ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ರಾಜ್ಯದಲ್ಲಿ ರೈತರನ್ನು ಕಡೆಗಣಿಸಲಾಗುತ್ತಿದೆ. ಬರಗಾಲ ಘೋಷಿಸಿ ಕೈತೊಳೆದುಕೊಂಡಿರುವ ರಾಜ್ಯ ಸರ್ಕಾರ ಪರಿಹಾರದ ಹಣ ಬಿಡುಗಡೆ ಮಾಡದೆ ಮೋಸವೆಸಗುತ್ತಿದೆ. ಕೂಡಲೇ ರೈತರಿಗೆ ಪರಿಹಾರ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಆಗ್ರಹಿಸಿ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಎಚ್ಚರಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಗಾರು ಮಳೆ ಕೈಕೊಟ್ಟಿದ್ದಾಯಿತು. ಇದೀಗ ಹಿಂಗಾರು ಮಳೆ ಸಹ ಕೈಕೊಡುವ ಲಕ್ಷಣಗಳು ದಟ್ಟವಾಗಿವೆ. ಪ್ರಸಕ್ತ ವರ್ಷ 3 ಬಾರಿ ಬಿತ್ತನೆ ಮಾಡಿ ರೈತರು ಕೈಸುಟ್ಟುಕೊಂಡಿದ್ದಾರೆ. ಅದಾಗ್ಯೂ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತನಿಗೆ ಹಿಡಿಕಾಳು ಸಿಕ್ಕಿಲ್ಲ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರ ವಿಚಾರದಲ್ಲಿ ನಿದ್ದೆ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆಲ್ಲಾ ಸರ್ಕಾರದ ನೀತಿಗಳೇ ಕಾರಣವಾಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತನ ಕಣ್ಣೊರೆಸಲು ಮುಂದೆ ಬರಬೇಕು. ರೈತರು ಮಾಡಿದ ಸಾಲ ಮನ್ನಾ ಮಾಡಬೇಕು. ಅದಕ್ಕೂ ಮುನ್ನ ರೈತರಿಗೆ ಬೆಳೆ ಪರಿಹಾರ, ಬೆಳೆವಿಮೆ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.ರಾಜ್ಯ ಉಪಾಧ್ಯಕ್ಷ ಎಂ. ಪ್ರಕಾಶ ಮಾತನಾಡಿ, ಪ್ರಸ್ತುತ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಉಚಿತ ಘೋಷಣೆ ಪೂರೈಸುವ ಸಲುವಾಗಿ ಹಣ ಹೊಂದಿಸಲು ಪರದಾಡುತ್ತಿದೆ. ರಾಜಕೀಯ ಪಕ್ಷದ ಮುಖಂಡರು ಹಾಗೂ ಜನಪ್ರತಿನಿಧಿಗಳು, ಅಸ್ತಿತ್ವ ಉಳಿಸಿಕೊಳ್ಳಲು ಸುಳ್ಳು ಭರವಸೆ ನೀಡಿ ಜನತೆಗೆ ಮೋಸ ಮಾಡುತ್ತಿದ್ದಾರೆ ಹೊರತು, ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಆರೋಪಿಸಿದರು.
ಇದೇ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಹಾವೇರಿ ಜಿಲ್ಲಾಧ್ಯಕ್ಷರನ್ನಾಗಿ ಮೊಟೇ ಬೆನ್ನೂರಿನ ಚಂದ್ರಶೇಖರ ಉಪ್ಪಿನ ಅವರನ್ನು ಆಯ್ಕೆ ಮಾಡಿ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಆದೇಶ ಹೊರಡಿಸಿದರು.ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಗಣ್ಣ ಬಾಗೇವಾಡಿ, ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿ ಕುಸುಮಾ ಅಸಾದಿ, ತಾಲೂಕಾಧ್ಯಕ್ಷ ಶಿವಯೋಗಿ ಗಡಾದ, ಮುಖಂಡರಾದ ಷಣ್ಮುಕಪ್ಪ ಹೊಸಪೇಟಿ, ಸಂಜೀವ ಮಡಿವಾಳರ, ಸುರೇಶ ಕುದರಿಹಾಳ ಕಾವ್ಯ ಬತ್ತಿಕೊಪ್ಪ, ಶಾಂತಾ ಮೇಗಳಮನಿ ಸೇರಿದಂತೆ ಹಲವು ಭಾಗವಹಿಸಿದ್ದರು.