ಶೋಷಣೆಗೆ ಒಳಗಾಗಿ ಪ್ರಸಿದ್ಧರಾದ ಹರ್ಡೇಕರ ಮಂಜಪ್ಪ

| Published : Feb 20 2025, 12:50 AM IST

ಸಾರಾಂಶ

ಮುರುಘ ಮಠದ ಶ್ರೀ ಮುರುಗಿ ಶಾಂತವೀರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದ ಆವರಣದಲ್ಲಿ ನಡೆದ ಹರ್ಡೇಕರ್ ಮಂಜಪ್ಪನವರ ಜಯಂತಿ ಪ್ರಯುಕ್ತ ಅವರ ಭಾವಚಿತ್ರಕ್ಕೆ ಡಾ.ಬಸವಕುಮಾರ ಮಹಾಸ್ವಾಮೀಜಿ ಪುಷ್ಪನಮನ ಸಲ್ಲಿಸಿದರು.

ಜಯಂತಿ ನಿಮಿತ್ತ ಹರ್ಡೇಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರೀ ಬಸವ ಕುಮಾರ ಶ್ರೀ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶೋಷಣೆಗೆ ಒಳಗಾದರು ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಮಹಾತ್ಮಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧರಾದವರು ಹರ್ಡೇಕರ್ ಮಂಜಪ್ಪನವರು ಎಂದು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳು ಹೇಳಿದರು.

ಶ್ರೀಮಠದ ಶ್ರೀ ಮುರುಗಿ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಆವರಣದಲ್ಲಿ ನಡೆದ ಹರ್ಡೇಕರ್ ಮಂಜಪ್ಪನವರ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರೀಗಳು ಮಾತನಾಡಿದರು.

ಮಂಜಪ್ಪನವರು ಆರ್ಯ ಸಮಾಜದಿಂದ ಬಸವ ಸಮಾಜದತ್ತ ಮುಖ ಮಾಡುವಂತಾಯಿತು. ದಾವಣಗೆರೆ ಎಸ್.ರುದ್ರಪ್ಪ ಮಾಸ್ತರರ ವಾಗ್ದೇವಿ ವಿಲಾಸ ಪ್ರೆಸ್ಸಿನಲ್ಲಿ 200 ರು. ಕರಾರಿನ ಮೇಲೆ ಮಾಗಾನಹಳ್ಳಿ ದೊಡ್ಡಪ್ಪನವರ ಸಹಾಯದಿಂದ 1905 ಸೆಪ್ಟೆಂಬರ್‌ನಲ್ಲಿ ಧನುರ್ಧಾರಿ ಪತ್ರಿಕೆ ಆರಂಭಿಸಿದರು. ಅವರಿಗೆ ನಿಡಗುಂದಿ ಮಡಿವಾಳಪ್ಪ, ಕಂಚಿಕೇರಿ ಮಹಾಲಿಂಗಪ್ಪನವರ ಪ್ರೇರಣೆ ದೊರಕಿತು.

ದಾವಣಗೆರೆ ವಿರಕ್ತಮಠದಲ್ಲಿ ಸೇವೆ ನಿರ್ವಹಿಸುತ್ತಿದ್ದ ಶ್ರೀ ಮೃತ್ಯುಂಜಯ ಸ್ವಾಮಿಗಳು ಅದಾಗಲೇ ಶಿವಾನುಭವ ಕಾರ್ಯಗಳ ಮೂಲಕ ದಾವಣಗೆರೆಯಲ್ಲಿ ಮನೆ ಮಾತಾಗಿದ್ದರು. ಇದನ್ನರಿತ ಮಂಜಪ್ಪನವರು ಶ್ರೀಗಳನ್ನು ಭೇಟಿ ಮಾಡಿ 26-6-1911 ರಂದು ಭಜನಾ ಸಂಘ ಸ್ಥಾಪಿಸಿದರು. ಬಡಾವಣೆ, ಗಲ್ಲಿ-ಹಳ್ಳಿಗಳ ಸಂಚರಿಸಿ ವಚನಗಳು ಮತ್ತು ತತ್ವಪದಗಳನ್ನು ಹಾಡಿ ಜನಮನದಲ್ಲಿ ಪ್ರೇರಣೆ ತುಂಬಿದರು. ಲಿಂಗಾಯತ ಧರ್ಮಿಯರಾದ ನಾವು ಕೂಡ ನಮ್ಮ ಧರ್ಮ ಗುರು ಬಸವಣ್ಣನವರ ಜಯಂತಿ ಆಚರಿಸೋಣವೆಂದು ಮಂಜಪ್ಪನವರು ಮೃತ್ಯುಂಜಯ ಶ್ರೀಗಳೊಂದಿಗೆ ಚರ್ಚಿಸಿದರು.

