ಸಾರಾಂಶ
ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಯೋಜನೆಗಳಲ್ಲಿ ವಂಚನೆ ಆಗುವುದು ಬೇಡ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ರಾಜ್ಯವಾರು ಪ್ರತ್ಯೇಕ ನೀತಿ ಇರಬೇಕು.
ಹುಬ್ಬಳ್ಳಿ:
ಆರೋಗ್ಯ ಕ್ಷೇತ್ರಕ್ಕೆ ಸಮರ್ಪಕ ಹಾಗೂ ಹೆಚ್ಚಿನ ಅನುದಾನ ನೀಡುವುದರ ಜತೆಗೆ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಆರೋಗ್ಯ ಯೋಜನೆ ರೂಪಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.ಇಲ್ಲಿನ ಸ್ಟೇಲ್ಲರ್ ಮಾಲ್‌ನಲ್ಲಿ ಸಂಯುಕ್ತ ಕರ್ನಾಟಕ ಪತ್ರಿಕೆ ಆಯೋಜಿಸಿದ್ದ 3 ದಿನಗಳ ಆರೋಗ್ಯ ಹಬ್ಬ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಬರಬೇಕಾದ ಅನುದಾನ ಮತ್ತು ಯೋಜನೆಗಳಲ್ಲಿ ವಂಚನೆ ಆಗುವುದು ಬೇಡ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳ ವಿಷಯದಲ್ಲಿ ರಾಜ್ಯವಾರು ಪ್ರತ್ಯೇಕ ನೀತಿ ಇರಬೇಕು ಎಂದು ಪ್ರತಿಪಾದಿಸಿದರು. ಪ್ರತಿಯೊಂದು ರಾಜ್ಯದ ಆರೋಗ್ಯ ಸನ್ನಿವೇಶ ವಿಭಿನ್ನವಾಗಿರುತ್ತದೆ. ಒಂದು ರಾಜ್ಯದ ಸ್ಥಿತಿ ಇನ್ನೊಂದರಲ್ಲಿ ಇರುವುದಿಲ್ಲ. ಆದ್ದರಿಂದ ಕಾರ್ಯಕ್ರಮ ರೂಪಿಸುವಾಗ ಏಕಪ್ರಕಾರದ ನೀತಿಗಳು ಸೂಕ್ತವಲ್ಲ ಎಂದರು.ಮೆಡಿಕಲ್ ಸೀಟು ಹೆಚ್ಚಳ:
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, 51 ಸಾವಿರದಷ್ಟಿದ್ದ ಮೆಡಿಕಲ್ ಸೀಟ್‌ಗಳನ್ನು ಕಳೆದ ಹತ್ತು ವರ್ಷಗಳಲ್ಲಿ 1 ಲಕ್ಷದ ವರೆಗೆ ಹೆಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 75 ಸಾವಿರ ಸೀಟ್ ಹೆಚ್ಚಿಸಲು ಕೇಂದ್ರ ಸರ್ಕಾರ ಕ್ರಮಕೈಗೊಳ್ಳಲಿದೆ. ಕೇಂದ್ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಅನುದಾನವನ್ನು ಶೇ.13ರಷ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.ಸಭಾಪತಿ ಬಸವರಾಜ ಹೊರಟ್ಟಿ ಅವರು, ದುಶ್ಚಟಗಳನ್ನು ಬಿಟ್ಟು ಜನತೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಕೊರೋನಾ ಸಂದರ್ಭದಲ್ಲಿ ಕಿಮ್ಸ್ ವೈದ್ಯರು ತಮ್ಮ ಅವಿರತ ಸೇವೆಯ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದರು ಎಂದು ಶ್ಲಾಘಿಸಿದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಬಡಜನತೆಗೆ ಸುಲಭ ದರದಲ್ಲಿ ಆರೋಗ್ಯ ಸೇವೆ ದೊರೆಯುವಂತಾಗಲು ಕೈಗೆಟಕುವ ಬೆಲೆಯ ಚಿಕಿತ್ಸಾ ಯೋಜನೆ ಜಾರಿಗೆ ಬರಲಿ ಎಂದರು.ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ವೈದ್ಯಕೀಯ ಶಿಕ್ಷಣದಲ್ಲಿ ಸಾರ್ವಜನಿಕರ ಆರೋಗ್ಯದ ಸಲುವಾಗಿ ವಿಶೇಷ ಕೋರ್ಸ್‌ಗಳು ಹಾಗೂ ವಿಶೇಷ ಕೇಡರ್ ನಿರ್ಮಾಣ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ವಿಧಾನಪರಿಷತ್ ಸದಸ್ಯ ಯು.ಬಿ. ವೆಂಕಟೇಶ ಸ್ವಾಗತಿಸಿದರು. ಧರ್ಮದರ್ಶಿ ಡಾ. ಗುರುರಾಜ ಕರಜಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ, ಮೇಯರ ರಾಮಣ್ಣ ಬಡಿಗೇರ, ಜಿಲ್ಲಾಧಿಕಾರಿ ದಿವ್ಯಪ್ರಭು, ನೇತ್ರ ತಜ್ಞ ಡಾ. ಎಂ.ಎಂ. ಜೋಶಿ, ಉದ್ಯಮಿಗಳಾದ ಡಾ. ವಿ.ಎಸ್.ವಿ. ಪ್ರಸಾದ, ಬಸವರಾಜ ಕಮತಗಿ, ಕಿಮ್ಸ್ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಹಿರಿಯ ಪತ್ರಕರ್ತರಾದ ಹುಣಸವಾಡಿ ರಾಜಣ್ಣ, ಮೋಹನ ಹೆಗಡೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಅಪಾರ ಸ್ಪಂದನೆ:
ಈ ಆರೋಗ್ಯ ಹಬ್ಬಕ್ಕೆ ನಗರದ ಜನತೆಯಿಂದ ಅಪಾರ ಸ್ಪಂದನೆ ಲಭಿಸಿತು. ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಜನತೆ ಮಳಿಗೆಗಳಿಗೆ ತೆರಳಿ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಹಲವರು ವಿವಿಧ ತಪಾಸಣೆಗೆ ಒಳಗಾದರು. ಇಡೀ ದಿನ ಜನದಟ್ಟಣೆ ಇತ್ತು.