ಸಾರಾಂಶ
ಬಿಜೆಪಿ- ಕಾಂಗ್ರೇಸ್ ಪಕ್ಷಗಳಿಗೆ ಜನ ಸಮಾನ್ಯರಿಗೆ ಬಗ್ಗೆ ಕಾಳಜಿ ಇದ್ದರೆ ಈ ಬೆಲೆ ಏರಿಕೆ ಹಿಂದಕ್ಕೆ ಪಡೆಯಲಿ.
ಕನ್ನಡಪ್ರಭ ವಾರ್ತೆ ಮೈಸೂರು
ಪೆಟ್ರೋಲ್, ಡೀಸಲ್, ಗ್ಯಾಸ್, ಟೋಲ್, ವಿದ್ಯುತ್ ದರ, ಹಾಲು ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಯನ್ನು ಖಂಡಿಸಿ ಸಿಪಿಎಂ ಜಿಲ್ಲಾ ಸಮಿತಿಯವರು ನಗರದ ರಾಮಸ್ವಾಮಿ ವೃತ್ತದಲ್ಲಿ ಭಾನುವಾರ ಸಂಜೆ ಪ್ರತಿಭಟಿಸಿದರು.ಈ ವೇಳೆ ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಮುಜೀಬ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿಗೆ ಬಿದ್ದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿವೆ. ಇದರಿಂದ ಜನತೆ ಅತೀವ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಬಿಜೆಪಿ- ಕಾಂಗ್ರೇಸ್ ಪಕ್ಷಗಳಿಗೆ ಜನ ಸಮಾನ್ಯರಿಗೆ ಬಗ್ಗೆ ಕಾಳಜಿ ಇದ್ದರೆ ಈ ಬೆಲೆ ಏರಿಕೆ ಹಿಂದಕ್ಕೆ ಪಡೆಯಲಿ. ಕೇಂದ್ರ ಸರ್ಕಾರ ರಾಜ್ಯಗಳಿಗೆ ನೀಡಬೇಕಾದ ನ್ಯಾಯೋಜಿತ ತೆರಿಗೆ ಪಾಲನ್ನು ನೀಡದೆ ಇರುವ ಕಾರಣ ಹೀಗಾಗುತ್ತಿದೆ. ಬಿಜೆಪಿ ರಾಜಕೀಯ ಸೇಡಿಗಾಗಿ ಪಾಲು ನೀಡುವಲ್ಲಿ ಅನ್ಯಾಯ ಮಾಡಬಾರದು ಎಂದು ಅವರು ಆಗ್ರಹಿಸಿದರು.ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ ಮಾತನಾಡಿ, ಕಾಂಗ್ರೆಸ್, ಬಿಜೆಪಿ ಬೆಲೆ ಏರಿಕೆ ವಿರುದ್ಧದ ಹೋರಾಟ ಮೋಸಳೆ ಕಣ್ಣೀರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಪಕ್ಷಗಳಿಗೆ ನಿಜ ಜನಪರ ಕಾಳಜಿ ಇದಿಯೇ? ಜನರು ಬೆಲೆ ಏರಿಕೆಯಿಂದ ತತ್ತಾರಿಸಿದ್ದಾರೆ. ಆಳುವ ಸರ್ಕಾರಗಳು ಬೆಲೆ ಏರಿಕೆ ಹಿಂಪಡೆಯಲಿ ಎಂದು ಒತ್ತಾಯಿಸಿದರು.
ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಚ್.ಎಸ್. ಸುನಂದಾ, ಮುಖಂಡರಾದ ಕೃಷ್ಣೇಗೌಡ, ಕೆ. ಬಸವರಾಜ್, ಜಿ. ಜಯರಾಂ, ಸುಬ್ರಹ್ಮಣ್ಯ, ಪೃಥ್ವಿ, ಕುಮಾರಿ, ಶಾಕುಂತಲ, ಲೀಲಾವತಿ, ಮಂಜುಳಾ, ಅಣ್ಣಪ್ಪ, ಮೆಹಬೂಬ್, ಬಾಲಾಜಿ ರಾವ್, ಕೃಷ್ಣ, ಚಂದ್ರಶೇಖರ್, ರಾಜೇಂದ್ರ ಮೊದಲಾದವರು ಇದ್ದರು.