ಸಾರಾಂಶ
ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ.
ಕನ್ನಡಪ್ರಭ ವಾರ್ತೆ, ಬೆಂಗಳೂರು
ಶಿಗ್ಗಾಂವಿ, ಚನ್ನಪಟ್ಟಣ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದೆ. ಎಲ್ಲೆಡೆ ಸಿಹಿ ಹಂಚಿ, ಪಟಾಕಿ ಸಿಡಿಸಿ, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಕಾಂಗ್ರೆಸ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೂಗಿದರು.ಚನ್ನಪಟ್ಟಣದಲ್ಲಿ ಸಂಭ್ರಮಾಚರಣೆ ಎಲ್ಲೆ ಮೇರಿತ್ತು. ಅಭಿಮಾನಿಗಳು ಯೋಗೇಶ್ವರ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು. ಮಹಿಳೆಯರು ಆರತಿ ಬೆಳಗಿದರೆ, ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಸಾತನೂರು ವೃತ್ತದಲ್ಲಿ ಹಾಲಿನ ಅಭಿಷೇಕ ಮಾಡಿ ಅಭಿಮಾನ ಮೆರೆದರು. ಜಾಲಿ ಜಾಲಿ... ಯೋಗೇಶ್ವರ್ ಜಾಲಿ..., ಖಾಲಿ ಖಾಲಿ ... ನಿಖಿಲ್ ಕುಮಾರಸ್ವಾಮಿ ಖಾಲಿ... ಎಂದು ಘೋಷಣೆ ಕೂಗಿ ಕಾರ್ಯಕರ್ತರು ಸಂಭ್ರಮಿಸಿದರು. ಚನ್ನಪಟ್ಟಣದಲ್ಲಿ ಫಲಿತಾಂಶ ಘೋಷಣೆಗೂ ಮುನ್ನವೇ ವಿಜಯೋತ್ಸವ ವಾಹನ ಸಿದ್ಧವಾಗಿತ್ತು.
ಶಿಗ್ಗಾಂವಿ, ಸಂಡೂರಿನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿತ್ತು. ಬೆಂಗಳೂರಿನಲ್ಲಿ ಕೆಪಿಸಿಸಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಚಾಮರಾಜನಗರದಲ್ಲಿ ಭುವನೇಶ್ವರಿ ವೃತ್ತ, ಶೃಂಗೇರಿಯಲ್ಲಿ ಕೆವಿಆರ್ ವೃತ್ತ, ರಾಯಚೂರಿನ ಲಿಂಗಸುಗೂರಿನಲ್ಲಿ ಪಟ್ಟಣದ ಗಡಿಯಾರ ವೃತ್ತ, ತರೀಕೆರೆಯಲ್ಲಿ ಪುರಸಭೆ ಎದುರು ಸಂಭ್ರಮಾಚರಣೆಗಳು ನಡೆದವು. ಚಿಕ್ಕಮಗಳೂರಿನಲ್ಲಿ ತಾಲೂಕು ಕಚೇರಿಯಿಂದ ಹನುಮಂತಪ್ಪ ವೃತ್ತದವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.ಇದೇ ವೇಳೆ, ಮೈಸೂರು, ಮಂಡ್ಯ, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಕಲಬುರಗಿ ಸೇರಿ ರಾಜ್ಯದ ಇತರೆಡೆಯೂ ಸಂಭ್ರಮಾಚರಣೆಗಳು ನಡೆದವು.