ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸವನ್ನು ಕೈಗೊಳ್ಳಲಾಗಿದೆ ಎಂದು ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವನ್ನು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸುವ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸವನ್ನು ಕೈಗೊಳ್ಳಲಾಗಿದೆ ಎಂದು ಮಹಿಳಾ ನೌಕರರ ಸಂಘದ ರಾಜ್ಯಾಧ್ಯಕ್ಷೆ ರೋಶಿನಿ ಗೌಡ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು 2023ರಲ್ಲಿಯೇ ಸ್ಥಾಪನೆಗೊಂಡಿದೆ. ಈಗಾಗಲೇ 20 ಜಿಲ್ಲೆಗಳಲ್ಲಿ ಘಟಕಗಳ ಸ್ಥಾಪನೆಯಾಗಿದೆ. ಇನ್ನೂ 11 ಜಿಲ್ಲೆಗಳಲ್ಲಿ ಸ್ಥಾಪನೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ತಾವು ರಾಜ್ಯ ಪ್ರವಾಸ ಕೈಗೊಂಡಿದ್ದು, ಈಗ ಶಿವಮೊಗ್ಗ ಜಿಲ್ಲೆಗೆ ಬಂದಿದ್ದೇವೆ. ಜಿಲ್ಲೆಯ ಎಲ್ಲಾ ಸರ್ಕಾರಿ ಮಹಿಳಾ ನೌಕರರು ಸಂಘಕ್ಕೆ ಸೇರ್ಪಡೆಗೊಳ್ಳಬೇಕಾಗಿ ಮನವಿ ಮಾಡಿದರು.

ಸಂಘವು ಮಹಿಳಾ ನೌಕರರ ಸಬಲೀಕರಣ ನಾಯಕತ್ವ ಬೆಳವಣಿಗೆಗೆ ಕಾರ್ಯಕ್ಷೇತ್ರದಲ್ಲಿನ ಸಮಸ್ಯೆಗಳು, ನಿವಾರಣೆಯ ನಿಟ್ಟಿನಲ್ಲಿ ಹೊಸ ದೃಷ್ಟಿಕೋನ ಸರ್ಕಾರಿ ಮಹಿಳಾ ನೌಕರರ ಸರ್ವಾಂಗೀಣ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವುದೇ ಆಗಿದೆ. ಮಹಿಳಾ ನೌಕರರ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಆ ಇಲಾಖೆಗೊಳಡನೆ ಚರ್ಚಿಸಿ ನ್ಯಾಯ ಒದಗಿಸುವುದೇ ಆಗಿದೆ ಎಂದರು.

ಇದರ ಜೊತೆಗೆ ರಾಜ್ಯ ಸರ್ಕಾರಿ ನೌಕರರಿಗೆ ಬೇರೆಯವರಿಂದ ಯಾವುದೇ ತೊಂದರೆಯಾದರೆ ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ನೆರವು ನೀಡುವುದು, ವಿಚಾರ ಸಂಕಿರಣಗಳನ್ನು ಏರ್ಪಡಿಸುವುದು, ಹಕ್ಕು ಬಾಧ್ಯತೆಗಳ ಬಗ್ಗೆ ತಿಳುವಳಿಕೆ ನೀಡುವುದು, ಕೆಎಸ್‍ಆರ್‍ಪಿ ನಿಯಮಗಳ ಅರಿವನ್ನು ಮೂಡಿಸುವುದು ಮತ್ತು ಸರ್ಕಾರಿ ಮಹಿಳಾ ನೌಕರರ ಬ್ಯಾಂಕ್, ಸೊಸೈಟಿ ಹಾಗೂ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಆಗಿದೆ ಎಂದರು.

ಇದರ ಜೊತೆಗೆ ರಾಷ್ಟ್ರೀಯ ಹಬ್ಬಗಳ ಆಚರಣೆ, ಕಾಲಕಾಲಕ್ಕೆ ಮಹಿಳೆಯರ ಆರೋಗ್ಯ್ಯ ತಪಾಸಣೆ, ಆರೋಗ್ಯದ ಅರಿವು ಮೂಡಿಸುವುದು, ರಕ್ತದಾನ, ನೇತ್ರದಾನದ ಬಗ್ಗೆ ಮಾಹಿತಿ, ಸಾಂಸ್ಕೃತಿಕ ಕ್ರೀಡಾ ಮನೋಭಾವನೆ ಬೆಳೆಸುವುದೇ ಆಗಿದೆ. ಒಟ್ಟಾರೆ ಮಹಿಳೆಯರ ಸರ್ವಾಂಗೀಣ ಪ್ರಗತಿಗೆ ಸಂಘ ಕಂಕಣಬದ್ಧವಾಗಿದೆ ಎಂದರು.

ಇದುವರೆಗೂ ನಾವು ಸುಮಾರು 50 ಸಾವಿರ ಮಹಿಳಾ ನೌಕರರನ್ನು ಸದಸ್ಯರನ್ನಾಗಿಸಿದ್ದೇವೆ. ಅದರಲ್ಲಿ 10 ಸಾವಿರ ಮಹಿಳೆಯರು ಶುಲ್ಕ ಕಟ್ಟಿ ನೋಂದಣಿಮಾಡಿಸಿಕೊಂಡಿದ್ದಾರೆ. ನೋಂದಣಿ ಶುಲ್ಕವು ಕೇವಲ ರು.100 ಗಳಾಗಿರುತ್ತವೆ. ರಾಜ್ಯದಲ್ಲಿ ಸುಮಾರು 2.5 ಲಕ್ಷ ಮಹಿಳಾ ನೌಕರರಿದ್ದಾರೆ ಎಂದರು.

