ಪಂಚಾಯಿತಿಗಳನ್ನು ಬಲವರ್ಧನೆ ಮಾಡುವ ಪ್ರಯತ್ನಕ್ಕೆ ಹೊಸ ವಿಬಿಜಿ ರಾಮ್ ಜಿ ಯೋಜನೆ ಮಾರಕವಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಗದಗ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾನೂನನ್ನೇ ರದ್ದುಪಡಿಸಿ ವಿಬಿಜಿ ರಾಮ್ ಜಿ ಎಂದು ಹೊಸ ಯೋಜನೆ ಜಾರಿಗೊಳಿಸಿ ಕೃಷಿ ಕಾರ್ಮಿಕರಿಗೆ, ಸಣ್ಣ ಅತಿ ಸಣ್ಣ ರೈತರಿಗೆ ಕೆಲಸ ನೀಡುವ ಯೋಜನೆಯ ಹಕ್ಕನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಹೀಗಾಗಿ ನರೇಗಾ ಉಳಿವಿಗಾಗಿ ರಾಜ್ಯಾದ್ಯಂತ ಆಂದೋಲನ ನಡೆಸಲಾಗುವುದು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಮನರೇಗಾ ಯೋಜನೆ ಮರುಸ್ಥಾಪಿಸಲು ಆಗ್ರಹಿಸಲಾಗುವುದು ಎಂದರು.

ಮನರೇಗಾ ಯೋಜನೆಯಲ್ಲಿ ಗ್ರಾಮಸಭೆಗೆ ಅಧಿಕಾರ ನೀಡಲಾಗಿತ್ತು. ಗ್ರಾಮಸಭೆ ನಿರ್ಣಯಿಸಿದ ಕಾಮಗಾರಿಗಳನ್ನು ಮನರೇಗಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗಿತ್ತು. ಮನರೇಗಾ ಯೋಜನೆಯಲ್ಲಿ ಹೊಲ ಬದು, ಶೌಚಾಲಯ ನಿರ್ಮಾಣ, ಕೆರೆ ಹೂಳು ತೆಗೆಯುವುದು, ಕೆರೆ ನಿರ್ಮಾಣ, ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ 21 ಅಂಶಗಳನ್ನು ಒಳಪಡಿಸಲಾಗಿದೆ. ಆದರೆ ಈ ಗ್ರಾಮಸಭೆಯ ಅಧಿಕಾರವನ್ನು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂದರು.

ಪಂಚಾಯಿತಿಗಳನ್ನು ಬಲವರ್ಧನೆ ಮಾಡುವ ಪ್ರಯತ್ನಕ್ಕೆ ಹೊಸ ವಿಬಿಜಿ ರಾಮ್ ಜಿ ಯೋಜನೆ ಮಾರಕವಾಗಿದೆ. ಆಡಳಿತ ವಿಕೇಂದ್ರೀಕರಣದ ವಿರುದ್ಧ ಈ ಹೊಸ ಯೋಜನೆ ಆಗಿದೆ. ಹೊಸ ಯೋಜನೆಯಲ್ಲಿ ಗ್ರಾಮಸಭೆ ಅಧಿಕಾರ ಕಿತ್ತುಕೊಂಡು ದೆಹಲಿಯಲ್ಲಿ ಅಧಿಕಾರ ಇಟ್ಟುಕೊಂಡಿದ್ದಾರೆ. ಕೇಂದ್ರದ ಸಮಿತಿಯು ಗ್ರಾಮಗಳ ಕಾಮಗಾರಿಗಳನ್ನು ನಿರ್ಣಯಿಸುವ ವಿಚಾರಗಳು ಹೊಸ ಯೋಜನೆಯಲ್ಲಿದೆ. ಗ್ರಾಮ ಸ್ವರಾಜ್ಯ ಮತ್ತು ವಿಕೇಂದ್ರೀಕರಣ ಆಡಳಿತ ವ್ಯವಸ್ಥೆ ಹತ್ಯೆಯಾಗಿದೆ ಎಂದರು.

ಭವಿಷ್ಯದಲ್ಲಿ ಗ್ರಾಮ ಪಂಚಾಯಿತಿಗಳು ಯೋಜನೆಗಳನ್ನು ನಿರ್ಣಯಿಸುವಂತಿಲ್ಲ. ವಿಕಸಿತ ಭಾರತ ಯೋಜನೆಯಡಿ ನಡೆಯುವ ಗುತ್ತಿಗೆದಾರ ಅಡಿಯಲ್ಲಿ ರೈತ ಕಾರ್ಮಿಕರು ಕೆಲಸ ಮಾಡುವಂತೆ ಹೊಸ ಯೋಜನೆ ಜಾರಿ ಆಗಿದೆ. ನರೇಗಾ ಯೋಜನೆಯಲ್ಲಿ ಉದ್ಯೋಗ, ನಿರುದ್ಯೋಗಿಗಳಿಗೆ ಭತ್ಯೆ, ಗ್ರಾಮೀಣ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಕೆಲಸ ನೀಡುವ ಸೇರಿದಂತೆ ಹಲವು ವಿಷಯಗಳು ಇದ್ದವು. ಹೊಸ ವಿಬಿಜಿ ರಾಮ್ ಜೀ ಯೋಜನೆಗಳಲ್ಲಿ ಇಂತಹ ಪ್ರಾದೇಶಿಕ ವಿಷಯಗಳನ್ನು ಕೈಬಿಡಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಮನರೇಗಾ ಯೋಜನೆ ಹೆಸರು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರ ದುಷ್ಟ ಕೆಲಸ ಮಾಡಿದೆ. ಕಾಂಗ್ರೆಸ್ ನೇತೃತ್ವದ ನಮ್ಮ ಸರ್ಕಾರ ಅಧಿಕಾರದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಹೆಸರಲ್ಲಿ ಈ ಯೋಜನೆ ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರ ಯೋಜನೆ ಹೆಸರು ತಿದ್ದುಪಡಿ ಮಾಡಿ ಮಹಾತ್ಮ ಗಾಂಧಿ ಹೆಸರನ್ನು ತೆಗೆಯಲಾಗಿದೆ. ಈ ತಿದ್ದುಪಡಿ ಯೋಜನೆಯಲ್ಲಿ ಬಡಜನರಿಗೆ ಅನ್ಯಾಯ ಆಗುವ ಅಂಶಗಳನ್ನು ಸೇರಿಸಲಾಗಿದೆ. ಈ ಹಿನ್ನೆಲೆ ಮನರೇಗಾ ಯೋಜನೆ ಬಚಾವೋ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ. ಬಡ ಜನರ ಉದ್ಯೋಗ ಕಸಿದುಕೊಳ್ಳುವ ಮನರೇಗಾ ತಿದ್ದುಪಡಿ ಯೋಜನೆಗೆ ಕಾಂಗ್ರೆಸ್ ವಿರೋಧವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಸುಜಾತಾ ದೊಡ್ಡಮನಿ, ಹುಮಾಯನ್ ಮಾಗಡಿ, ದಶರಥ ಗಾಣಿಗೇರ, ಅಶೋಕ ಮಂದಾಲಿ, ಸೋಮನಕಟ್ಟಿಮಠ, ವಿದ್ಯಾದರ ದೊಡ್ಡಮನಿ, ವಿವೇಕ ಯಾವಗಲ್ಲ ಮುಂತಾದವರು ಇದ್ದರು.