ಸಾರಾಂಶ
- ದಾವಣಗೆರೆಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಹೇಳಿಕೆ
- ರೈತ ಸಂಘಟನೆಗಳ ಒಕ್ಕೂಟ, ಕಬ್ಬು ಬೆಳೆಗಾರರ ಸಂಘ ಸಭೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಬಿತ್ತನೆ ಬೀಜಗಳ ಬೆಲೆ ದುಪ್ಪಟ್ಟಾಗಿದ್ದು, ಇದರ ವಿರುದ್ಧ ರಾಜ್ಯದ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಲಿವೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಸರ್ಕಾರಗಳಿಗೆ ಎಚ್ಚರಿಸಿದರು.ನಗರದ ಎಪಿಎಂಸಿ ಆವರಣದ ರೈತ ಸಭಾಂಗಣದಲ್ಲಿ ಮಂಗಳವಾರ ರೈತರ ಸಭೆಯಲ್ಲಿ ಮಾತನಾಡಿದ ಅವರು, ಏಕಾಏಕಿ ಬಿತ್ತನೆ ಬೀಜಗಳ ಬೆಲೆ ದುಪ್ಪಟ್ಟಾದರೆ ರೈತರು ಕೃಷಿಯಿಂದಲೇ ವಿಮುಖ ಆಗಬೇಕಾಗುತ್ತದೆ ಎಂದರು.
ಸರ್ಕಾರದ ಅಧೀನದ ರೈತ ಸಂಪರ್ಕ ಕೇಂದ್ರಗಳಲ್ಲೇ ಬಿತ್ತನೆ ಬೀಜಗಳ ಬೆಲೆ ಏರಿಕೆಯಾಗಿದೆ. ಆಳುವ ಸರ್ಕಾರಗಳು ರೈತರ ಹಿತಕಾಯುವ ಬದಲಿಗೆ ಮೊದಲೇ ಸಂಕಷ್ಟದಲ್ಲಿ ಸಿಲುಕಿದ ರೈತರ ಗಾಯದ ಮೇಲೆ ಬರೆ ಹಾಕುವ ಕೆಲಸವನ್ನು ಮಾಡಲು ಹೊರಟಿವೆ. ಕೃಷಿಗೆ ಮೂಲವಾಗಿರುವ ಬಿತ್ತನೆ ಬೀಜಗಳ ಬೆಲೆಯನ್ನೇ ಹೆಚ್ಚಿಸಿದರೆ ರೈತರು ಏನು ಮಾಡಬೇಕು ಎಂದು ಕಿಡಿಕಾರಿದರು.ಸರ್ಕಾರದ ರೈತವಿರೋಧಿ ನಡೆದ ಇಡೀ ಅನ್ನದಾತ ರೈತರ ಸಮುದಾಯದಲ್ಲಿ ತೀವ್ರ ಅಸಮಾಧಾನವಿದೆ. ರಾಜ್ಯದ 70 ಲಕ್ಷ ರೈತರ ಪೈಕಿ ಕೇವಲ 27 ಲಕ್ಷ ರೈತರಿಗೆ ಮಾತ್ರ ಬೆಳೆ ಪರಿಹಾರ ಬಿಡುಗಡೆ ಮಾಡಲಾಗಿದೆ. ಉಳಿದ 33 ಲಕ್ಷ ರೈತರಿಗೆ ಇನ್ನೂ ಬೆಳೆ ಹಾನಿ ಪರಿಹಾರ ಮರೀಚಿಕೆಯಾಗಿದೆ. ಕೆಲವರಿಗೆ ಕೇವಲ ₹500 ರಿಂದ ₹1500 ವರೆಗೆ ಪರಿಹಾರ ನೀಡಲಾಗಿದೆ. ಸರ್ಕಾರವೇನು ರೈತರಿಗೆ ಭಿಕ್ಷೆ ನೀಡುತ್ತಿದೆಯೇ ಎಂದು ಹರಿಹಾಯ್ದರು.
ನಕಲಿ ಬೀಜ ಮಾರಾಟಗಾರರ ಹಾವಳಿಯೂ ಮಿತಿ ಮೀರುತ್ತಿದೆ. ನಕಲಿ ಬೀಜ ಮಾರಾಟ ಮಾಡುವವರು, ಪೂರೈಸುವವರು, ನಕಲಿ ಬೀಜ ಉತ್ಪಾದಕರನ್ನು ಮಟ್ಟಹಾಕಬೇಕು. ಆದರೆ, ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದರು.ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ ಮಾತನಾಡಿ, ಬೆಳೆ ಹಾನಿ ಪರಿಹಾರ ನೀಡುವಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ. ಕೊಳವೆ ಬಾವಿ ಆಧಾರಿತ, ಭದ್ರಾ ಕಾಲುವೆ ನೀರು ಆಧರಿಸಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಎಕರೆ ಬೆಳೆ ನಷ್ಟವಾಗಿದೆ. ಅಡಕೆ, ಕಬ್ಬು, ಬಾಳೆ, ಮಾವು, ಎಲೆಬಳ್ಳಿ ಸೇರಿದಂತೆ ಎಲ್ಲ ರೀತಿಯ ಬೆಳೆಗಳು, ತೋಟದ ಬೆಳೆಗಳು ನಾಶವಾಗಿವೆ. ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಸಂಘದ ಜಿಲ್ಲಾಧ್ಯಕ್ಷ ರಾಂಪುರದ ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಾಧ್ಯಕ್ಷ ಬಳ್ಳಾರಿಯ ಮಾಧವ ರೆಡ್ಡಿ, ಬೆಳಗಾವಿಯ ಚಿನ್ನಪ್ಪ ಪಪೂಜಾರಿ, ಬೆಳಗಾವಿ ಪಾಟೀಲರು, ಕುರಿ ಮತ್ತು ಉಣ್ಣೆ ಸಹಕಾರಿ ಸಂಘದ ಅಧ್ಯಕ್ಷ ಸಿ.ಬಿ.ಲೋಕೇಶಗೌಡ, ಚಿಕ್ಕಬುಳ್ಳಾಪುರದ ಪ್ರಸಾದ, ಕಬ್ಬಳ ಕುಮಾರಸ್ವಾಮಿ, ಬಸವರಾಜ ರಾಂಪುರ, ಪೂಜಾರ ಅಂಜಿನಪ್ಪ, ಸುರೇಶ ಪಾಟೀಲ, ಶಿವಕುಮಾರ ಅಣಬೇರು ರಾಜಯೋಗಿ, ಹೆಬ್ಬಾಳ್ ಬೈಯಪ್ಪರ ತಿರುಮಲೇಶ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳು, ರಾಜ್ಯದ 10 ಜಿಲ್ಲೆಗಳ ಪ್ರಮುಖರು ಸಭೆಯಲ್ಲಿದ್ದರು.ಇದೇ ವೇಳೆ ನ್ಯಾಮತಿ ತಾಲೂಕು ಮಾಚೇನಹಳ್ಳಿ ಗ್ರಾಮದ ಕರಿಬಸಪ್ಪ ಗೌಡರ್ ಅವರನ್ನು ರಾಜ್ಯ ಹಸಿರು ಸೇನೆ ಅಧ್ಯಕ್ಷರಾಗಿ ನೇಮಿಸಲಾಯಿತು.
- - - -28ಕೆಡಿವಿಜಿ6, 7:ದಾವಣಗೆರೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ರಾಜ್ಯದ 10 ಜಿಲ್ಲೆಗಳ ಪ್ರಮುಖರ ಸಭೆಯಲ್ಲಿ ಮಾತನಾಡಿದರು.