ಹಿರಿಯರಾದ ಮೈಸೂರಿನ ಎನ್.ಆರ್ ಕರಿಬಸವಶಾಸ್ತ್ರಿಗಳು, ಹರಪನಹಳ್ಳಿಯ ಆರ್. ಶಾಂತಪ್ಪಾಜಿಯವರ ಸಲಹೆಯ ಮೇರೆಗೆ ದಾವಣಗೆರೆಯ ಶರಣ ಬಂಧುಗಳ ಸಹಕಾರದಲ್ಲಿ 1913 ರಲ್ಲಿ ಮೊದಲ ಬಸವ ಜಯಂತಿಯನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಬಸವ ಜಯಂತಿ ಆಚರಣೆಗೆ ತಂದ ಹರಿಕಾರರಾಗಿದ್ದಾರೆ.

ಬಸವಣ್ಣನವರ ತತ್ವಗಳಿಂದ ಪ್ರಭಾವಿತರಾದ ಮಂಜಪ್ಪನವರು ಇಷ್ಟಲಿಂಗ ದೀಕ್ಷೆ ಪಡೆಯಬೇಕೆನ್ನುವ ಹಂಬಲವನ್ನು ಶ್ರೀ ಮೃತ್ಯುಂಜಯಪ್ಪಗಳ ಮುಂದೆ ವ್ಯಕ್ತಪಡಿಸಿದರು. ಹಾಗೇ ಆಗಲಿ ನಮ್ಮೆಲ್ಲರ ಪರಮಾರಾಧ್ಯ ಗುರುಗಳಿಂದಲೇ ನಿಮಗೆ ದೀಕ್ಷೆ ಆಗಲಿ ಎಂದು ಇಚ್ಚಿಸಿ ಶ್ರೀಗಳು ಮಂಜಪ್ಪನವರನ್ನು ನೇರವಾಗಿ ಅಥಣಿಗೆ ಕರೆದುಕೊಂಡು ಹೋದರು. ಅಪ್ಪನ ವಚನವನ್ನು ಆದರ್ಶವಾಗಿರಿಸಿಕೊಂಡಿದ್ದ ಶಿವಯೋಗಿಗಳು ಮೃತ್ಯುಂಜಯ ಶ್ರೀಗಳ ಮನೋಭಿಲಾಶೆ ಅರಿತು ಸುಪ್ರಭಾತ ಸಮಯದಲ್ಲಿ ವಚನ ಮಂತ್ರ ಪಠಣದೊಂದಿಗೆ 1914ರಲ್ಲಿ ಅಥಣಿ ಶಿವಯೋಗಿಗಳು ಲಿಂಗದೀಕ್ಷೆ ಅನುಗ್ರಹಿಸಿದರು. ಮಹಾತ್ಮಾ ಗಾಂಧೀಜಿಯವರ ಆದರ್ಶ ಮಾರ್ಗವನ್ನು ಅನುಸರಿಸುತ್ತಿರುವ ನೀವು ಕರ್ನಾಟಕದ ಗಾಂಧಿಯಾಗಿ ಬೆಳಗಿರಿ ಎಂದು ಅವರಿಗೆ ಆಶೀರ್ವದಿಸಿದ್ದರು ಎಂದರು.

ಸಾಧಕರಾದ ಲಂಕೇಶ್ ದೇವರು ಮತ್ತು ಪರಶುರಾಮ ದೇವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತರು, ವಿದ್ಯಾರ್ಥಿಗಳು, ಸಾಧಕರು, ವಟುಗಳು, ನವೀನ್ ಮಸ್ಕಲ್, ಬಸವರಾಜ ಕಟ್ಟಿ, ಎಸ್.ಜೆ.ಎಂ. ಬ್ಯಾಂಕ್‍ನ ವ್ಯವಸ್ಥಾಪಕ ಟಿ.ಕೆ. ರಾಜಶೇಖರ್, ಸುಮ ರಾಜಶೇಖರ್, ಎಸ್.ಜೆ.ಎಂ. ಮುದ್ರಣಾಲಯದ ಸಿಬ್ಬಂದಿಗಳು,

ಜಮುರಾ ಕಲಾವಿದ ಉಮೇಶ್ ಪತ್ತಾರ್, ಹೆಚ್.ಎಸ್. ಕೊಟ್ರೇಶ್, ಪ್ರಜ್ವಲ್, ರವಿಕಿರಣ್ ಮುಂತಾದವರು ಹಾಜರಿದ್ದರು.