ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು/ ಚಳ್ಳಕೆರೆ
ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳನ್ನೂ ಗೆಲ್ಲಲು ಒಂದೇ ತಾಯಿಯ ಮಕ್ಕಳಂತೆ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.ನಗರದ ತಾಹಾ ಪ್ಯಾಲೇಸ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಮನ್ವಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ರಾಜ್ಯದ ಉದ್ದಗಲಕ್ಕೂ ಬಿಜೆಪಿ ಮತ್ತು ಜೆಡಿಎಸ್ ಗಾಳಿ ಬೀಸುತ್ತಿದೆ. ನೀರಾವರಿ ಸಚಿವರಾಗಿದ್ದಾಗ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿರುವ ಧೀಮಂತ ನಾಯಕ ಗೋವಿಂದ ಕಾರಜೋಳರವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಈ ಚುನಾವಣೆಯಲ್ಲಿ ನಡೆಯುವುದಿಲ್ಲ. ಪ್ರಧಾನಿ ಅಭ್ಯರ್ಥಿ ಹೆಸರು ಹೇಳಲು ಸಾಧ್ಯವಿಲ್ಲದಂತಹ ಅಸಹಾಯಕ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ವಾಸ್ತವವಾಗಿ ದಿವಾಳಿಯಾಗಿದೆ.ರಾಜ್ಯದ ಮೂಲೆ ಮೂಲೆಗಳಿಗೆ ನಾನು ಪ್ರವಾಸ ಮಾಡಿದ್ದು ಮತದಾರರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಹುದ್ದೆ ಅಲಂಕರಿಸಬೇಕು ಎಂಬುದು ದೇಶದ ಬಹುಪಾಲು ಮತದಾರರ ಮನಸ್ಸಿನಲ್ಲಿದೆ. ಹೀಗಾಗಿ 28 ಕ್ಷೇತ್ರದಲ್ಲೂ ಮೈತ್ರಿ ಪಕ್ಷಗಳ ಗೆಲುವು ಖಚಿತ. ಎಂದರಲ್ಲದೆ, ತಾಲೂಕಿನ ಜವನಗೊಂಡನಹಳ್ಳಿ ಭಾಗದ ನೀರಿನ ಸಮಸ್ಯೆ ಪರಿಹರಿಸಲು ಬಿಜೆಪಿ ಬದ್ಧವಾಗಿದೆ ಎಂದೂ ಇದೇ ವೇಳೆ ಹೇಳಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 80 ಕೋಟಿ ಜನರಿಗೆ ಅಕ್ಕಿ ಕೊಡಲಾಗುತ್ತಿದೆ. ಒಂದು ಕಾಳು ಅಕ್ಕಿ ಕೊಡಲಾಗದ ಕಾಂಗ್ರೆಸ್ ನವರು ಅನ್ನಭಾಗ್ಯ ಹೆಸರಿನಲ್ಲಿ ಪ್ರಚಾರ ಪಡೆಯುತ್ತಿದ್ದಾರೆ. ಮೋದಿ ವಿಶ್ವ ನಾಯಕ ಎಂಬುದಕ್ಕೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆದ ಯುದ್ಧದಲ್ಲಿ ಅವರೊಂದಿಗೆ ಮಾತನಾಡಿ, ಅಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತಂದುದೇ ಸಾಕ್ಷಿ. ಇನ್ನು, ಫಸಲ್ ಭೀಮಾ ಯೋಜನೆ ಜಾರಿಗೆ ತರುವ ಮೂಲಕ ರೈತರ ಬದುಕಿಗೆ ದಾರಿದೀಪವಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿಯಿಂದ ಕಾಂಗ್ರೆಸ್ ಮುಖಂಡರು ಕಂಗಾಲಾಗಿದ್ದು ಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಭೈರತಿ ಬಸವರಾಜ್ ಮಾತನಾಡಿ, ರಾಜ್ಯದಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿಗೆ ಬರ ಬಂದಿರುವ ಜೊತೆಗೆ ರಾಜ್ಯದ ಆರ್ಥಿಕ ಸ್ಥಿತಿಗೂ ಬರ ಬಂದಿದೆ. ಮೋದಿ ಯವರ ಸಾಧನೆ ಜನಪ್ರಿಯತೆ ಮುಂದೆ ಕಾಂಗ್ರೆಸ್ ಮoಕಾಗಿದ್ದು, ಮೋದಿಯವರು ಪ್ರಧಾನಿಯಾಗುವುದನ್ನು ಯಾರಿಂದಲೂ ತಡೆಯಲಾ ಗುವುದಿಲ್ಲ ಎಂದರು.
ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷವೇ ನಿಜವಾದ ಕೋಮುವಾದಿ ಪಕ್ಷ. ಬಿಜೆಪಿ ಎಂದಿಗೂ ಕೋಮುವಾದಿಯಲ್ಲ. ಅದು ರಾಷ್ಟ್ರವಾದಿ ಪಕ್ಷ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಚಳ್ಳ ಕೆರೆ, ಹಿರಿಯೂರು ತಾಲೂಕಿನಲ್ಲಿ ಪ್ರವಾಸ ಕೈಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರ ಗೆಲುವು ನಿಶ್ಚಿತ. ಬಳ್ಳಾರಿಯಲ್ಲಿ ಸ್ನೇಹಿತ ಶ್ರೀರಾಮುಲು ಅವರು 2 ಲಕ್ಷಕ್ಕೂ ಅಧಿಕ ಮತಗಳಿಂದ ವಿಜಯ ಪತಾಕೆ ಹಾರಿಸಲಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್, ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ. ಯಶೋಧರ, ಮುಖಂಡರಾದ ಎಂ.ರವೀಂದ್ರಪ್ಪ, ಎಸ್. ಲಿಂಗಮೂರ್ತಿ, ಎನ್.ಆರ್.ಲಕ್ಷ್ಮೀಕಾಂತ್, ಸಿದ್ಧಾರ್ಥ್ ತಿಪ್ಪಾರೆಡ್ಡಿ, ಶಂಕರಮೂರ್ತಿ, ಜಗದೀಶ್, ಶಿವಪ್ರಸಾದ್ ಗೌಡ, ಹನುಮಂತರಾಯಪ್ಪ ಮುಂತಾದವರು ಹಾಜರಿದ್ದರು.
