಿ ಈ ಬಾರಿಯ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭುವನೇಶ್ವರಿ ವಿರಾಜಮಾನ ಆಗಲಿದ್ದಾಳೆ. ಈ ಹೊಸ ಸಂಭ್ರಮ ಬಂಡಾಯದ ನೆಲದಿಂದ ಕನ್ನಡದ ಹೊಸ ಕಹಳೆ ಮೊಳಗಲಿದೆ.
ರಥದ ವಿನ್ಯಾಸ: ೪ ಚಕ್ರಗಳುಳ್ಳ ಈ ರಥವು ಸುಮಾರು ೧೫ ಅಡಿ ಎತ್ತರವಿದ್ದು, ನಡುವೆ ಪಂಚಲೋಹದ ನಾಡಮಾತೆ ಭುವನೇಶ್ವರಿ ಮೂರ್ತಿಯನ್ನು ಇಡಲಾಗುತ್ತದೆ. ರಥದ ಮುಖಮಂಟಪದಲ್ಲಿ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಅದರಗುಂಚಿ ಶಂಕರಗೌಡ್ರು, ಹುಯಿಲಗೋಳ ನಾರಾಯಣರಾಯರು, ಬಸರೀಗಿಡದ ವೀರಪ್ಪನವರು, ಪೈಲ್ವಾನ್ ರಮಜಾನ ಸಾಹೇಬ, ಜಯದೇವಿ ತಾಯಿ ಲಿಗಾಡೆ, ಭಾಲ್ಕಿ ಪಟ್ಟದ್ದೇವರು, ನಾಗನೂರು ಶ್ರೀಗಳ ಭಾವಚಿತ್ರಗಳಿವೆ.ಸುತ್ತಲೂ ಬುದ್ಧ-ಬಸವ-ಅಂಬೇಡ್ಕರ್ ಹಾಗೂ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಚಿತ್ರಗಳು, ಕನ್ನಡ ಮೂಲಾಕ್ಷರಗಳು, ಕನ್ನಡ ಸಂಖ್ಯೆಗಳು ಮತ್ತು ಕನ್ನಡ ನಾಣ್ಣುಡಿಗಳನ್ನು ಬರೆಯಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ವಿಧಾನಸೌಧ, ಕರ್ನಾಟಕ ವಿದ್ಯಾವರ್ಧಕ ಸಂಘ, ನರಗುಂದ ಕೆಂಪಗಸಿ, ಮಲಪ್ರಭಾ ಅಣೆಕಟ್ಟುಗಳ ಚಿತ್ರಗಳನ್ನು ಕಾಣಬಹುದಾಗಿದೆ. ರಥದ ಮೇಲ್ಭಾಗದಲ್ಲಿ ರಾಷ್ಟ್ರ ಧ್ವಜದ ಬಣ್ಣ ಹಾಗೂ ಅದರ ಕೆಳಗಡೆ ನಾಡ ಧ್ವಜವನ್ನು ಹೊದಿಸಲಾಗಿದೆ. ಮೇಲೆ ೧೫ ಇಂಚಿನ ಕಳಸ ಇರಿಸಲಾಗಿದೆ.
ಶ್ರೀಗಳ ಆಶಯದಂತೆ ರಥಶಿಲ್ಪಿ ಹೊಳೆಆಲೂರಿನ ಪಾಂಡುರಂಗ ಬಡಿಗೇರ ಕಲ್ಪನೆಯಲ್ಲಿ ಮೂಡಿಬಂದ ರಥ ಕೊಪ್ಪಳದ ಬಸೀರಸಾಬ ಹಾಗೂ ಗಾಡಗೋಳಿಯ ಶಿವಕುಮಾರ ಬಡಿಗೇರ, ರಾಜು ಬಡಿಗೇರ, ಸಂಜೀವ ಬಡಿಗೇರ ಇವರಿಂದ ನಿರ್ಮಿತವಾಗಿದೆ. ರೋಟ್ರ‍್ಯಾಕ್ಟ್ ಕನ್ನಡ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕ ಪಿ.ಸಿ. ಮೂಲಿಮನಿ ಇವರ ಕೈಚಳಕದಲ್ಲಿ ರಥದ ಹೊರಮೈ ವಿನ್ಯಾಸಗೊಂಡಿದೆ.ಲೋಕಾರ್ಪಣೆ: ನ. ೧ರಂದು ಕನ್ನಡ ರಥವನ್ನು ನಾಡಿನ ಹಿರಿಯ ಸಾಹಿತಿ ಶಾಂತಲಾ ಯಡ್ರಾವಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಉದ್ಘಾಟಕರಾಗಿ ಶಾಸಕ ಸಿ.ಸಿ. ಪಾಟೀಲ, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ತಹಸೀಲ್ದಾರ್ ಶ್ರೀಶೈಲ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ, ಬಿ.ಸಿ. ಹನಮಂತಗೌಡ್ರ, ಚೆನ್ನಪ್ಪ ಬೆಳವಣಕಿ ಭಾಗವಹಿಸಲಿದ್ದಾರೆ.
ನಾಡಿನಲ್ಲಿ ಪ್ರತಿ ವರ್ಷ ದೇವಾನುದೇವತೆಯರ ರಥೋತ್ಸವಗಳು ಜರುಗುತ್ತವೆ. ಆದರೆ ಕನ್ನಡ ರಥೋತ್ಸವ ಮಾಡಬೇಕು, ಇದರಿಂದ ನಾಡಿನ ಜನತೆಗೆ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವರ್ಷ ಗ್ರಾಮದಲ್ಲಿ ರಥೋತ್ಸವ ಮಾಡಲಾಗುವುದು ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಮಹಾಸ್ವಾಮಿಗಳು ಹೇಳಿದರು.