ಸಾರಾಂಶ
ರಾಜ್ಯದಲ್ಲಿ ಮಳೆಯಿಂದ ಸಂಭವಿಸಿರುವ ನಷ್ಟ ಪರಿಹಾರಕ್ಕೆ ತಕ್ಷಣ 10 ಸಾವಿರ ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ತೆರಿಗೆ ಅನುದಾನದಲ್ಲಿ ರಾಜ್ಯದ ಪಾಲನ್ನು ನೀಡದೇ ಅನ್ಯಾಯ ಮಾಡಿರುವ ಕೇಂದ್ರ ಎನ್‌ಡಿಎ ಸರ್ಕಾರ ಈಗ ಪ್ರವಾಹ ಪರಿಹಾರವನ್ನು ನೀಡುವಲ್ಲಿಯೂ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ, ರಾಜ್ಯದಲ್ಲಿ ಮಳೆಯಿಂದ ಸಂಭವಿಸಿರುವ ನಷ್ಟ ಪರಿಹಾರಕ್ಕೆ ತಕ್ಷಣ 10 ಸಾವಿರ ಕೋಟಿ ರು.ಗಳನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆಗೆ ಉಡುಪಿಗೆ ಆಗಮಿಸಿರುವ ಕಾಂಗ್ರೆಸ್ ಸತ್ಯಶೋಧನಾ ಸಮಿತಿಯ ಅಧ್ಯಕ್ಷ ಉಗ್ರಪ್ಪ, ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಪ್ರವಾಹ ಉಂಟಾಗಿದೆ. ನೂರಾರು ಮನೆ, ಆಸ್ತಿ ಹಾನಿ, ಜಾನುವಾರು, ಸಾವು ನೋವುಗಳು ಉಂಟಾಗಿದೆ. ಆದರೆ ಪ್ರಧಾನಿ ಮೋದಿ ಅವರು ವೈಮಾನಿಕ ಸಮೀಕ್ಷೆಯನ್ನೂ ನಡೆಸಿಲ್ಲ, ವಿಕೋಪ ಪರಿಶೀಲನೆಗೆ ಒಂದು ತಂಡವನ್ನೂ ಕಳುಹಿಸದೇ ನಿರ್ಲಕ್ಷ್ಯ ತೋರುತಿದ್ದಾರೆ ಎಂದರು.ಈ ಸಂದರ್ಭ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಪಕ್ಷದ ಪ್ರಮುಖರಾದ ಅಜಯ್ ಕುಮಾರ್ ಸರ್ ನಾಯಕ್, ಸೈಯದ್ ಅಹಮ್ಮದ್, ಎಂ.ಎಸ್.ಮಹಮ್ಮದ್, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
------------ಶೀಘ್ರ ಜಿ.ಪಂ., ತಾ.ಪಂ. ಚುನಾವಣೆಜಿ.ಪಂ., ತಾ.ಪಂ., ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆ ಯಾವುದೇ ಹೊತ್ತಿನಲ್ಲಿ ಆಗಬಹುದು. ಪಕ್ಷದ ಎರಡನೇ ಹಂತದ ನಾಯಕತ್ವವನ್ನು ಬೆಳೆಸಲು ಈ ಚುನಾವಣೆಗಳು ವೇದಿಕೆಯಾಗಲಿದ್ದು, ಪಕ್ಷವನ್ನು ಸದೃಢಗೊಳಿಸಲು ಬೂತ್ ಮಟ್ಟದಿಂದ ಕಾರ್ಯಕರ್ತರ, ನಾಯಕರ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ಇದರ ಜೊತೆಗೆ ಲೋಕಸಭೆಯ ಸೋಲಿನ ಬಗ್ಗೆ ವಿಮರ್ಶೆ ಮಾಡಲು ಕ್ಷೇತ್ರಕ್ಕೆ ಆಗಮಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉಗ್ರಪ್ಪ ಉತ್ತರಿಸಿದರು.