ಈಗಾಗಲೇ ರಾಜ್ಯ ಸರ್ಕಾರದ ನೆರವಿನಿಂದ ಬೆಂಗಳೂರಿನ ಕಬ್ಬನ್ ಉದ್ಯಾನವನದ ಬಾಲಭವನದ ಆವರಣದಲ್ಲಿ ಕೇಂದ್ರ ಕಚೇರಿ ಸ್ಥಾಪನೆಯಾಗಿದೆ. ಸರ್ಕಾರದ ಜೊತೆಗೆ ನಾವು ಸದಾ ಸಂಪರ್ಕದಲಿದ್ದೇವೆ. ಹಲವು ಬೇಡಿಕೆಗಳನ್ನು ಇಟ್ಟಿದ್ದೇವೆ. ಎನ್‍ಪಿಎಸ್ ಜಾರಿ ಹೋರಾಟ ಸೆ.13ನ್ನು ಮಹಿಳಾ ಸರ್ಕಾರಿ ನೌಕರರ ದಿನ ಎಂದು ಘೋಷಿಸಲಾಗಿದೆ. 8ನೇ ವೇತನ ಆಯೋಗದ ರಚನೆಗೆ ಒತ್ತಾಯಿಸಲಾಗಿದೆ. ಗರ್ಭಿಣಿ ನೌಕರರಿಗೂ ಕೂಡಾ ತಿಂಗಳಿಗೆ ಒಂದು ದಿನ ವೇತನ ಸಹಿತ ರಜೆ ನೀಡಲು ಮನವಿ ಮಾಡಲಾಗಿದೆ. ಮಾತೃತ್ವ ರಜೆಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮಹಿಳಾ ಅಧಿಕಾರಿಗಳಿಗೆ ಮಹಿಳಾ ಚಾಲಕಿಯರನ್ನೇ ನೇಮಿಸುವಂತೆ ಒತ್ತಾಯಿಸಿದ್ದೇವೆ ಎಂದರು.

ಈಗಾಗಲೇ ರಾಜ್ಯ ಮಟ್ಟದಲ್ಲಿ ಸರ್ಕಾರಿ ನೌಕರರ ಸಂಘಟನೆ ಇದೆ. ಮಹಿಳಾ ಸಂಘಟನೆ ಎಂಬ ಪ್ರತ್ಯೇಕತೆ ಬೇಕಿತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಸರ್ಕಾರಿ ನೌಕರರ ಈಗಿರುವ ರಾಜ್ಯ ಸಂಘದ ವಿರುದ್ಧವೂ ಅಲ್ಲ, ಪರ್ಯಾಯವೂ ಅಲ್ಲ, ಅಥವಾ ಯಾವುದೇ ಸಂಘಟನೆಯ ವಿರುದ್ಧವೂ ಅಲ್ಲ, ನಾವೆಲ್ಲರೂ ಅಲ್ಲಿಯೂ ಸದಸ್ಯರಾಗಿದ್ದೇವೆ. ಆದರೆ ಮಹಿಳೆಯರ ಅನೇಕ ಸೂಕ್ಷ್ಮ ಸಮಸ್ಯೆಗಳನ್ನು ನಾವು ಹೇಳಿಕೊಳ್ಳಲು ಅನೇಕ ಕಡೆ ಹೇಳಲಾಗುವುದಿಲ್ಲ. ಹಾಗಾಗಿ ಈ ಸಂಘದ ರಚನೆ ಅನಿವಾರ್ಯವಾಗಿತ್ತು. ಮುಖ್ಯ ಸಂಘದ ಬೈಲಾದಲ್ಲಿ ನಮ್ಮ ಸಮಸ್ಯೆಗಳ ಬಗ್ಗೆ ಸೇರಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದ್ದದ್ದರಿಂದ ಇದನ್ನು ಸ್ಥಾಪಿಸಿದ್ದೇವೆ. ಮಹಿಳಾ ಸಂಘಟನೆ ಎಲ್ಲ ಕಡೆಗಳಲ್ಲೂ ಇರುತ್ತದೆ. ಹಾಗೆಯೇ ನಮ್ಮಲ್ಲೂ ಇದೆ. ನಮ್ಮಲ್ಲಿ ವಿಶೇಷತೆ ಏನಿಲ್ಲ. ಈಗಿರುವ ರಾಜ್ಯ ಸಂಘಟನೆಯೊಡನೆ ನಮ್ಮ ಬಾಂಧವ್ಯ ಯಾವಾಗಲೂ ಇರುತ್ತದೆ ಎಂದರು.

ಗೋಷ್ಠಿಯಲ್ಲಿ ಖಜಾಂಚಿ ಡಾ.ವೀಣಾ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ಆಶಾ ರಾಣಿ ಇದ್ದರು.