ಚಿತ್ರದುರ್ಗ ತಾಲೂಕಿನ ದೊಡ್ಡಹಟ್ಟಿ ಹಾಗೂ ಕಕ್ಕೇರು ಗ್ರಾಮಗಳಲ್ಲಿಚೆಕ್ ಡ್ಯಾಂ ನಿರ್ಮಾಣಕ್ಕೆ ಶಾಸಕ ವೀರೇಂದ್ರ ಪಪ್ಪಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಳೆಗಾಲದಲ್ಲಿ ಅಪಾರ ಪ್ರಮಾಣದಲ್ಲಿ ಹರಿದು ಹೋಗುವ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚೆಕ್ ಡ್ಯಾಂಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.ತಾಲೂಕಿನ ದೊಡ್ಡಹಟ್ಟಿ ಹಾಗೂ ಕಕ್ಕೇರು ಗ್ರಾಮಗಳಲ್ಲಿ ಒಟ್ಟು 2 ಕೋಟಿ 5 ಲಕ್ಷ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಮಳೆ ನೀರು ಹರಿದು ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸಲಾಗುತ್ತಿದೆ. ಇದರೊಂದಿಗೆ ನೀರಿನ ಸಂಗ್ರಹಣೆಗೆ ಅನುಕೂಲವಾಗುವ ಬೃಹತ್ ಹಳ್ಳಗಳು ಹಾಗೂ ನೀರು ತಡೆಗಟ್ಟುವ ಕಾಮಗಾರಿಗಳಿಗೂ ಚಾಲನೆ ನೀಡಲಾಗುತ್ತಿದೆ. ನಮ್ಮ ನೀರು ನಮ್ಮ ನೆಲದಲ್ಲಿಯೇ ಉಳಿಯಬೇಕು ಎಂಬುದು ನಮ್ಮ ಪ್ರಮುಖ ಆಶಯವಾಗಿದೆ ಎಂದು ಹೇಳಿದರು.
ಚೆಕ್‌ಡ್ಯಾಂಗಳ ನಿರ್ಮಾಣದಿಂದ ಸಾಕಷ್ಟು ಅನುಕೂಲವಾಗಲಿದೆ. ರೈತರ ಜಮೀನು, ತೋಟ ಹಾಗೂ ಕೃಷಿ ಪ್ರದೇಶಗಳ ಸಮೀಪ ನೀರು ಸಂಗ್ರಹವಾಗುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಸುಧಾರಿಸಲು ಸಹಕಾರಿಯಾಗಲಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ದೊರೆಯುವುದರ ಜೊತೆಗೆ ಬೇಸಿಗೆ ಸಂದರ್ಭದಲ್ಲಿಯೂ ನೀರಿನ ಸಮಸ್ಯೆ ನಿವಾರಣೆಗೆ ಸಹಾಯಕವಾಗಲಿದೆ ಎಂದು ತಿಳಿಸಿದರು.ಕಕ್ಕೇರು ಗ್ರಾಮದ ಯುವ ಮುಖಂಡ ಮಹಾಂತೇಶ್.ಟಿ ಮಾತನಾಡಿ, ಅನ್ನೇಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಬಹುತೇಕ ಗ್ರಾಮಗಳು ಗುಡ್ಡ ಪ್ರದೇಶಗಳಿಂದ ಕೂಡಿದ್ದು ಮಳೆ ನೀರು ಹಳ್ಳಗಳ ಮೂಲಕ ಹರಿದು ಬೇರೆ ಕೆರೆಗೆ ಸೇರುತ್ತವೆ. ಚೆಕ್ ಡ್ಯಾಂ ನಿರ್ಮಾಣ ಮಾಡಬೇಕೆಂದು ಶಾಸಕರಿಗೆ ಗ್ರಾಮಸ್ಥರು ಮನವಿಯನ್ನು ಸಲ್ಲಿಸಿದ್ದರು. ಇದರ ಪರಿಣಾಮವಾಗಿ ಶಾಸಕರು ಸಂಬಂಧಪಟ್ಟ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಬೃಹತ್ ಮಟ್ಟದ ಚೆಕ್ ಡ್ಯಾಂ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು , ಅದರ ಪ್ರತಿಫಲವಾಗಿ ಗ್ರಾಮದ ಹೊರ ವಲಯದ ಹಳ್ಳಗಳಿಗೆ ಚಿಕ್ ಡ್ಯಾಂ ಭೂಮಿ ಪೂಜೆ ನೆರವೇರಿಸಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಭೀಮರಾಜ್, ಸುಹೀಲ್ ರಹೀಮ್, ಜಿಲ್ಲಾ ಗ್ಯಾರೆಂಟಿ ಸಮಿತಿಯ ಅಧ್ಯಕ್ಷ ಶಿವಣ್ಣ, ಕೆಡಿಪಿ ಸದಸ್ಯ ನಾಗರಾಜ್, , ಅನ್ನೇಹಾಳ್ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ವಾಸದೇವಪ್ಪ, ಪಿಡಿಒ ಹನುಮಂತ ರಾಯಪ್ಪ, ಗ್ರಾಮಸ್ಥರಾದ ಮುತ್ತುರಾಜ್ ಓಬಳೇಶ್, ವರದರಾಜ, ಪಾಪಣ್ಣ,, ಚಿದಾನಂದ, ತಿಪ್ಪೇಶ್, ಮಹಾಂತೇಶ್, ರುದ್ರೇಶ್, ರವಿಕುಮಾರ್, ಅಭಿಷೇಕ್, ಪ್ರದೀಪ್ ಮಂಜುನಾಥ್,ರುದ್ರಪ್ಪ, ಗಿರೀಶ್, ಸಂತೋಷ್, ಶಿವಕುಮಾರ್, ಆನಂದಪ್ಪ, ತಿಪ್ಪೇಸ್ವಾಮಿ, ಹನುಮಂತಪ್ಪ ಇದ್ದರು.