ಮೈಸೂರು ಸಮಾವೇಶದಲ್ಲಿ ಶ್ರೀನಿವಾಸ್ ಪ್ರಸಾದ್ ಭಾಗಿಚಳ್ಳಕೆರೆ: ಮೈಸೂರಿನಲ್ಲಿ ಭಾನುವಾರ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ಸಭೆಗೆ ಶ್ರೀನಿವಾಸ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.ಚಳ್ಳಕೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಶ್ರೀನಿವಾಸ್ ಪ್ರಸಾದ್ ರನ್ನು ಭೇಟಿ ಮಾಡುತ್ತೇನೆ. ಎಲ್ಲರನ್ನೂ ಒಟ್ಟಾಗಿ ಕರೆದು ಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಮೈಸೂರು ಭಾಗದಲ್ಲಿ ಶ್ರೀನಿವಾಸ ಪ್ರಸಾದ್ ದೊಡ್ಡ ಶಕ್ತಿ. ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಭಾಗಿಯಾಗುತ್ತಾರೆ. ಜೆಡಿಎಸ್ ಪಕ್ಷದ ಜತೆಗಿನ ಮೈತ್ರಿಯಿಂದ ದೊಡ್ಡ ಶಕ್ತಿ ಬಂದಂತಾಗಿದೆ ಎಂದರು.ವೀರಶೈವರ ಅಭ್ಯುದಯಕ್ಕೆ ಸದಾ ಸಹಕಾರಚಳ್ಳಕೆರೆ: ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಎಲ್ಲಾ ರೀತಿಯ ಪರಿಶ್ರಮವನ್ನು ಕಾರ್ಯಕರ್ತರು ವಹಿಸಬೇಕಿದೆ. ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಪಕ್ಷ ಕಂಗೆಟ್ಟಿದೆ. ಕಾರ್ಯಕರ್ತರ ಪರಿಶ್ರಮದಿಂದ ಗೆಲುವು ಸಾಧಿಸಬಹುದು. ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರನೂ ನಾನೇ ಅಭ್ಯರ್ಥಿ ಎಂದು ಭಾವಿಸಿ ಮನೆ, ಮನೆಗೂ ತೆರಳಿ ಮತದಾರರನ್ನು ಬಿಜೆಪಿಗೆ ಮತ ನೀಡುವಂತೆ ವಿನಂತಿಸಬೇಕು. ಬಿಜೆಪಿಯ ಚುನಾವಣೆಯ ಗೆಲುವಿನಲ್ಲಿ ಕಾರ್ಯಕರ್ತರ ಕೊಡುಗೆ ಅಪಾರವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.ಅವರು, ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠರವರ ನಿವಾಸದಲ್ಲಿ ವೀರಶೈವ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಳೆದ ಹಲವಾರು ವರ್ಷಗಳಿಂದ ವೀರಶೈವ ಸಮಾಜ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ವೀರಶೈವ ಸಮಾಜದ ಮುಖಂಡರು ನಾನು ಭರವಸೆ ನೀಡುತ್ತೇನೆ. ಬಿಜೆಪಿ ಸದಾಕಾಲ ನಿಮ್ಮೊಂದಿಗೆ ಇದ್ದು ನಿಮ್ಮ ಅಭ್ಯುದಯಕ್ಕಾಗಿ ಹೋರಾಟ ನಡೆಸಲಿದೆ ಎಂದರು. ಇದೇ ಸಂದರ್ಭದಲ್ಲಿ ವೀರಶೈವ ಮುಖಂಡರಿಂದ ಯಡಿಯೂರಪ್ಪನವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಜಿ.ಬಸವರಾಜ ಮಂಡಿಮಠ, ಸೋಮಶೇಖರ ಮಂಡಿಮಠ, ಕೆ.ಎಂ.ಯತೀಶ್, ಬಿ.ಎಸ್.ಶಿವಪುತ್ರಪ್ಪ, ಡಾ.ಕೆ.ಎಂ.ಜಯಕುಮಾರ್, ಜಯಪ್ರಕಾಶ್, ಆರ್.ನಾಗೇಶ್, ಮಾತೃಶ್ರೀ ಎನ್.ಮಂಜುನಾಥ, ಪ್ರಸನ್ನಕುಮಾರ್, ಸತೀಶ್‌ಮಂಡಿಮಠ, ಬಾಳೆಮಂಡಿರಾಮದಾಸ್, ಆದಿಭಾಸ್ಕರಶೆಟ್ಟಿ, ಕುಮಾರಸ್ವಾಮಿ, ಭರತೇಶ್‌ರೆಡ್ಡಿ, ಗಂಗಾಧರ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.