ಸಾರಾಂಶ
ಮಧ್ಯವರ್ತಿಗಳ ಹಣದ ಆಮಿಷಕ್ಕೆ ತನ್ನನ್ನು ಸಮರ್ಪಿಸಿಕೊಂಡು ರೈತರನ್ನು ಸಂಕಷ್ಟಕ್ಕೆ ಇಡು ಮಾಡಿದೆ
ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಸಂತೆಮಾಳದಲ್ಲಿ ಸರ್ಕಾರ ಭತ್ತ ಖರೀದಿ ಕೇಂದ್ರ ತೆರಯುವಂತೆ ಆಗ್ರಹಿಸಿ ಗುರುವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರು ಮಳವಳ್ಳಿ ಮುಖ್ಯರಸ್ತೆಯನ್ನು ತಡೆದು, ರಸ್ತೆಗೆ ಭತ್ತವನ್ನು ಸುರಿದು, ರೈತರು ಪ್ರತಿಭಟಿಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜು ಮಾತನಾಡಿ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದು ಭತ್ತ ಖರೀದಿ ಮಾಡಬೇಕು ಮತ್ತು ಖರೀದಿ ಮಾಡಿದ ಸಂಜೆಯ ವೇಳೆಗೆ ರೈತರ ಖಾತೆಗೆ ಹಣ ಜಮಾ ಆಗಬೇಕು. ಇಲ್ಲವೇ ರೈತರಿಗೆ ನಷ್ಟ ಪರಿಹಾರ ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆಯದೆ ಕೇವಲ ನೋಂದಣಿ ಪ್ರಕ್ರಿಯೆಯಲ್ಲಿ ಕಾಲಹರಣ ಮಾಡುತ್ತಾ, ಬಂಡವಾಳ ಶಾಹಿಗಳ, ರೈಸ್ ಮಿಲ್ ಮಾಲೀಕರ, ಮಧ್ಯವರ್ತಿಗಳ ಹಣದ ಆಮಿಷಕ್ಕೆ ತನ್ನನ್ನು ಸಮರ್ಪಿಸಿಕೊಂಡು ರೈತರನ್ನು ಸಂಕಷ್ಟಕ್ಕೆ ಇಡು ಮಾಡಿದೆ ಎಂದು ಅವರು ತಿಳಿಸಿದರು.ಭತ್ತ ರಾಗಿ ಕಟಾವು ಆರಂಭವಾಗಿ ತಿಂಗಳೇ ಕಳೆದಿದ್ದು, ಸರ್ಕಾರವು ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ಸದುಪಯೋಗ ಪಡೆದುಕೊಂಡವರು ರೈತರ ಭತ್ತವನ್ನು ಕಣದಲ್ಲಿಯೇ ಕ್ವಿಂಟಾಲ್ ಗೆ 2 ಸಾವಿರದಿಂದ 2,100 ಗೆ ಖರೀದಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಬೆಂಬಲ ಬೆಲೆ 2,320 ಇದ್ದು, ಕೂಡಲೇ ಖರೀದಿ ಕೇಂದ್ರ ತೆರೆದು ರೈತರ ಭತ್ತವನ್ನು ಖರೀದಿ ಮಾಡಿ, ರೈತರ ಸಂಕಷ್ಟವನ್ನು ಪರಿಹರಿಸಿ ಎಂದು ತಿಳಿಸಿದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಉಪ ತಹಸೀಲ್ದಾರ್ ರೂಪಾ ಅವರಿಗೆ ಮನವಿ ಪತ್ರ ನೀಡಿ ಪ್ರತಿಭಟನೆ ಹಿಂಪಡೆದರು.
ನಾಗರಾಜು, ನೀಲಕಂಠಪ್ಪ, ಸೂರಿ, ಶಂಕರ್, ರವಿ, ಸಿದ್ದೇಶ್, ಪ್ರದೀಪ್, ಲೋಕೇಶ್, ಕುಳ್ಳೇಗೌಡ, ಸ್ವಾಮಿ, ಮಹೇಶ್, ಚೇತನ್, ಕರಿಯಪ್ಪ, ಕುಮಾರ್ ಸೇರಿದಂತೆ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.ಸಿಪಿಐ ಮನೋಜ್ ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.