ಸಾರಾಂಶ
- ಪಿ.ಜೆ. ಬಡಾವಣೆ ಒಂದಿಂಚೂ ಭೂಮಿ ಹೋಗಲ್ಲ, ಜನತೆ ಭಯಪಡಬೇಕಿಲ್ಲ: ದಿನೇಶ ಶೆಟ್ಟಿ ಅಭಯ । ಗೊಂದಲಕ್ಕೆ ಬಿಜೆಪಿ ನೇರ ಕಾರಣ: ಆರೋಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆರಾಜ್ಯ ಸರ್ಕಾರ ಹೊರಡಿಸಿದ್ದ ವಕ್ಫ್ ನೋಟಿಸ್ ವಾಪಸ್ ಪಡೆದಿದ್ದು, ಮುಟೇಷನ್‌ಗೆ ತಡೆ ನೀಡಿದೆ. ರೈತರು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಪಡಬೇಕಿಲ್ಲ ಎಂದು ದೂಡಾ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಟೇಷನ್ ಮಾಡಲು ಯಾವುದೇ ಕಚೇರಿ, ಪ್ರಾಧಿಕಾರದಿಂದ ನೀಡಲಾದ ನಿರ್ದೇಶನಗಳನ್ನು ಸರ್ಕಾರ ವಾಪಸ್ ಪಡೆದಿದೆ. ಇದರಿಂದ ಯಾವುದೇ ಪ್ರಕ್ರಿಯೆಗಳೂ ನಡೆಯುವುದಿಲ್ಲ. ಜನರೂ ಆತಂಕಪಡಬೇಕಾಗಿಲ್ಲ ಎಂದರು.ಮಾಧ್ಯಮಗಳಲ್ಲಿ ದಾವಣಗೆರೆ ಪಿ.ಜೆ. ಬಡಾವಣೆಯ 4.13 ಎಕರೆ ಖಬರಸ್ಥಾನ ವಕ್ಫ್ ಸಂಸ್ಥೆಗೆ ಸೇರಿದೆ ಎಂಬುದಾಗಿ ವರದಿಯಾಗಿದೆ. 1940ರಲ್ಲಿ ನಿರ್ಮಾಣವಾಗಿದ್ದ ಪಿ.ಜೆ. ಬಡಾವಣೆಯಲ್ಲಿ ಸರ್ಕಾರವೇ ನಿವೇಶನ ಹಂಚಿಕೆ ಮಾಡಿದೆ. ಆಗಿನಿಂದ ಈವರೆಗೂ ಯಾವುದೇ ಗೊಂದಲ ಇರಲಿಲ್ಲ. ಆದರೆ, ಈಗ ಇದ್ದಕ್ಕಿದ್ದಂತೆ ಅಂತಹ ಗೊಂದಲ ಹುಟ್ಟಿಕೊಂಡಿದೆ. ಇದಕ್ಕೆಲ್ಲಾ ಬಿಜೆಪಿ ನೇರ ಕಾರಣ ಎಂದು ಆರೋಪಿಸಿದರು.
ಬಿಜೆಪಿ ಆಟದ ಭಾಗವೇ ವಕ್ಫ್ ನಾಟಕವಾಗಿದೆ. ಸಂವಿಧಾನ ಬದಲಿಸಲು ಹೊರಟ ಬಿಜೆಪಿ, ಈಗ ವಕ್ಫ್ ಹೆಸರಿನಲ್ಲಿ ರಾಜ್ಯದ ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದೆ. ರೈತರಿಗೆ ಹಿಂದೆ ಬಿಜೆಪಿ ಸರ್ಕಾರವೇ ವಕ್ಫ್ ನೋಟಿಸ್ ನೀಡಿದ್ದನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು. ಈಗಾಗಲೇ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ. ಯಾವುದೇ ಗೊಂದಲಕ್ಕೂ ಆಸ್ಪದ ಇಲ್ಲದಂತೆ ಸರ್ಕಾರದ ನಿಯಮ ಪಾಲಿಸುವಂತೆ ಸೂಚಿಸಿದ್ದಾರೆ ಎಂದು ದಿನೇಶ್ ತಿಳಿಸಿದರು.ಯಾರದ್ದೋ ಆಸ್ತಿಯನ್ನು ಮತ್ತೆ ಯಾರೋ ಪಡೆಯುವುದಿಲ್ಲ. ಬಿಜೆಪಿ ನಾಯಕರು ವಕ್ಫ್ ಹೆಸರಿನಲ್ಲಿ ಆಡುತ್ತಿರುವ ನಾಟಕ ಕೈಬಿಡಬೇಕು. ಪಿ.ಜೆ. ಬಡಾವಣೆಯಲ್ಲೂ ಒಂದಿಂಚು ಭೂಮಿ ಸಹ ವಕ್ಫ್ ಮಂಡಳಿ ಪಡೆಯಲ್ಲ. ವಕ್ಫ್ ಇಲಾಖೆ ಸಹ ತಮ್ಮ ಆಸ್ತಿಯೆಂದು ಯಾವುದೇ ಇಲಾಖೆಗೆ ಅರ್ಜಿ ನೀಡಿಲ್ಲ. ತಹಸೀಲ್ದಾರ್, ಉಪ ವಿಭಾಗಾಧಿಕಾರಿಗಳು ಸಹ ಪಿ.ಜೆ. ಬಡಾವಣೆಯಲ್ಲಿ ವಕ್ಫ್‌ನ ಯಾವುದೇ ಆಸ್ತಿ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ದಾಖಲೆಯೇ ಇಲ್ಲದೇ, ಆರೋಪ ಮಾಡುತ್ತಾ ಬಿಜೆಪಿ ರಾಜಕೀಯ ಮಾಡಲು ಹೊರಟಿದೆ. ದಾವಣಗೆರೆಯಲ್ಲಿ ರೈತರು, ಸಾರ್ವಜನಿಕರ ಆಸ್ತಿ ಕಬಳಿಸಲು ಬಿಡುವುದಿಲ್ಲ ಎಂದು ಹೇಳಿದರು.
