ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯೊಳಗೆ ನಿವೃತ್ತಿಯಾಗಿರುವ ರಾಜ್ಯ ಸರ್ಕಾರಿ ನೌಕರರಿಗೆ, 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ.1 ರಂದು ಪ್ರತಿಭಟನೆ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತ ನೌಕರರು ಪಾಲ್ಗೊಂಡಲ್ಲಿ ನಮ್ಮ ಹೋರಾಟಕ್ಕೆ ಯಶಸ್ಸು ಸಾಧ್ಯ ಎಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ.ಷಣ್ಮುಖಯ್ಯ ಹೇಳಿದರು.ಮಡಿಕೇರಿ ನಗರಕ್ಕೆ ಭೇಟಿ ನೀಡಿದ ಅವರು ವೇದಿಕೆಯ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳೊಂದಿಗೆ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಿದರು.
ಅ.1 ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭ ರಾಜ್ಯಾದ್ಯಂತ ಜಿಲ್ಲಾಧಿಕಾ ಕಚೇರಿ ಎದುರು ಏಕಕಾಲದಲ್ಲಿ ನಿವೃತ್ತ ನೌಕರರು ಕಪ್ಪುಪಟ್ಟಿ ಧರಿಸಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗವುದು ಎಂದರು.2022ರ ಜುಲೈ 1ರಿಂದ 2024ರ ಜುಲೈ 31ರ ಅವಧಿಯಲ್ಲಿ ನಿವೃತ್ತಿಯಾದ ನೌಕರರಿಗೆ 6ನೇ ಆಯೋಗದ ಲೆಕ್ಕಾಚಾರದ ಅನುಸಾರ ಡಿ.ಸಿ.ಆರ್.ಜಿ. ಕಮ್ಯುಟೇಶನ್, ರಜೆ ನಗದೀಕರಣಗಳ ನಿವೃತ್ತಿ ಆರ್ಥಿಕ ಸೌಲಭ್ಯವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ನಮಗೆ ಆರ್ಥಿಕ ನಷ್ಟವುಂಟಾಗಿ ಅನ್ಯಾಯವಾಗಿದೆ ಎಂದರು.
ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರರ ಮೂಲಕ ನೂರಾರು ನಿವೃತ್ತ ನೌಕರರು ಮನವಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 12 ಸಾವಿರ ನಿವೃತ್ತ ನೌಕರರು ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ, ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ ಅವರ ಸಮ್ಮುಖದಲ್ಲಿ ನಮಗೆ ಆಗಿರುವ ಅನ್ಯಾಯದ ಕುರಿತು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತಿಗಳಿಗೆ ಮನವಿ ನೀಡಲಾಗಿದ್ದರೂ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.30 ರಿಂದ 40 ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಮ್ಮನ್ನು ಕಡೆಗಣಿಸಲಾಗಿದೆ. ಮತ್ತೊಮ್ಮೆ ಸರ್ಕಾರದ ಗಮನ ಸೆಳೆಯಲು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಒಗ್ಗೂಡಿದರೆ ನಮ್ಮ ಹೋರಾಟಕ್ಕೆ ಯಶಸ್ಸು ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಷಣ್ಮುಖಯ್ಯ, ನಮ್ಮ ಬೇಡಿಕೆ ನ್ಯಾಯ ಸಮ್ಮತವಾಗಿದ್ದು, ಇದು ಈಡೇರುವವರೆಗೆ ಹೋರಾಟ ನಡೆಸಲಾಗುವುದೆಂದು ತಿಳಿಸಿದರು.
ಈಗಾಗಲೇ ಎಲ್ಲಾ ಜಿಲ್ಲೆಗಳ ನಿವೃತ್ತ ನೌಕರರ ವೇದಿಕೆಯ ಸಂಘಟನೆಯ ಸಂಚಾಲಕರನ್ನು ಭೇಟಿ ಮಾಡಿ ಹೋರಾಟದ ರೂಪುರೇಷಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿಸಿದರು.ವೇದಿಕೆಯ ಜಿಲ್ಲಾ ಸಂಚಾಲಕ ಪಿ.ಎಸ್. ಜನಾರ್ದನ್, ರಾಜ್ಯ ಸಂಚಾಲಕ ಕೆ. ಶಿವಶಂಕರ್, ದಾವಣಗೆರೆ ಜಿಲ್ಲಾ ಸಂಚಾಲಕರಾದ ಜಿ.ಎಸ್.ನಾಗರಾಜು, ಓ.ಜಿ. ಏಕಾಂತಪ್ಪ, ಕೊಡಗು ಜಿಲ್ಲಾ ನಿವೃತ್ತ ನೌಕರರ ವೇದಿಕೆಯ ಪ್ರಮುಖರಾದ ಸಿ.ಕೆ.ಶಿವಕುಮಾರ್, ಎಂ.ಪಿ.ನಾಣಯ್ಯ, ಸುಕ್ರುದೇವು ಗೌಡ ಸೇರಿದಂತೆ ವಿವಿಧ ಇಲಾಖೆಯ ನಿವೃತ್ತ ನೌಕರರ ಉಪಸ್ಥಿತರಿದ್ದರು. ಜಿಲ್ಲಾ ಉಪಾಧ್ಯಕ್ಷ ಜಿ.ಎಂ. ಚಿನ್ನಯ್ಯ ವಂದಿಸಿದರು.