ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಅಡಗಿಕೊಂಡಿದ್ದ ಬಾಂಗ್ಲಾದೇಶಿಯರ ಬಂಧನ ಪ್ರಕರಣ ರಾಜ್ಯದ ಆಂತರಿಕ ಸುರಕ್ಷತೆ ಮತ್ತು ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆ ಎತ್ತುವಂತೆ ಮಾಡಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಆತಂಕ ವ್ಯಕ್ತಪಡಿಸಿದರು.

ಅವರು ಮಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಖಚಿತ ಮಾಹಿತಿಯ ಮೇರೆಗೆ 8 ಜನ ಬಾಂಗ್ಲಾದೇಶಿಯರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದು ಆಂತರಿಕ ಸುರಕ್ಷತೆಯ ಗಂಭೀರ ವಿಚಾರ. ದೇಶದೊಳಗೆ ನುಸುಳಿ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಕಾಂಟ್ರಾಕ್ಟರ್ ಮೂಲಕ ಪಶ್ಚಿಮ ಬಂಗಾಳದಿಂದ ಮಂಗಳೂರಿಗೆ ಬಂದಿದ್ದಾರೆ. 2011 ರಿಂದಲೂ ರಾಜ್ಯಕ್ಕೆ ಬಾಂಗ್ಲಾದೇಶಿಯರು ಬರುತ್ತಾರೆ ಎನ್ನುವ ಮಾಹಿತಿ ಇದೆ. ಹಿಂದೆ ಕೂಡ ರಾಜ್ಯದಲ್ಲಿ ಅಡಗಿರುವ ಬಾಂಗ್ಲಾದೇಶಿಯರನ್ನು ಪತ್ತೆ ಹಚ್ಚಿದ ಪ್ರಕರಣಗಳು ನಡೆದಿದೆ ಎಂದರು.

ಒಂದೆಡೆ ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ನಡೆಯುತ್ತಿದೆ. ಇನ್ನೊಂದೆಡೆ ರಾಜ್ಯ ಸರಕಾರ‌ ಪಿಆರ್‌ಸಿ ನೀಡಲು ಪ್ರಕ್ರಿಯೆ ಆರಂಭಿಸಿದ ಘೋಷಣೆ ಮಾಡಿದೆ. ಇದರ ನಡುವೆ ರಾಜ್ಯದಲ್ಲಿ ಬಾಂಗ್ಲಾದೇಶಿಯರು ಅಡಗಿರುವ ವಿಚಾರ ಅತ್ಯಂತ ಗಂಭೀರ ವಿಷಯ. ರಾಜ್ಯದಲ್ಲಿ ಈ ರೀತಿ ಎಷ್ಟು ಬಾಂಗ್ಲಾದೇಶಿಯರು ಅಡಗಿಕೊಂಡಿದ್ದಾರೆ ? ರಾಜ್ಯದ ಆಂತರಿಕ ಭದ್ರತೆಯ ಬಗ್ಗೆ ಪ್ರಶ್ನೆ ಮೂಡುತ್ತಿದೆ ? ಇವರು ಪಶ್ಚಿಮ ಬಂಗಾಳದ ಮೂಲಕ ಮಂಗಳೂರಿಗೆ ಬಂದು ಮೂರು ತಿಂಗಳಿಂದ ನೆಲೆಸಿದ್ದಾರೆ. ಇವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಯಾವುದೇ ರಾಜ್ಯದ ಏಜೆನ್ಸಿಗಳು ಪ್ರಯತ್ನಿಸಿಲ್ಲ, ರಾಜ್ಯದ ಗೃಹ ಸಚಿವರು ಕೇವಲ ಹೇಳಿಕೆಗಳನ್ನು ಕೊಡುವುದರಲ್ಲಿ ನಿರತರಾಗಿದ್ದಾರೆ. ರಾಜ್ಯದಲ್ಲಿ ನುಸುಳುಕೋರರು ಮಾತ್ರವಲ್ಲ ಡ್ರಗ್ಸ್, ಸೈಬರ್ ಕ್ರೈಮ್ ಇದ್ದರೂ, ಇದರ ಯಾವುದರ ಬಗ್ಗೆನು ಗೃಹ ಸಚಿವರು ಗಮನ ಕೊಡುತ್ತಿಲ್ಲ. ತನ್ನ ಕರ್ತವ್ಯ ಲೋಪ, ಜವಾಬ್ದಾರಿಯಿಂದ‌ ನುಣುಚಿಕೊಳ್ಳಲು ಬೇಕಾ ಬಿಟ್ಟಿ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು.

ಮಂಗಳೂರು ಅತ್ಯಂತ ಸೂಕ್ಷ್ಮ ಹಾಗೂ ಅತ್ಯಂತ ಪ್ರಮುಖ‌ ಸ್ಥಳ. ಇಂತಹ‌ ಪ್ರದೇಶದಲ್ಲಿ ಬಾಂಗ್ಲಾದೇಶಿಯರು ಅಡಗಿರುವುದು ಹಲವಾರು ಪ್ರಶ್ನೆಗಳನ್ನು ಎತ್ತುತ್ತದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೃದು ಧೋರಣೆ ತೋರುತ್ತಿದೆ. ಇಂಥವರ ವಿರುದ್ಧ ರಾಜ್ಯ ಸರ್ಕಾರ ಸ್ಪಷ್ಟ ಪಾಲಿಸಿ ತರಬೇಕು. ಅಕ್ರಮ ವಲಸೆ ಕುರಿತು ಸ್ಪಷ್ಟವಾದ ನೀತಿಯನ್ನು ರಾಜ್ಯ ಗೃಹ ಇಲಾಖೆ ರಚಿಸಬೇಕು ಎಂದು ಒತ್ತಾಯಿಸಿದರು.