ದಾವಣಗೆರೆಗೆ ನಿನ್ನೆ ಭೇಟಿ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ ಇತರರು ಪಿ.ಜೆ. ಬಡಾವಣೆಯಲ್ಲಿ ಸುತ್ತಾಡಿದ್ದಾರೆ. ಆರ್.ಅಶೋಕ್ ಅವರಿಗೆ ಅಷ್ಟೊಂದು ಕಾಳಜಿ ಇದ್ದರೆ ಬಿಜೆಪಿ ಮಾಜಿ ಸಂಸದರ ಕುಟುಂಬ ಪಡೆದ 49 ಎಕರೆ ಜಮೀನನ್ನು ರೈತರಿಗೆ ವಾಪಸ್ ಕೊಡಿಸಲಿ. ಸುಳ್ಳು ಆರೋಪ ಮಾಡುತ್ತಾ, ಜನರಲ್ಲಿ ಭಯ, ಆತಂಕ ಹುಟ್ಟುಹಾಕುವ ಕೆಲಸ ಮಾಡುವುದನ್ನು ಬಿಜೆಪಿಯವರು ಇನ್ನಾದರೂ ನಿಲ್ಲಿಸಲಿ ಎಂದು ದೂಡಾ ಅಧ್ಯಕ್ಷರು ಸಲಹೆ ನೀಡಿದರು.ಪಕ್ಷದ ಮುಖಂಡರಾದ ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಪಾಲಿಕೆ ಸದಸ್ಯ ಎ.ನಾಗರಾಜ, ಯುವ ಮುಖಂಡರಾದ ಶ್ರೀಕಾಂತ ಬಗರೆ, ಯುವರಾಜ, ರಾಜು ಭಂಡಾರಿ, ಮಹಿಳಾ ಘಟಕದ ಮುಖಂಡ ರಾದ ಮಂಜುಳಮ್ಮ, ಮಂಗಳಮ್ಮ, ಸಾವನ್ ಜೈನ್ ಇತರರು ಇದ್ದರು.
- - -ಕೋಟ್
ಬಡವರ ಮಕ್ಕಳನ್ನು ಮುಂದೆ ತಳ್ಳಿ, ಗಲಾಟೆ ಮಾಡಿಸಿ, ಅಂತಹವರ ಹೆಣದ ಮೇಲೆ ರಾಜಕೀಯ ಮಾಡುವವರು ಬಿಜೆಪಿಯವರು. ಅನಂತರ ನಾಟಕ ಮಾಡಿ, ₹5 ಲಕ್ಷ ನೀಡುತ್ತಾರೆ. ಮೃತ ಬಡವನ ಮನೆಗೆ ಬಿಜೆಪಿ ನಾಯಕರು ಬಂದು, ಹೋಗುತ್ತಾರೆ. ಇನ್ನಾದರೂ ಬಿಜೆಪಿ ಗೊಂದಲ ಎಬ್ಬಿಸುವುದನ್ನು ಬಿಡಬೇಕು- ದಿನೇಶ ಕೆ. ಶೆಟ್ಟಿ, ಅಧ್ಯಕ್ಷ, ದೂಡಾ
- - --13ಕೆಡಿವಿಜಿ13:
ದಾವಣಗೆರೆಯಲ್ಲಿ ಬುಧವಾರ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.