ಏ.೨೬ಕ್ಕೆ ರಾಜ್ಯಾದ್ಯಂತ ಈಡುಗಾಯಿ ಚಳವಳಿ: ವಾಟಾಳ್ ನಾಗರಾಜ್

| Published : Apr 19 2025, 12:38 AM IST

ಏ.೨೬ಕ್ಕೆ ರಾಜ್ಯಾದ್ಯಂತ ಈಡುಗಾಯಿ ಚಳವಳಿ: ವಾಟಾಳ್ ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಏಕೀಕರಣಗೊಂಡು ಇಷ್ಟು ವರ್ಷವಾದರೂ ಕನ್ನಡಿಗರಿಗೆ ಉದ್ಯೋಗ ನೀಡಲು ಒಂದು ನೀತಿಯನ್ನು ರೂಪಿಸಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವ ತಾಕತ್ತಿಲ್ಲ. ಸರೋಜಿನಿ ಮಹಿಷಿ ವರದಿ ಮಾಡುವ ಧೈರ್ಯವಿಲ್ಲ. ಪರಭಾಷಿಗರ ದಬ್ಬಾಳಿಕೆ ಹೆಚ್ಚಾಗಿದೆ. ಪರಭಾಷಾ ಚಿತ್ರಗಳನ್ನು ನಿಷೇಧಿಸಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡಿಗರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಏ.೨೬ರಂದು ರಾಜ್ಯಾದ್ಯಂತ ಈಡುಗಾಯಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಈ ಚಳವಳಿಗೆ ಯಾರ ಬೆಂಬಲವೂ ಬೇಕಿಲ್ಲ. ಯಾರು ಎಲ್ಲಿ ಬೇಕಾದರೂ ಈಡುಗಾಯಿ ಒಡೆಯಬಹುದು. ನಾನು ಅಧಿಕೃತವಾಗಿ ಬೆಂಗಳೂರಿನಲ್ಲಿ ಈಡುಗಾಯಿ ಒಡೆದು ಆನಂತರ ಮಂಡ್ಯದಲ್ಲಿ ನಡೆಯುವ ಚಳವಳಿಯಿಲ್ಲಿ ಭಾಗವಹಿಸುತ್ತೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ಏಕೀಕರಣಗೊಂಡು ಇಷ್ಟು ವರ್ಷವಾದರೂ ಕನ್ನಡಿಗರಿಗೆ ಉದ್ಯೋಗ ನೀಡಲು ಒಂದು ನೀತಿಯನ್ನು ರೂಪಿಸಲು ಯಾವುದೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವ ತಾಕತ್ತಿಲ್ಲ. ಸರೋಜಿನಿ ಮಹಿಷಿ ವರದಿ ಮಾಡುವ ಧೈರ್ಯವಿಲ್ಲ. ಪರಭಾಷಿಗರ ದಬ್ಬಾಳಿಕೆ ಹೆಚ್ಚಾಗಿದೆ. ಪರಭಾಷಾ ಚಿತ್ರಗಳನ್ನು ನಿಷೇಧಿಸಬೇಕಿದೆ. ಇವೆಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆದರೂ ಪ್ರಯೋಜನ ಆಗಿಲ್ಲ. ಎಂಇಎಸ್ ರಾಜ್ಯದ ಗಡಿನಾಡಿಗೆ ಮಾರಕ. ಎಂಇಎಸ್ ನಿಷೇಧಕ್ಕೆ ಹಲವು ವರ್ಷಗಳಿಂದ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಹೋರಾಟ ಮಾಡುತ್ತಿವೆ. ಕನ್ನಡ ಭಾಷೆ, ನಾಡು ಉಳಿವಿನ ಬಗ್ಗೆ ಸಂಘಟನೆಗಳಿಗಿರುವ ಬದ್ಧತೆ ಸರ್ಕಾರಗಳಿಗಿಲ್ಲ ಎಂದು ಗುಡುಗಿದರು.

ಕಳಸಬಂಡೂರಿ, ಮೇಕೆದಾಟು ಜಾರಿಯಾಗಿಲ್ಲ, ರಾಜ್ಯದಲ್ಲಿ ಪರಭಾಷಿಕರ ಹಾವಳಿ ಎಲ್ಲೆಡೆ ಹೆಚ್ಚಾಗಿದೆ. ಪರಭಾಷಿಕರಿಂದ ಅಪರಾಧ ಕೃತ್ಯಗಳೂ ಹೆಚ್ಚಾಗಿವೆ. ಕನ್ನಡಿಗರಿಗೆ ಉದ್ಯೋಗದ ಬಗ್ಗೆ ಕ್ರಮ ಕೈಗೊಂಡಿಲ್ಲ, ಅದಕ್ಕೆ ಪೂರಕವಾದ ಸರೋಜಿನಿಮಹಿಷಿ ವರದಿ ಜಾರಿಯಾಗಿಲ್ಲ. ಐಟಿಬಿಟಿ ಮಸೂದೆ ಜಾರಿಯಾಗಿಲ್ಲ. ಇವುಗಳ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.ಗೋಷ್ಠಿಯಲ್ಲಿ ಎಚ್.ಸಿ.ಮಂಜುನಾಥ್, ಪಾರ್ಥಸಾರಥಿ, ಬೆಟ್ಟಹಳ್ಳಿ ಮಂಜುನಾಥ್ ಇತರರಿದ್ದರು.ನಾನು ಎಂದೂ ಜಾತಿ ಬಗ್ಗೆ ಮಾತನಾಡಿಲ್ಲ

ನಾನು ಇವತ್ತಿನವರೆಗೂ ಜಾತಿ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಅದನ್ನು ಸರ್ಕಾರ ಏಕೆ ಮಾಡಿದೆಯೋ ಗೊತ್ತಿಲ್ಲ. ರಾಜ್ಯ ಉದಯವಾಗಿದ್ದು ಭಾಷೆ ಮೇಲೆಯೇ ವಿನಃ ಜಾತಿಯಿಂದಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.

ಭಾಷೆ ಮೇಲೆ ಕರ್ನಾಟಕದ ಉದಯವಾಯಿತು. ಕುವೆಂಪು ಅವರು ಮೈಸೂರಿನಲ್ಲಿ ಸಮಗ್ರ ಕರ್ನಾಟಕ ಆಗಬೇಕು ಎಂದಿದ್ದರು. ಆದರೆ, ಇವತ್ತು ಜಾತಿಯ ಕರ್ನಾಟಕ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಸವಣ್ಣ, ಕನಕದಾಸರ ಸಂದೇಶಗಳನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಪಕ್ಷ ಅಲ್ಲ, ಎಲ್ಲಾ ಪಕ್ಷಗಳು ಜಾತಿಯ ಹಿಂದೆ ಬಿದ್ದಿವೆ. ಮುಂದೆ ರಾಜ್ಯದಲ್ಲಿ ಏನಾಗುತ್ತೋ ಗೊತ್ತಿಲ್ಲ. ಮುಂದೆ ಬರುವವರು ಯಾವ ಯಾವ ಆಧಾರದಲ್ಲಿ ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ ಎಂದು ಆತಂಕದಿಂದ ನುಡಿದರು.ಸದನಗಳ ಗಾಂಭೀರ್ಯ ಹಾಳು

ರಾಜ್ಯದ ಅಭಿವೃದ್ಧಿ, ನಾಡು-ನುಡಿ, ಕನ್ನಡಿಗರ ಏಳ್ಗೆಯ ಕುರಿತು ಚರ್ಚೆಯಾಗಬೇಕಿದ್ದ ಸದನಗಳಲ್ಲಿ ಹನಿಟ್ರ್ಯಾಪ್ ವಿಷಯ ಚರ್ಚೆಯಾಗುತ್ತಿದೆ. ಇದರಿಂದ ವಿಧಾನಸಭೆ, ವಿಧಾನ ಪರಿಷತ್ತು ಗಾಂಭೀರ್ಯ ಕಳೆದುಕೊಳ್ಳುತ್ತಿವೆ ಎಂದು ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ಶಾಸನಸಭೆಗಳಿಗೆ ಉತ್ತಮರು, ಅರ್ಹರು ಆರಿಸಿ ಬರುತ್ತಿಲ್ಲ. ಎಲ್ಲರೂ ದುಡ್ಡಿನ ಮೇಲೆ ಅಧಿಕಾರಕ್ಕೆ ಬರುವವರೇ ಆಗಿದ್ದಾರೆ. ವಿಧಾನ ಪರಿಷತ್ತು ವ್ಯಾಪಾರೀಕರಣ ಆಗುತ್ತಿದೆ. ಉದ್ಯಮಿಗಳು, ರಿಯಲ್ ಎಸ್ಟೇಟ್‌ನವರು, ಚಿನ್ನಾಭರಣ ಅಂಗಡಿ ಮಾಲೀಕರು ಸೇರಿದಂತೆ ಹಣವಂತರು ಪ್ರವೇಶಿಸುತ್ತಿದ್ದಾರೆ. ಬುದ್ಧಿವಂತರು, ಸಾಹಿತಿಗಳು, ತಜ್ಞರಿಗೆ ಅವಕಾಶವೇ ಇಲ್ಲ. ಪ್ರಸ್ತುತ ಪರಿಷತಿನ ನಾಲ್ಕು ಸ್ಥಾನಗಳಿಗೆ ನಾಮಕರಣ ಆಗಬೇಕಿದೆ. ಅದನ್ನೂ ಹಂಚಿಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.